Karnataka Rashana Vedike
Kuvempu
ico_adhyaksharalEkhaniyinda3.jpg
kvrblog.jpg
Sangatane.jpg

ನೆರೆಯಿಂದ ತತ್ತರಿಸಿ ಹೋದ ಉತ್ತರ ಕರ್ನಾಟಕದ ಜನತೆಗೆ ನೆರವು

ಕಾರ್ಯಕ್ರಮಗಳು
ಉತ್ತರ ಕರ್ನಾಟಕದ ನೆರೆಪೀಡಿತರಿಗೆ ಪರಿಹಾರ - ವಿತರಣೆ  

ಕರ್ನಾಟಕದ ಇತಿಹಾಸದಲ್ಲಿ ಕಂಡರಿಯದ ಧಾರಾಕಾರ ಮಳೆ ಮತ್ತು ಉಕ್ಕಿ ಹರಿದ ನದಿಗಳಿಂದಾಗಿ ಉತ್ತರ ಕರ್ನಾಟಕದ ಜನರು ತತ್ತರಿಸಿ ಹೋಗಿದ್ದಾರೆ. 221 ಕ್ಕೂ ಹೆಚ್ಚು ಜನರು ಸತ್ತು, ಕೋಟ್ಯಾಂತರ ರೂಪಾಯಿಗಳ ನಷ್ಟವಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಸಂಕಷ್ಟವನ್ನು ಮನಗಂಡು ಅದಕ್ಕೆ ಮಿಡಿದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಶ್ರೀ.ಟಿ.ಏ.ನಾರಾಯಣಗೌಡರ ಮುಂದಾಳ್ತನದಲ್ಲಿ, ತೊಂದರೆಗೀಡಾದ ಆಯಾ ಜಿಲ್ಲೆಯಲ್ಲಿರುವ ನಮ್ಮ ಶಾಖೆಗಳ ಕಾರ್ಯಕರ್ತರೊಂದಿಗೆ, ದಿ.10.10.2009 ರಿಂದ 14.10.2009 ರವರೆಗೆ ಗದಗ, ಕೊಪ್ಪಳ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಬೆಳಗಾವಿ ಜಿಲ್ಲೆಗಳ ಉದ್ದಗಲಕ್ಕೂ ಪ್ರವಾಸ ಮಾಡಿ ಅಲ್ಲಿಯ ಜನರಿಗೆ ನೆರವು, ಸಾಂತ್ವನಗಳನ್ನು ನೀಡಲಾಯಿತು.  

ಸತ್ತವರ ಕುಟುಂಬಗಳ ಭೇಟಿ ಮತ್ತು ನೆರವು ನೀಡಿಕೆ

ಈ ನೆರೆ ವಿಕೋಪದಲ್ಲಿ ಅನೇಕ ಕುಟುಂಬಗಳು ತಮ್ಮ ಆಪ್ತರನ್ನು ಕಳೆದುಕೊಂಡು ಬಹಳ ಸಂಕಷ್ಟಕ್ಕೆ ಸಿಲುಕಿವೆ. ಅನೇಕ ಕುಟುಂಬಗಳಲ್ಲಿ ದುಡಿಯುವ ಯಜಮಾನರಿಲ್ಲದೆ ಉಣ್ಣುವ ಗಂಜಿಗೂ ಪರದಾಟ ಪಡುವಂತಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಅಂತಹ ಕುಟುಂಬಗಳನ್ನು (ಕೆಳಗೆ ಕೊಟ್ಟಿರುವ ಪಟ್ಟಿ ನೋಡಿ) ಗುರುತಿಸಿ, ಅವರನ್ನು ಭೇಟಿ ಮಾಡಿ, ಅವರೊಂದಿಗೆ ಸಾಂತ್ವನದ ಮಾತುಗಳನ್ನಾಡಿ, ಪ್ರತಿಕುಟುಂಬಕ್ಕೂ ತಲಾ 5000 ರೂಪಾಯಿ ಸಹಾಯಧನವನ್ನು ವಿತರಣೆ ಮಾಡಲಾಯಿತು. ಒಟ್ಟು ಎಂಟು ಜಿಲ್ಲೆಯ 134 ಕುಟುಂಬಗಳಿಗೆ ಈ ರೀತಿ ನೆರವನ್ನು ನೀಡಲಾಯಿತು.
 
ಕ್ರ.ಸಂ. ಜಿಲ್ಲೆ ಮೃತ ಕುಟುಂಬಗಳ ಸಂಖ್ಯೆ
1 ಗದಗ 9
2 ಕೊಪ್ಪಳ 17
3 ಬಾಗಲಕೋಟೆ 23
4 ಬಿಜಾಪುರ 27
5 ಗುಲ್ಬರ್ಗ 10
6 ರಾಯಚೂರು 27
7 ಬಳ್ಳಾರಿ 11
8 ಬೆಳಗಾವಿ 10
  ಒಟ್ಟು 134
 

ಗಂಜಿ ಕೇಂದ್ರಗಳಿಗೆ ಭೇಟಿ ಮತ್ತು ಜೀವನಾವಶ್ಯಕ ವಸ್ತುಗಳ ವಿತರಣೆ

ನೆರೆಪೀಡಿತ ಪ್ರದೇಶಗಳಲ್ಲಿ ಮನೆಮಠಗಳನ್ನು ಕಳೆದುಕೊಂಡ ಸಾವಿರಾರು ನಿರಾಶ್ರಿತರನ್ನು ಗಂಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಇಂತಹ ಕೆಲವಾರು ಶಿಬಿರಗಳಿಗೆ ಭೇಟಿ ನೀಡಿ ಸುಮಾರು ಎರಡು ಲಾರಿಯಷ್ಟು ಜೀವನಾವಶ್ಯಕ ವಸ್ತುಗಳಾದ ಬಟ್ಟೆ, ಆಹಾರ ಪದಾರ್ಥ, ಔಷಧಿ, ಬ್ರೆಡ್, ಬಿಸ್ಕತ್ತು... ಮೊದಲಾದವುಗಳನ್ನು ಅಲ್ಲಿನ ಜನರಿಗೆ ವಿತರಿಸಲಾಯಿತು.

ಅನಾಥ ಮಕ್ಕಳ ದತ್ತು

ಕರುಣೆಯೇ ಇರದ ನೆರೆ ಮಾಡಿರುವ ಹಾವಳಿಯಲ್ಲಿ ಅನೇಕ ಕಂದಮ್ಮಗಳು ತಮ್ಮ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇಂತಹವರಲ್ಲಿ ಗದಗ ಜಿಲ್ಲೆಯ ಹನ್ನೆರಡು ವರುಷದ ಕೌತುನಭಿ, ಹತ್ತುವರುಷದ ಮುನೀರ ಅಹಮದ್, ಎಂಟು ವರುಷದ ಅಂಜುಂಬಾನು, ಗುಲ್ಬರ್ಗಾ ಜಿಲ್ಲೆಯ ಹತ್ತುವರುಷದ ದೌಲಸಾಬ್ ಮತ್ತು ರಾಯಚೂರು ಜಿಲ್ಲೆಯ ಒಂಬತ್ತು ವರ್ಷ ವಯಸ್ಸಿನ ನಿರ್ಮಲ ಎಂಬ ಐದು ಮಕ್ಕಳನ್ನು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ದತ್ತು ಪಡೆಯಲಾಗಿದ್ದು ಈ ಮಕ್ಕಳ ವಿದ್ಯಾಭ್ಯಾಸ, ವಸತಿಗಳ ಹೊಣೆಯನ್ನು ಹೊತ್ತು ಮುಂದೆ ಒಳ್ಳೆಯ ಭವಿಷ್ಯ ರೂಪಿಸುವ ಕೆಲಸಕ್ಕೆ ಮುಂದಾಗಿದ್ದೇವೆ.

ಮುಳುಗಡೆ ಪ್ರದೇಶ ವೀಕ್ಷಣೆ


ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಸಾವಿರಾರು ಬಂಧುಗಳನ್ನು ಭೇಟಿಯಾದ ನಂತರ ಹೀರೆಹಳ್ಳದ ಸೇತುವೆಯೂ ಸೇರಿದಂತೆ ಅನೇಕ ಮುಳುಗಡೆಯಾಗಿದ್ದ ಪ್ರದೇಶಗಳನ್ನು ಪರಿಶೀಲಿಸಲಾಯಿತು. ಈ ನೆರೆಯಿಂದ ಆಗಿರುವ ಅನಾಹುತ, ನಷ್ಟ ಮತ್ತು ತಕ್ಷಣ ಕೊಡಬೇಕಾದ ಪರಿಹಾರ, ಮುಂದಿನ ದಿನಗಳಲ್ಲಿ ನೆರೆಯಾದಾಗ ಮುಳುಗಡೆ ಆಗುವ ಹಳ್ಳಿಗಳನ್ನು ಸ್ಥಳಾಂತರ ಮಾಡಿ ಇಂತಹ ಅನಾಹುತಗಳನ್ನು ತಪ್ಪಿಸುವ ಬಗ್ಗೆ ಆಳುವವರು ಮತ್ತು ಅಧಿಕಾರಿಗಳು ಚಿಂತನೆ ನಡೆಸಬೇಕಾದ ಅಗತ್ಯವನ್ನು ಮನಗಾಣಲಾಯಿತು.
 
ಮನುಷ್ಯ ಜಾತಿ ತಾನೊಂದೆ ವಲಂ...

ಪ್ರತಿಜಿಲ್ಲೆಯಲ್ಲೂ ನಾನಾಧರ್ಮಗಳಿಗೆ ಸೇರಿದ ಹಿರಿಯರ ಮಾರ್ಗದರ್ಶನದಲ್ಲಿ ನಾನಾ ಧರ್ಮಗುರುಗಳ, ಮಠಾಧಿಪತಿಗಳ ಸಮಕ್ಷಮದಲ್ಲಿ ಪರಿಹಾರ ವಿತರಣೆ ಮಾಡಲಾಯಿತು ಮತ್ತು ನೊಂದವರನ್ನು ಸಂತೈಸಲಾಯಿತು.

ಈ ಪರಿಹಾರ ವಿತರಣೆಯಲ್ಲಿ ಪಾಲ್ಗೋಂಡಿದ್ದ ವಿವಿಧ ಧರ್ಮಗುರುಗಳ ಅನಿಸಿಕೆ ಹೀಗೆ ಇವೆ...

"ಅಧಿಕಾರಿಗಳು ಯಾರೂ ಗಂಜಿಕೇಂದ್ರಗಳ ಕಡೆಗೆ ಬರುತ್ತಿಲ್ಲ, ಆದರೆ ದೂರದ ಊರಿನಿಂದ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಸೋದರರು ಸಾವನ್ನಪ್ಪಿರುವ ಎಲ್ಲಾ ಕುಟುಂಬಗಳ ಜನರಿಗೆ ನೆರವು ಮತ್ತು ಜೀವನಾವಶ್ಯಕ ವಸ್ತುಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ"

                     - ಶ್ರೀ ಅಫೀಜ್ ಮೋಹಿಯುದ್ದೀನ್ ಖಾಜಿ, ಕೊಪ್ಪಳ ದರ್ಗಾಮಸೀದಿ

"ಬಸವಣ್ಣನವರ ಕಾಯಕಯೋಗಿ ತತ್ವವನ್ನು ಕರ್ನಾಟಕ ರಕ್ಷಣಾ ವೇದಿಕೆ ಯಥಾವತ್ತಾಗಿ ಪಾಲಿಸಿದ್ದಾರೆ, ಈ ಸಂಘಟನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲೆಂದು ಆಶಿಸುತ್ತೇನೆ"

                      - ಶ್ರೀ ಶ್ರೀ ಮ.ನಿ.ಪ್ರ ಬೂದೀಶ್ವರ  ಮಹಾಸ್ವಾಮಿಗಳು

"ಕಷ್ಟದಲ್ಲಿರುವರ ಕೈ ಹಿಡಿಯಬೇಕು, ನೊಂದವರ ಕಣ್ಣೀರು ಒರೆಸಬೇಕು ಅನ್ನುವ ಏಸುಕ್ರಿಸ್ತನ ಮಾತುಗಳನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ.ನಾರಾಯಣಗೌಡರು ಸತ್ತವರ ಕುಟುಂಬಕ್ಕೆ ನೆರೆವಾಗಿ, ಅವರಿಗೆ ಮಾನಸಿಕ ಧೈರ್ಯ ತುಂಬುವ ಮೂಲಕ ಭಗವಂತ ಮೆಚ್ಚುವ ಕೆಲಸ ಮಾಡಿದ್ದಾರೆ"

                     - ಶ್ರೀ ರೆವರೆಂಡ್ ಫಾದರ್ ಫಿಲಿಪ್ಸ ಪಿಂಟೋ, ಸೆಂಟ್ ಮೇರಿಸ್ ಚರ್ಚ್, ನವನಗರ, ಬಾಗಲಕೋಟೆ

"ಗೌತಮ ಬುದ್ಧನ ಉಪದೇಶ ಮತ್ತು ಆಶಯಗಳಿಗೆ ತಕ್ಕಂತೆ ಶ್ರೀ. ನಾರಾಯಣಗೌಡರು, ಇಂದು ಮೃತ ಪಟ್ಟಿರುವ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡಿರುವುದು ನಮಗೆಲ್ಲಾ ಸಂತೋಷವನ್ನು ಉಂಟು ಮಾಡಿದೆ."

                     - ಶ್ರೀ ಶ್ರೀ ಪರಮ ಪೂಜ್ಯ ಭಂತೇಜಿಬೌದ್ಧಿಪ್ರಜ್ಞ, ಬೌದ್ಧವಿಹಾರ, ಬಿಜಾಪುರ

"ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗುವ ೩೭೧ ಕಾಲಂ ತಿದ್ದುಪಡಿಯ ಹೋರಾಟವನ್ನು ಶ್ರೀ.ನಾರಾಯಣಗೌಡರು ದೆಹಲಿಗೆ ಕೊಂಡೊಯ್ಯಲಿ, ಅದರಲ್ಲಿ ಎಲ್ಲಾ ಮಠಾಧೀಶರು ಭಾಗವಹಿಸುತ್ತೇವೆ"

                     - ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಪೀಠಾಧ್ಯಕ್ಷರು,  ಸುಲಫಲಮಠ, ಶಹಬಜಾರ, ಗುಲ್ವರ್ಗ

"ಎಲ್ಲರೂ ಒಂದೇ ಎಂಬ ಭಾವನೆಯನ್ನು  ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ. ನಾರಾಯಣಗೌಡರೇ ನಮಗೆ ಸರ್ಕಾರವಿದ್ದಂತೆ"                           

                     - ಅಲಹಾಜ್ ಡಾ|| ಸೈಯದ್ ಷಾ ತಾಜ್ಜುದ್ದೀನ್,  ಅಹಮದಖಾದ್ರಿ, ರಾಯಚೂರು

"ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡರು ನೆರವು ನೀಡುತ್ತಿರುವುದು ಬೇರೆಯವರಿಗೆ ಮಾದರಿಯಾಗಲಿ"

                     - ಫಾದರ್ ಲೂಸಿಯೋ, ಸೆಂಟ್ ಅಂಥೋಣಿ ಚರ್ಚ್, ಬೆಳಗಾವಿ

ಮಾಧ್ಯಮಗಳ ಮೂಲಕ ಸರಕಾರಕ್ಕೆ ಸಲಹೆ

ನೆರೆಪೀಡಿತ ಪ್ರದೇಶಗಳಿಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಕಂಡು ಸ್ಥಳೀಯ ಮಾಧ್ಯಮಗಳ ಮೂಲಕ ಸರಕಾರಕ್ಕೆ ಕೆಲವು ಸಲಹೆಗಳನ್ನು ಕೊಡಲಾಯಿತು.

* ಸರಕಾರ ಕೋಟ್ಯಾಂತರ ಈ ಹೊತ್ತಿನಲ್ಲಿ ದೇಣಿಗೆಗಳನ್ನು ಸಂಗ್ರಹಿಸುವದಲ್ಲೇ ಕಾಲ ಕಳೆಯುವ ಬದಲು, ಸಂಕಷ್ಟದ ಈ ಸಮಯದಲ್ಲಿ  ನೇರವಾಗಿ ನೊಂದಿರುವ ಜನರ ಬಳಿ ಧಾವಿಸಿ ಅವರ ಅಗತ್ಯಗಳನ್ನು ನೋಡಿಕೊಂಡು, ಅಲ್ಲಿನ ಜನರ ಸಂಕಷ್ಟಗಳನ್ನು ನಿವಾರಿಸಬೇಕು.

* ಎಲ್ಲಾ ನೆರೆಪೀಡಿತ ಪ್ರದೇಶಗಳ ರೈತರ ಸಾಲಗಳನ್ನು ಮನ್ನಾ ಮಾಡಬೇಕು.

* ನೆರೆಪೀಡಿತರಿಗೆ ಬೆಂಗಳೂರು ಮತ್ತು ಇತರೆಡೆಯಲ್ಲಿ ಕೆಲಸ ಕೊಡಿಸಲು ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿ ದೊಡ್ಡ ಸಂಸ್ಥೆಗಳ ಸಹಾಯ ಪಡೆಯಬೇಕು.

* ನೀರಿನಲ್ಲಿ ಮುಳುಗಡೆಯಾಗಿರುವ ಸ್ಥಳಗಳನ್ನು ಗುರುತಿಸಿ, ಅಲ್ಲಿನ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಶಾಶ್ವತ ಪರಿಹಾರಕ್ಕೆ ಸರಕಾರ ಮುಂದಾಗಬೇಕು.

* ನೆರವು ನೀಡುವಾಗ ಜಾತಿ-ಧರ್ಮ-ಪಂಗಡಗಳನ್ನು ಬದಿಗೊತ್ತಿ, ತಾರತಮ್ಯ ಮಾಡದೆ ಎಲ್ಲರಿಗೂ ಪರಿಹಾರ ಕೊಡಬೇಕು.

* ಮುಂದಿನ ದಿನಗಳಲ್ಲಿ ಇಂತಹ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಡೆಸಬೇಕು. ನೆರೆ ವಿಪತ್ತು ನಿರ್ವಹಣೆಗೆ ಉನ್ನತ ತಾಂತ್ರಿಕ ಸಮಿತಿಯನ್ನು ರಚಿಸಿ ಸೂಕ್ತ ಕಾರ್ಯಯೋಜನೆಯನ್ನು ರೂಪಿಸಬೇಕು.

* ಅನುದಾನದ ಹಣ ಪೋಲು ಆಗದಂತೆ, ದುರುಪಯೋಗವಾಗದಂತೆ ಬಳಕೆ ಮಾಡಬೇಕು. ಅದ್ದರಿಂದ ಎಲ್ಲಾ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣು ಇಡಬೇಕು. ಪರಿಹಾರ ಕಾರ್ಯ ಪಾರದರ್ಶಕವಾಗಿರಬೇಕು.

 
 
 

ಕಾರ್ಯಕ್ರಮಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ