ಕರ್ನಾಟಕ ರಕ್ಷಣಾ ವೇದಿಕೆಯ ಹುಟ್ಟು, ನಾಡಿನ ಕನ್ನಡ ಪರ ಹೋರಾಟಕ್ಕೆ, ಕನ್ನಡ ಪರ ಚಿಂತನೆಗೆ ಹೊಸ ತಿರುವು ನೀಡಿದ ಮಹತ್ವದ ಘಟನೆಯಾಗಿದೆ ಎಂದರೆ ಅತಿಶಯವಾಗಲಾರದು. ಸಂಘಟನೆಯ ಹುಟ್ಟು, ಬೆಳವಣಿಗೆ, ವ್ಯಾಪ್ತಿ, ವಿಸ್ತಾರ, ಕೆಚ್ಚು, ಧ್ಯೇಯ - ಉದ್ದೇಶ, ನೀತಿ-ನಿಲುವು, ಹೋರಾಟಗಳು . . . ಇವೆಲ್ಲವೂ ಕುತೂಹಲಕಾರಿಯಾಗಿಯೂ, ಕನ್ನಡಿಗರ ಭರವಸೆಗೆ ಕಾರಣವಾಗಿಯೂ ಇವೆ.
ಕನ್ನಡಿಗರ ಮೊಟ್ಟಮೊದಲ ಸಾಮ್ರಾಜ್ಯವಾದ ಕದಂಬ ಸಾಮ್ರಾಜ್ಯವು ಉದಿಸಿದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳೋಣ. ಅಂದು ಕರುನಾಡು ಪಲ್ಲವರ ಆಳ್ವಿಕೆಯಲ್ಲಿ ಸಿಲುಕಿತ್ತು. ಸಹಜವಾಗಿಯೇ ಆಳುವವರ ಭಾಷೆಗೆ, ಆಳುವವರ ಜನಾಂಗಕ್ಕೆ ಮಹತ್ವವಿತ್ತು. ಹೀಗಾಗಿ ಕನ್ನಡಿಗನನ್ನು ಅಪಮಾನಿಸುವ, ಕನ್ನಡಿಗನಿಗೆ ಯಾವುದೇ ಮನ್ನಣೆ ಹಾಗೂ ಮಹತ್ವ ನೀಡದೆ ಇರುವ ಘಟನೆಗಳು ನಿತ್ಯದ ಮಾತಾಗಿದ್ದವು. ಕನ್ನಡಿಗರ ಸ್ವಾಭಿಮಾನಕ್ಕೆ ತಗುಲಿದ ಪೆಟ್ಟಿನಿಂದ ಕೆರಳಿನಿಂತು, ತನ್ನವರನ್ನು ಸಂಘಟಿಸಿ ಮಯೂರವರ್ಮ ಹೋರಾಡಿದ ಫಲವಾಗಿ ಕನ್ನಡಿಗರ ಮೊದಲ ಸಾಮ್ರಾಜ್ಯ ಕದಂಬರ ಆಳ್ವಿಕೆಯಲ್ಲಿ ಟಿಸಿಲೊಡೆಯಿತು. ಇದೇ ಮುಂದೆ ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರಗಳಂತಹ ಮಹಾನ್ ಸಾಮ್ರಾಜ್ಯಗಳ ಹುಟ್ಟಿಗೆ, ವೈಭವಕ್ಕೆ, ಸಾಧನೆಗಳ ಸಾಕಾರಕ್ಕೆ ಮೂಲವಾಯಿತು.
ಇಂದು ಕೂಡಾ ಕನ್ನಡ ನಾಡಿನ ಪರಿಸ್ಥಿತಿ ಮಯೂರನ ಕಾಲಕ್ಕಿಂತಲೂ ಭಿನ್ನವಾಗಿಲ್ಲ. ಅನಿಯಂತ್ರಿತ ವಲಸೆಯಿಂದ ಹೆಚ್ಚಿರುವ ಪರಭಾಷಿಕರ ಸಂಖ್ಯೆ, ವಲಸಿಗರು ಮುಖ್ಯವಾಹಿನಿಯಿಂದ ಬೇರೆಯಾಗಿಯೇ ನಿಂತಿರುವುದು, ಪರಭಾಷಿಕರು ನಾಡಿನ ಉದ್ದಿಮೆ ಹಾಗೂ ಉದ್ಯೋಗಗಳಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿರುವುದು, ತಮ್ಮ ಸಂಸ್ಕೃತಿ ಹಾಗೂ ಭಾಷೆಗಳ ಶೂಲವನ್ನು ಕನ್ನಡಿಗರ ಮೇಲೆ ಪ್ರಯೋಗಿಸುತ್ತಿರುವುದು ನಮಗೆ ಕಾಣುತ್ತಿದೆ. ಎರಡು ಸಾವಿರಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ನುಡಿಯ ಅಸ್ತಿತ್ವಕ್ಕೇ ಬೆದರಿಕೆ ಹಾಕುವ ಮಟ್ಟಿಗೆ ಈ ಬೆಳವಣಿಗೆಗಳಾಗಿವೆ. ಕನ್ನಡಪರವಾದ ನಿಲುವನ್ನು ತೋರಲು ಮೀನಾಮೇಶ ಎಣಿಸುವ ರಾಜಕೀಯ ನಾಯಕರುಗಳಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಕನ್ನಡದ ಹಿತಕಾಯುವ ಮನಸ್ಥಿತಿ ಮರೆಯಾಗಿರುವುದು ಕಾಣಿಸುತ್ತಿದೆ. ಕೇಂದ್ರ ಸರ್ಕಾರದ ತಾರತಮ್ಯ ನೀತಿ ನೆಲ, ಜಲ, ಉದ್ಯೋಗ, ಸಂಪನ್ಮೂಲ ಹಂಚಿಕೆ, ಯೋಜನೆಗಳು, ಅಷ್ಟೇಕೆ . . ನೆರೆ, ಬರ ಪರಿಹಾರ ವಿತರಣೆಯಂತಹ ವಿಷಯಗಳಲ್ಲೂ ಅಂಗೈ ಹುಣ್ಣಿನಂತೆ ಕಾಣಿಸುತ್ತಿದೆ.
ಇಂತಹ ಸನ್ನಿವೇಶಕ್ಕೆ ಕಳಸವಿಟ್ಟಂತೆ ಬೆಂಗಳೂರಿನ ಲೆಕ್ಕ ಪರಿಶೋಧಕರ (ಏಜೀಸ್) ಕಛೇರಿಯಲ್ಲಿ ೨೩ ಜನ ಪರಭಾಷಿಕರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲಾಯಿತು. ಆಗ ಉಗ್ರ ಹೋರಾಟ ನಡೆಸಿ ಯಶಸ್ಸು ದೊರೆತ ನಂತರ ಸಂಘಟನೆಯ ಮಹತ್ವ ಮನಗೊಂಡು ಕರ್ನಾಟಕ ರಕ್ಷಣಾ ವೇದಿಕೆ ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಕನ್ನಡ ಪರ ಸಂಘಟನೆ ಜನ್ಮ ತಾಳಿತು. ನಾಡಿನೆಲ್ಲಡೆ ಇದ್ದ ಈ ಸಂಕಷ್ಟದ ಸಮಯದಲ್ಲಿ ಕನ್ನಡಿಗನಲ್ಲಿ ಸ್ವಾಭಿಮಾನದ ಕಿಡಿ ಹಚ್ಚಿ, ಭರವಸೆಯ ದೊಂದಿ ಹಿಡಿದು ಕನ್ನಡ - ಕನ್ನಡಿಗ - ಕರ್ನಾಟಕಗಳ ಮಹೋನ್ನತಿಯ ಗುರಿಯೊಂದಿಗೆ ೧೯೯೮ ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜನಿಸಿತು.
ಕನ್ನಡದ ಕಟ್ಟಾಳುಗಳ ಪಡೆಯಾಗಿ ಶ್ರೀ ನಾರಾಯಣ ಗೌಡರ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಈ ಸಂಘಟನೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಶಾಖೆಗಳನ್ನು ಹೊಂದಿದೆ. ಒಟ್ಟು ಹದಿನಾರು ಲಕ್ಷಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ಮೂಡಿಸುತ್ತಾ, ಗಡಿ, ನುಡಿ ಕಾಯುವಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತಿದೆ.
ಸಮೃದ್ಧವಾದ ನಾಡನ್ನು ಕಟ್ಟಲು ಕಟಿಬದ್ಧವಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ಈ ಕನ್ನಡದ ಕೈಂಕರ್ಯದಲ್ಲಿ ನಾಡಭಕ್ತ ಕನ್ನಡಿಗರೆಲ್ಲ ಕೈಜೋಡಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ |