Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಕರ್ನಾಟಕ ರಕ್ಷಣಾ ವೇದಿಕೆ

ಸಂಘಟನೆ

ಕರ್ನಾಟಕ ರಕ್ಷಣಾ ವೇದಿಕೆಯ ಹುಟ್ಟು, ನಾಡಿನ ಕನ್ನಡ ಪರ ಹೋರಾಟಕ್ಕೆ, ಕನ್ನಡ ಪರ ಚಿಂತನೆಗೆ ಹೊಸ ತಿರುವು ನೀಡಿದ ಮಹತ್ವದ ಘಟನೆಯಾಗಿದೆ ಎಂದರೆ ಅತಿಶಯವಾಗಲಾರದು. ಸಂಘಟನೆಯ ಹುಟ್ಟು, ಬೆಳವಣಿಗೆ, ವ್ಯಾಪ್ತಿ, ವಿಸ್ತಾರ, ಕೆಚ್ಚು, ಧ್ಯೇಯ - ಉದ್ದೇಶ, ನೀತಿ-ನಿಲುವು, ಹೋರಾಟಗಳು . . . ಇವೆಲ್ಲವೂ ಕುತೂಹಲಕಾರಿಯಾಗಿಯೂ, ಕನ್ನಡಿಗರ ಭರವಸೆಗೆ ಕಾರಣವಾಗಿಯೂ ಇವೆ.

ಕನ್ನಡಿಗರ ಮೊಟ್ಟಮೊದಲ ಸಾಮ್ರಾಜ್ಯವಾದ ಕದಂಬ ಸಾಮ್ರಾಜ್ಯವು ಉದಿಸಿದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳೋಣ. ಅಂದು ಕರುನಾಡು ಪಲ್ಲವರ ಆಳ್ವಿಕೆಯಲ್ಲಿ ಸಿಲುಕಿತ್ತು. ಸಹಜವಾಗಿಯೇ ಆಳುವವರ ಭಾಷೆಗೆ, ಆಳುವವರ ಜನಾಂಗಕ್ಕೆ ಮಹತ್ವವಿತ್ತು. ಹೀಗಾಗಿ ಕನ್ನಡಿಗನನ್ನು ಅಪಮಾನಿಸುವ, ಕನ್ನಡಿಗನಿಗೆ ಯಾವುದೇ ಮನ್ನಣೆ ಹಾಗೂ ಮಹತ್ವ ನೀಡದೆ ಇರುವ ಘಟನೆಗಳು ನಿತ್ಯದ ಮಾತಾಗಿದ್ದವು. ಕನ್ನಡಿಗರ ಸ್ವಾಭಿಮಾನಕ್ಕೆ ತಗುಲಿದ ಪೆಟ್ಟಿನಿಂದ ಕೆರಳಿನಿಂತು, ತನ್ನವರನ್ನು ಸಂಘಟಿಸಿ ಮಯೂರವರ್ಮ ಹೋರಾಡಿದ ಫಲವಾಗಿ ಕನ್ನಡಿಗರ ಮೊದಲ ಸಾಮ್ರಾಜ್ಯ ಕದಂಬರ ಆಳ್ವಿಕೆಯಲ್ಲಿ ಟಿಸಿಲೊಡೆಯಿತು. ಇದೇ ಮುಂದೆ ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರಗಳಂತಹ ಮಹಾನ್ ಸಾಮ್ರಾಜ್ಯಗಳ ಹುಟ್ಟಿಗೆ, ವೈಭವಕ್ಕೆ, ಸಾಧನೆಗಳ ಸಾಕಾರಕ್ಕೆ ಮೂಲವಾಯಿತು.

ಇಂದು ಕೂಡಾ ಕನ್ನಡ ನಾಡಿನ ಪರಿಸ್ಥಿತಿ ಮಯೂರನ ಕಾಲಕ್ಕಿಂತಲೂ ಭಿನ್ನವಾಗಿಲ್ಲ. ಅನಿಯಂತ್ರಿತ ವಲಸೆಯಿಂದ ಹೆಚ್ಚಿರುವ ಪರಭಾಷಿಕರ ಸಂಖ್ಯೆ, ವಲಸಿಗರು ಮುಖ್ಯವಾಹಿನಿಯಿಂದ ಬೇರೆಯಾಗಿಯೇ ನಿಂತಿರುವುದು, ಪರಭಾಷಿಕರು ನಾಡಿನ ಉದ್ದಿಮೆ ಹಾಗೂ ಉದ್ಯೋಗಗಳಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿರುವುದು, ತಮ್ಮ ಸಂಸ್ಕೃತಿ ಹಾಗೂ ಭಾಷೆಗಳ ಶೂಲವನ್ನು ಕನ್ನಡಿಗರ ಮೇಲೆ ಪ್ರಯೋಗಿಸುತ್ತಿರುವುದು ನಮಗೆ ಕಾಣುತ್ತಿದೆ. ಎರಡು ಸಾವಿರಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ನುಡಿಯ ಅಸ್ತಿತ್ವಕ್ಕೇ ಬೆದರಿಕೆ ಹಾಕುವ ಮಟ್ಟಿಗೆ ಈ ಬೆಳವಣಿಗೆಗಳಾಗಿವೆ. ಕನ್ನಡಪರವಾದ ನಿಲುವನ್ನು ತೋರಲು ಮೀನಾಮೇಶ ಎಣಿಸುವ ರಾಜಕೀಯ ನಾಯಕರುಗಳಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಕನ್ನಡದ ಹಿತಕಾಯುವ ಮನಸ್ಥಿತಿ ಮರೆಯಾಗಿರುವುದು ಕಾಣಿಸುತ್ತಿದೆ. ಕೇಂದ್ರ ಸರ್ಕಾರದ ತಾರತಮ್ಯ ನೀತಿ ನೆಲ, ಜಲ, ಉದ್ಯೋಗ, ಸಂಪನ್ಮೂಲ ಹಂಚಿಕೆ, ಯೋಜನೆಗಳು, ಅಷ್ಟೇಕೆ . . ನೆರೆ, ಬರ ಪರಿಹಾರ ವಿತರಣೆಯಂತಹ ವಿಷಯಗಳಲ್ಲೂ ಅಂಗೈ ಹುಣ್ಣಿನಂತೆ ಕಾಣಿಸುತ್ತಿದೆ.

ಇಂತಹ ಸನ್ನಿವೇಶಕ್ಕೆ ಕಳಸವಿಟ್ಟಂತೆ ಬೆಂಗಳೂರಿನ ಲೆಕ್ಕ ಪರಿಶೋಧಕರ (ಏಜೀಸ್) ಕಛೇರಿಯಲ್ಲಿ ೨೩ ಜನ ಪರಭಾಷಿಕರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲಾಯಿತು. ಆಗ ಉಗ್ರ ಹೋರಾಟ ನಡೆಸಿ ಯಶಸ್ಸು ದೊರೆತ ನಂತರ ಸಂಘಟನೆಯ ಮಹತ್ವ ಮನಗೊಂಡು ಕರ್ನಾಟಕ ರಕ್ಷಣಾ ವೇದಿಕೆ ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಕನ್ನಡ ಪರ ಸಂಘಟನೆ ಜನ್ಮ ತಾಳಿತು. ನಾಡಿನೆಲ್ಲಡೆ ಇದ್ದ ಈ ಸಂಕಷ್ಟದ ಸಮಯದಲ್ಲಿ ಕನ್ನಡಿಗನಲ್ಲಿ ಸ್ವಾಭಿಮಾನದ ಕಿಡಿ ಹಚ್ಚಿ, ಭರವಸೆಯ ದೊಂದಿ ಹಿಡಿದು ಕನ್ನಡ - ಕನ್ನಡಿಗ - ಕರ್ನಾಟಕಗಳ ಮಹೋನ್ನತಿಯ ಗುರಿಯೊಂದಿಗೆ ೧೯೯೮ ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜನಿಸಿತು.

ಕನ್ನಡದ ಕಟ್ಟಾಳುಗಳ ಪಡೆಯಾಗಿ ಶ್ರೀ ನಾರಾಯಣ ಗೌಡರ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ನಮ್ಮ ಸಂಘಟನೆ ಇಂದು ತನ್ನ ವ್ಯಾಪ್ತಿ ಮತ್ತು ವಿಸ್ತಾರವನ್ನು ನಾಡಿನ ಉದ್ದ ಅಗಲಕ್ಕೂ ಹೆಚ್ಚಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಕರ್ನಾಟಕದ ಜನತೆಗೆ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿಕೊಂಡು ಬಂದಿರುವ ಮತ್ತು ನಡೆಸುತ್ತಿರುವ ಹೋರಾಟಗಳ ಬಗ್ಗೆ ಇರುವ ಅಚಲ ನಂಬಿಕೆ. ಇಂತಹ ನಂಬಿಕೆಯಿಂದಲೇ  ಇವತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕುಟುಂಬದಲ್ಲಿ ಸುಮಾರು 50 ಲಕ್ಷ ನೊಂದಾಯಿತ ಸದಸ್ಯರಿದ್ದಾರೆ.

ನಮ್ಮ ಸಂಘಟನೆ ಕಳೆದ ೧೦ ವರ್ಷಗಳಿಂದ ಕರ್ನಾಟಕದ ವಿವಿಧ ವಿಷಯಗಳಲ್ಲಿ ತನ್ನನ್ನ ತೊಡಗಿಸಿಕೊಂಡು ನಾಡ  ಪರವಾದ  ಹೋರಾಟಗಳನ್ನ ನಡೆಸಿಕೊಂಡು ಬಂದಿದೆ. ಬೆಳಗಾವಿ ಗಡಿ ಸಮಸ್ಯೆ, ಕೃಷ್ಣ ನದಿ ನೀರು ಹಂಚಿಕೆ, ಕಾವೇರಿ ಜಲ ವಿವಾದ, ಹೊಗೇನಕಲ್, ಮಹದಾಯಿ ಯೋಜನೆ ಇತ್ಯಾದಿ. ಹಾಗೆಯೇ ಸರೋಜಿನಿ ಮಹಿಷಿ ವರದಿ ಅನುಷ್ಠಾನ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ, ಆಡಳಿತದಲ್ಲಿ ಕನ್ನಡ ಅನುಷ್ಠಾನ, ಕೇಂದ್ರ ಸರಕಾರದ ತಾರತಮ್ಯ, ಹಿಂದಿ ಹೇರಿಕೆ ,  ರೈಲ್ವೆ ನೇಮಕಾತಿಯಲ್ಲಿ ನಡೆದ ಅನ್ಯಾಯದ ವಿರುಧ್ಧ ಹೋರಾಟ, ಕನ್ನಡ ಚಲನಚಿತ್ರ ರಂಗದ ಸಮಸ್ಯೆಗಳ ಕುರಿತು ಹೋರಾಟ. ಹೀಗೆ ನಾಡಿನ ಎಲ್ಲಾ ಸ್ಥರಗಳಲ್ಲೂ ಹೋರಾಟಗಳನ್ನ ನಡೆಸಿ ಯಶಸ್ಸನ್ನು ಕಂಡಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಮತ್ತು ಅನಿಯಂತ್ರಿತ ವಲಸೆಯ ವಿರುಧ್ಧ ಅರ್ಥಪೂರ್ಣ ಹೋರಾಟಗಳನ್ನು ನಮ್ಮ ಸಂಘಟನೆ ನಡೆಸುತ್ತಾ ಬಂದಿದೆ.
 
ಕರ್ನಾಟಕ ರಕ್ಷಣಾ ವೇದಿಕೆ ಇಂದು ಕರ್ನಾಟಕದ 29 ಜಿಲ್ಲೆಗಳಲ್ಲಿ ಒಟ್ಟು 20,000 ಶಾಖೆಗಳನ್ನು ಹೊಂದಿದೆ. ಕಳೆದ ಒಂದು ದಶಕದ ಹೋರಾಟದ ದೆಸಯಿಂದ ಇಂದು ನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಒಂದು ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ. ಜಿಲ್ಲೆಯ ಪ್ರತಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇಂದು ಶಾಖೆಗಳನ್ನು ಹೊಂದಿದೆ. ಸಮಾಜದ ವಿವಿಧ ವರ್ಗಗಳ ಏಳಿಗೆಗೆ ನೆರವಾಗಲು ವಿವಿಧ ಘಟಕಗಳನ್ನ ಹೊಂದಿದೆ. ಉದಾ : ಆಟೋ ಘಟಕ, ಕಾರ್ಮಿಕ ಘಟಕ, ರೈತ ಘಟಕ, ಕನ್ನಡ ನಾಡು ನುಡಿ ಬಿಂಬಿಸುವ ಸಾಂಸ್ಕೃತಿಕ ಘಟಕ ಇತ್ಯಾದಿ.. ಹಾಗೆಯೇ ಮಹಿಳೆಯರ ಏಳಿಗೆಗಾಗಿ ಪ್ರತ್ಯೇಕವಾದ ಮಾಹಿಳಾ ಘಟಕವನ್ನ ಸಹ ಹೊಂದಿದೆ.

ಸಮೃದ್ಧವಾದ ನಾಡನ್ನು ಕಟ್ಟಲು ಕಟಿಬದ್ಧವಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ಈ ಕನ್ನಡದ ಕೈಂಕರ್ಯದಲ್ಲಿ ನಾಡಭಕ್ತ ಕನ್ನಡಿಗರೆಲ್ಲ ಕೈಜೋಡಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

 

ಸಂಘಟನೆ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ