ನಮ್ಮ ಸಂಘಟನೆಯ ಬಗ್ಗೆ

ಕರ್ನಾಟಕ ರಕ್ಷಣಾ ವೇದಿಕೆಯ ಹುಟ್ಟು, ನಾಡಿನ ಕನ್ನಡ ಪರ ಹೋರಾಟಕ್ಕೆ, ಕನ್ನಡ ಪರ ಚಿಂತನೆಗೆ ಹೊಸ ತಿರುವು ನೀಡುವ ಮೂಲಕ ಆರಂಭವಾಯಿತು. ನಂತರ ಸಂಘಟನೆಯ ಬೆಳವಣಿಗೆ, ವ್ಯಾಪ್ತಿ, ವಿಸ್ತಾರ, ಕೆಚ್ಚು, ಧ್ಯೇಯ – ಉದ್ದೇಶ, ನೀತಿ-ನಿಲುವು, ಹೋರಾಟಗಳು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕುರಿತು ಕನ್ನಡಿಗರ ಆಷಾಕಿರಣವಾಗಲು ನಿಮ್ಮೆಲ್ಲರ ಕೊಡುಗೆ ಅಪಾರವಾದದ್ದು. ಬನ್ನಿ, ಈ ನಮ್ಮ ನಿಮ್ಮೆಲ್ಲರ ವೇದಿಕೆಯ ಹುಟ್ಟು ಮತ್ತು ಬೆಳವಣಿಗೆಯ ಇತಿಹಾಸವನ್ನೊಮ್ಮೆ ಅರಿಯೋಣ…

ಕನ್ನಡಿಗರ ಮೊಟ್ಟಮೊದಲ ಸಾಮ್ರಾಜ್ಯವಾದ ಕದಂಬ ಸಾಮ್ರಾಜ್ಯವು ಉದಿಸಿದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳೋಣ. ಅಂದು ಕರುನಾಡು ಪಲ್ಲವರ ಆಳ್ವಿಕೆಯಲ್ಲಿ ಸಿಲುಕಿತ್ತು. ಸಹಜವಾಗಿಯೇ ಆಳುವವರ ಭಾಷೆಗೆ, ಆಳುವವರ ಜನಾಂಗಕ್ಕೆ ಮಹತ್ವವಿತ್ತು. ಹೀಗಾಗಿ ಕನ್ನಡಿಗನನ್ನು ಅಪಮಾನಿಸುವ, ಕನ್ನಡಿಗನಿಗೆ ಯಾವುದೇ ಮನ್ನಣೆ ಹಾಗೂ ಮಹತ್ವ ನೀಡದೆ ಇರುವ ಘಟನೆಗಳು ನಿತ್ಯದ ಮಾತಾಗಿದ್ದವು. ಕನ್ನಡಿಗರ ಸ್ವಾಭಿಮಾನಕ್ಕೆ ತಗುಲಿದ ಪೆಟ್ಟಿನಿಂದ ಕೆರಳಿನಿಂತು, ತನ್ನವರನ್ನು ಸಂಘಟಿಸಿ ಮಯೂರವರ್ಮ ಹೋರಾಡಿದ ಫಲವಾಗಿ ಕನ್ನಡಿಗರ ಮೊದಲ ಸಾಮ್ರಾಜ್ಯ ಕದಂಬರ ಆಳ್ವಿಕೆಯಲ್ಲಿ ಟಿಸಿಲೊಡೆಯಿತು. ಇದೇ ಮುಂದೆ ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರಗಳಂತಹ ಮಹಾನ್ ಸಾಮ್ರಾಜ್ಯಗಳ ಹುಟ್ಟಿಗೆ, ವೈಭವಕ್ಕೆ, ಸಾಧನೆಗಳ ಸಾಕಾರಕ್ಕೆ ಮೂಲವಾಯಿತು.

ಇಂದು ಕೂಡಾ ಕನ್ನಡ ನಾಡಿನ ಪರಿಸ್ಥಿತಿ ಮಯೂರನ ಕಾಲಕ್ಕಿಂತಲೂ ಭಿನ್ನವಾಗಿಲ್ಲ. ಅನಿಯಂತ್ರಿತ ವಲಸೆಯಿಂದ ಹೆಚ್ಚಿರುವ ಪರಭಾಷಿಕರ ಸಂಖ್ಯೆ, ವಲಸಿಗರು ಮುಖ್ಯವಾಹಿನಿಯಿಂದ ಬೇರೆಯಾಗಿಯೇ ನಿಂತಿರುವುದು, ಪರಭಾಷಿಕರು ನಾಡಿನ ಉದ್ದಿಮೆ ಹಾಗೂ ಉದ್ಯೋಗಗಳಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿರುವುದು, ತಮ್ಮ ಸಂಸ್ಕೃತಿ ಹಾಗೂ ಭಾಷೆಗಳ ಶೂಲವನ್ನು ಕನ್ನಡಿಗರ ಮೇಲೆ ಪ್ರಯೋಗಿಸುತ್ತಿರುವುದು ನಮಗೆ ಕಾಣುತ್ತಿದೆ. ಎರಡು ಸಾವಿರಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ನುಡಿಯ ಅಸ್ತಿತ್ವಕ್ಕೇ ಬೆದರಿಕೆ ಹಾಕುವ ಮಟ್ಟಿಗೆ ಈ ಬೆಳವಣಿಗೆಗಳಾಗಿವೆ. ಕನ್ನಡಪರವಾದ ನಿಲುವನ್ನು ತೋರಲು ಮೀನಾಮೇಶ ಎಣಿಸುವ ರಾಜಕೀಯ ನಾಯಕರುಗಳಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಕನ್ನಡದ ಹಿತಕಾಯುವ ಮನಸ್ಥಿತಿ ಮರೆಯಾಗಿರುವುದು ಕಾಣಿಸುತ್ತಿದೆ. ಕೇಂದ್ರ ಸರ್ಕಾರದ ತಾರತಮ್ಯ ನೀತಿ ನೆಲ, ಜಲ, ಉದ್ಯೋಗ, ಸಂಪನ್ಮೂಲ ಹಂಚಿಕೆ, ಯೋಜನೆಗಳು, ಅಷ್ಟೇಕೆ . . ನೆರೆ, ಬರ ಪರಿಹಾರ ವಿತರಣೆಯಂತಹ ವಿಷಯಗಳಲ್ಲೂ ಅಂಗೈ ಹುಣ್ಣಿನಂತೆ ಕಾಣಿಸುತ್ತಿದೆ.

೧೯೯೯ರಲ್ಲಿ ಬೆಂಗಳೂರಿನಲ್ಲಿರುವ ಕೇಂದ್ರೀಯ ಲೆಕ್ಕಪರಿಶೋಧಕ ಕಛೇರಿಯಲ್ಲಿ ಖಾಲಿಯಿದ್ದ ೨೩ ಹುದ್ದೆಗಳಿಗೆ ಇದ್ದಕ್ಕಿದ್ದಂತೆ ಹೊರನಾಡಿನಿಂದ ಕರೆತಂದ ಅಭ್ಯರ್ಥಿಗಳ ನೇಮಕಾತಿ ನಡೆಯಿತು. ಇದರಿಂದ ಕೆರಳಿದ ಕನ್ನಡಿಗರು ಇಲ್ಲೇ ಅರ್ಹರಿದ್ದಾಗ ಏಕೆ ಹೊರನಾಡಿನಿಂದ ಜನರನ್ನು ಕರೆತರಲಾಯಿತು ಎನ್ನುವ ಪ್ರಶ್ನೆಯೊಂದಿಗೆ ಈ ನೇಮಕಾತಿಯನ್ನು ರದ್ದು ಮಾಡಿ ಹೊಸದಾಗಿ ಕನ್ನಡಿಗರಿಗೆ ಕೆಲಸ ಕೊಡುವಂತೆ ಒತ್ತಾಯಿಸಿದರು. ಮೊದಲಿಗೆ ಸಣ್ಣ ಪ್ರತಿಭಟನೆಯ ಕೂಗಿನೊಂದಿಗೆ ಆರಂಭವಾದ ಇದು ಸಂಪೂರ್ಣವಾದ ಜಯ ದೊರೆಯುವವರೆಗೆ ಮುಂದುವರೆಯಿತು. ಅಂದು ಕನ್ನಡ ರಕ್ಷಣಾ ವೇದಿಕೆಯೆಂದು ಶುರುವಾದ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆಯೆಂಬುದಾಗಿ ಸಮಗ್ರ ಕರ್ನಾಟಕದ ರಕ್ಷಣೆಯ ಹೊಣೆಗೆ ಭುಜ ಕೊಡಲು ಸಜ್ಜಾದ ಸಂಘಟನೆಯಾಗಿ ಮೈದಳೆಯಿತು.

ಅಂದಿನ ದಿವಸ ಬೆರಳೆಣಿಕೆಯಷ್ಟು ಕಾರ್ಯಕರ್ತರನ್ನು ಹೊಂದಿದ್ದರೂ ನಮ್ಮೊಳಗಿನ ಕಿಚ್ಚು ಮತ್ತು ಕೆಚ್ಚುಗಳಿಗೇನೂ ಕೊರತೆಯಿರಲಿಲ್ಲ. ಕನ್ನಡನಾಡಿನಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಮತ್ತೆ ಪ್ರತಿಷ್ಠಾಪಿಸುವ ದಿಟ್ಟವಾದ ಪಣತೊಟ್ಟು ಹೆಜ್ಜೆಹೆಜ್ಜೆಯಾಗಿ ಸಂಘಟನೆ ಬೆಳೆಯತೊಡಗಿತು. ಕನ್ನಡಪರ ಸಂಘಟನೆಗಳು ಮೊದಲಬಾರಿಗೆ ರಾಜ್ಯದ ಮೂಲೆಮೂಲೆಗಳಲ್ಲೂ ಶಾಖೆಗಳನ್ನು ಆರಂಭಿಸುವ ಸಂಪ್ರದಾಯವನ್ನು ಹುಟ್ಟುಹಾಕಿದ್ದೂ, ಕನ್ನಡದ ಹಳದಿ ಕೆಂಪು ಬಾವುಟವನ್ನು ಕನ್ನಡಿಗರ ಹೆಗಲ ಮೇಲಿನ ಹೆಮ್ಮೆಯ ಕುರುಹಾಗಿ ಧರಿಸುವ ಸಂಪ್ರದಾಯವನ್ನು ಹುಟ್ಟುಹಾಕಿದ್ದೂ ಕರ್ನಾಟಕ ರಕ್ಷಣಾ ವೇದಿಕೆಯೇ. ಹೀಗೆ ತನ್ನ ಹೊಸತನದ ಯೋಚನೆ ಮತ್ತು ಯೋಜನೆಗಳಿಂದ ಕನ್ನಡಿಗರನ್ನು ಒಗ್ಗೂಡಿಸುತ್ತಾ, ಸಂಘಟನೆಯಾಗಿ ರಾಜ್ಯವ್ಯಾಪಿ ವಿಸ್ತರಿಸುತ್ತಾ ಬೆಳೆದು ಬಂದು ಇಂದಿಗೆ ಕರ್ನಾಟಕದಲ್ಲಿ ಕನ್ನಡದ ಹೊಸಚಿಂತನೆಯ ಹೊಸದಾದ ಚಳವಳಿಯೊಂದನ್ನೇ ಕರ್ನಾಟಕ ರಕ್ಷಣಾ ವೇದಿಕೆ ಹುಟ್ಟು ಹಾಕಿದೆ. ಕನ್ನಡದ ಕಟ್ಟಾಳುಗಳ ಪಡೆಯಾಗಿ ಶ್ರೀ ಟಿ.ಎ. ನಾರಾಯಣ ಗೌಡರ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ನಮ್ಮ ಸಂಘಟನೆ ಇಂದು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆ, ನಗರ, ಪಟ್ಟಣ, ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲೂ ಕನ್ನಡದ ಯುವಕರ ಕಟ್ಟಾಳುಗಳ ಪಡೆಯನ್ನು ಕಟ್ಟಿದೆ. ಸುಮಾರು ೨೦೦೦೦ಕ್ಕೂ ಮೀರಿದ ಶಾಖೆಗಳು, ೫೦ ಲಕ್ಷಕ್ಕೂ ಮೀರಿದ ಕಾರ್ಯಕರ್ತರನ್ನು ಹೊಂದಿದೆ. ಕರ್ನಾಟಕ ರಕ್ಷಣಾ ವೇದಿಕೆಯ ನಿಜ ಶಕ್ತಿಯೇ ಅದರ ಕಾರ್ಯಕರ್ತರು. ನಮ್ಮ ಸಂಘಟನೆಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು, ಉದ್ದಿಮೆದಾರರೂ, ರೈತರು, ವೃತ್ತಿಪರರೂ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರು ತೊಡಗಿಕೊಂಡಿರುವುದು ಈ ಸಂಘಟನೆಯ ಶಕ್ತಿಯನ್ನು ಇಮ್ಮಡಿಗೊಳಿಸಿದೆ.

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷ ವಾಕ್ಯದೊಂದಿಗೆ ಮೈದಳೆದ ಕರ್ನಾಟಕ ರಕ್ಷಣಾ ವೇದಿಕೆಯ ಮಹಾದಂಡನಾಯಕರು ಶ್ರೀ. ಟಿ. ಎ. ನಾರಾಯಣಗೌಡರು. ಸಂಘಟನೆಯ ರಾಜ್ಯಾಧ್ಯಕ್ಷರಾದ ಇವರ ಹುಟ್ಟೂರು ಹಾಸನ ಜಿಲ್ಲೆಯ ಅರಸೀಕೆರೆ ಸಮೀಪದ ಮಾಲೇಕಲ್ ತಿರುಪತಿ. ಚಿಕ್ಕಂದಿನಿಂದಲೇ ಕನ್ನಡದ ಬಗ್ಗೆ ಕಾಳಜಿ ಹೊಂದಿರುವ ಇವರು ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಕನ್ನಡಕ್ಕಾಗಿ ದನಿ ಎತ್ತಿ ಪೊಲೀಸ್ ಬೆತ್ತದ ರುಚಿ ಕಂಡವರು. ಅನೇಕ ವರ್ಷಗಳ ಕಾಲ ಮುಂಬೈಯಲ್ಲಿದ್ದ ಇವರು ಅಲ್ಲಿ ಚಾಲುಕ್ಯ ಕನ್ನಡಕೂಟವನ್ನು ಕಟ್ಟಿದರು. ತೊಂಬತ್ತರ ದಶಕದಲ್ಲಿ ಬೆಂಗಳೂರಿಗೆ ಬಂದ ಇವರು ಇಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡರೂ, ಪುಟಿಯುತ್ತಿದ್ದ ಕನ್ನಡಾಭಿಮಾನವು ಚಳವಳಿಗಾರರ ಸನಿಹಕ್ಕೆ ಎಳೆದು ತಂದಿತು. ದಿಕ್ಕುತಪ್ಪುತ್ತಿದ್ದ ಕನ್ನಡ ಚಳವಳಿಗಾರರು ಕನ್ನಡಪರ ಹೋರಾಟವನ್ನು ಎಮ್ಮೆ ಸವಾರಿ, ತಮಟೆ ಚಳವಳಿ, ಫೋಟೋ ಚಳವಳಿಗೆ ಸೀಮಿತ ಮಾಡಿಕೊಂಡು ಸ್ವಾರ್ಥಕ್ಕಾಗಿ ಬಳಸುತ್ತಿರುವುದನ್ನು ಕಂಡು ಸಂಕಟಪಟ್ಟು ಇಂತಹ ಬೂಟಾಟಿಕೆಗಳನ್ನು ಮೀರಿದ, ನಾಡುನುಡಿಗಾಗಿ ಜೀವ ಕೊಡಲೂ ಸನ್ನದ್ಧವಾದ ಪಡೆಯೊಂದನ್ನು ಕಟ್ಟಲು ಮುಂದಾದರು. ಹಾಗೆ ಹುಟ್ಟಿದ ಪಡೆಯೇ ಕರ್ನಾಟಕ ರಕ್ಷಣಾ ವೇದಿಕೆ. ಗೌಡರು ಸುತ್ತದ ಊರಿಲ್ಲ, ನಡೆಸದ ಹೋರಾಟವಿಲ್ಲ. ಅಂದಿನಿಂದ ಇಂದಿನವರೆಗೂ ತಮ್ಮ ನೇರ ನಡೆ ನುಡಿ, ಪ್ರಾಮಾಣಿಕತೆ, ಸಜ್ಜನಿಕೆ, ಕಾರ್ಯಕರ್ತರ ಬಗ್ಗೆ ತೋರುವ ಕಾಳಜಿ, ಪ್ರೀತಿಗಳಿಂದಾಗಿ ನಮ್ಮೆಲ್ಲರ ಮನ ಗೆದ್ದಿದ್ದಾರೆ. ನಾಡಿನ ಭರವಸೆಯ ನಾಯಕರಾಗಿದ್ದಾರೆ. ತಮ್ಮ ಬದುಕನ್ನು ನಾಡುನುಡಿಗಾಗಿ ಮುಡಿಪಾಗಿಟ್ಟಿದ್ದಾರೆ. ಹೋರಾಟದ ಹಾದಿಯಲ್ಲಿ ಲಾಟಿ ಬೂಟಿನೇಟು, ಜೈಲುವಾಸಗಳನ್ನು ಅನುಭವಿಸಿದ್ದಾರೆ. ಕನ್ನಡ ಚಳವಳಿಯೆನ್ನುವುದು ಒಂದು ಗಂಭೀರ ಚಿಂತನೆಯ ದೂರದೃಷ್ಟಿಯ, ನಾಡು ಕಟ್ಟುವ ಪ್ರಾಮಾಣಿಕ ಕಾಯಕ’ ಎಂಬುದಾಗಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸಂಘಟನೆಯ ಪ್ರತಿಯೊಬ್ಬ ಪದಾಧಿಕಾರಿಯೂ ನಾಯಕನಾಗಬೇಕೆಂದು ಬಯಸುವ ಗೌಡರು ಅಂತಹ ಅವಕಾಶಗಳನ್ನು ಸದಾ ಒದಗಿಸುತ್ತಲೇ ಬಂದಿದ್ದಾರೆ. ನಮ್ಮೆಲ್ಲ ಹೋರಾಟಗಾರರಿಗೂ ಸ್ಪೂರ್ತಿಯ ಚಿಲುಮೆಯಾಗಿರುವ ಶ್ರೀ. ನಾರಾಯಣಗೌಡರು ಅಪಾರವಾದ ಅಭಿಮಾನಿ ಬಳಗ ಹೊಂದಿದ್ದು ನಮ್ಮ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರ ಪಾಲಿನ ಹಿರಿಯಣ್ಣನಾಗಿದ್ದಾರೆ. ಇವರು ನಾಡಿನ ನಾಳಿನ ಆಶಾಕಿರಣವಾಗಿದ್ದಾರೆ.

ನಮ್ಮ ಸಂಘಟನೆ ನಿರಂತರವಾಗಿ ಕರ್ನಾಟಕದ ವಿವಿಧ ವಿಷಯಗಳಲ್ಲಿ ತನ್ನನ್ನ ತೊಡಗಿಸಿಕೊಂಡು ನಾಡಪರವಾದ ಹೋರಾಟಗಳನ್ನ ನಡೆಸಿಕೊಂಡು ಬಂದಿದೆ. ಬೆಳಗಾವಿ ಗಡಿ ಸಮಸ್ಯೆ, ಕೃಷ್ಣ ನದಿ ನೀರು ಹಂಚಿಕೆ, ಕಾವೇರಿ ಜಲ ವಿವಾದ, ಹೊಗೇನಕಲ್, ಮಹದಾಯಿ ಯೋಜನೆ ಇತ್ಯಾದಿ. ಹಾಗೆಯೇ ಸರೋಜಿನಿ ಮಹಿಷಿ ವರದಿ ಅನುಷ್ಠಾನ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ, ಆಡಳಿತದಲ್ಲಿ ಕನ್ನಡ ಅನುಷ್ಠಾನ, ಕೇಂದ್ರ ಸರಕಾರದ ತಾರತಮ್ಯ, ರೈಲ್ವೆ ನೇಮಕಾತಿಯಲ್ಲಿ ನಡೆದ ಅನ್ಯಾಯದ ವಿರುಧ್ಧ ಹೋರಾಟ, ಕನ್ನಡ ಚಲನಚಿತ್ರ ರಂಗದ ಸಮಸ್ಯೆಗಳ ಕುರಿತು ಹೋರಾಟ, ಹಿಂದಿ ಹೇರಿಕೆಯ ವಿರುದ್ಧದ ಹೋರಾಟ ಮತ್ತು ಕನ್ನಡಕ್ಕೆ ಭಾರತದ ಒಕ್ಕೂಟದ ಅಧಿಕೃತ ಆಡಳಿತ ಭಾಷೆಯ ಸಮಾನ ಸ್ಥಾನಮಾನಕ್ಕಾಗಿ ಹೋರಾಟ.. ಹೀಗೆ ನಾಡಿನ ಎಲ್ಲಾ ಸ್ಥರಗಳಲ್ಲೂ ಹೋರಾಟಗಳನ್ನ ನಡೆಸಿ ಯಶಸ್ಸನ್ನು ಕಂಡಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಮತ್ತು ಅನಿಯಂತ್ರಿತ ವಲಸೆಯ ವಿರುಧ್ಧ ಅರ್ಥಪೂರ್ಣ ಹೋರಾಟಗಳನ್ನು ನಮ್ಮ ಸಂಘಟನೆ ನಡೆಸುತ್ತಾ ಬಂದಿದೆ.

ಸಮೃದ್ಧವಾದ ನಾಡನ್ನು ಕಟ್ಟಲು ಕಟಿಬದ್ಧವಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ಈ ಕನ್ನಡದ ಕೈಂಕರ್ಯದಲ್ಲಿ ನಾಡಭಕ್ತ ಕನ್ನಡಿಗರೆಲ್ಲ ಕೈಜೋಡಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.