ದಿನಾಂಕ-೦೯-೦೨-೨೦೧೦
ಅಕ್ಕರೆಯ ಕನ್ನಡಿಗಾ,
ನಮ್ಮ ಕನ್ನಡನಾಡಲ್ಲಿ ಹುಸಿ ರಾಷ್ಟ್ರೀಯತೆಯ ಸೋಗಿನ ಕನ್ನಡದ್ರೋಹಿಗಳು ಅಧಿಕಾರದಲ್ಲಿರುವಾಗ ಹೀಗಲ್ಲದೇ ಮತ್ತೆ ಹೇಗೆ ಆಗುವುದೂ ಸಾಧ್ಯವಿರಲಿಲ್ಲ. ಇತ್ತೀಚಿಗಷ್ಟೇ ಬೆಂಗಳೂರಲ್ಲಿ ಸೌಹಾರ್ದತೆಯ ಹೆಸರಲ್ಲಿ ತಮಿಳರ ಸಾಮ್ರಾಜ್ಯಶಾಹಿ ಮನಸ್ಥಿತಿಯ ಪ್ರತೀಕದ ಹಾಗಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಿದ್ದ ಬಿಜೆಪಿ ಸರ್ಕಾರ ಈಗ ಮತ್ತೊಂದು ಇಂತಹುದೇ ಹೆಜ್ಜೆಯನ್ನು ಇಟ್ಟಿದೆ. ಅಂದು ನಾಚಿಕೆಯಿಲ್ಲದೆ ಇಡೀ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು, ತನ್ನ ನಿಲುವನ್ನು ವಿರೋಧಿಸಿದ ಎಲ್ಲಾ ಪ್ರತಿಭಟನಾಕಾರರನ್ನು ಜೈಲಿನಲ್ಲಿಟ್ಟು, ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಿ ಸೌಹಾರ್ದತೆಯ ಭಾಷಣ ಬಿಗಿದಿತ್ತು ಈ ಸರ್ಕಾರ. ಆದರೆ ಒಂದು ವಾರದಲ್ಲೇ ತಮಿಳುನಾಡಿನಿಂದ ‘ಹೊಗೇನಕಲ್ ಯೋಜನೆ ಬಗ್ಗೆ ಮಾತುಕತೆಯೇನಿಲ್ಲ, ಯೋಜನೆ ಜಾರಿಮಾಡೇ ತೀರುತ್ತೇವೆ’ ಅನ್ನುವ ಹೇಳಿಕೆಯ ತಪರಾಕಿ ಸಿಕ್ಕಿತು. ನಾಡಿನ ಜನರೆಲ್ಲಾ ಅಚ್ಚರಿಯಿಂದ ‘ಸೌಹಾರ್ದತೆಯೆಂದರೆ ಇದೇಯೇನು? ಎಂದು ಕಣ್ಕಣ್ಣು ಬಿಡುವಷ್ಟರಲ್ಲಿ ಇದೀಗ ನಮ್ಮಗಳ ತೀವ್ರ ವಿರೋಧದ ನಡುವೆಯೂ ಬೆಳಗಾವಿಯಲ್ಲಿ ಮಹಾರಾಷ್ಟ್ರಾ ಸೀಮಾ ಪರಿಷತ್ ಸಭೆಗೆ ಅನುಮತಿ ನೀಡಿ ತಮ್ಮ ನಾಡದ್ರೋಹಿ ನಿಲುವನ್ನು ತೋರಿಸಿದ್ದಾರೆ. ಮಹಾರಾಷ್ಟ್ರಾ ಏಕೀಕರಣ ಸಮಿತಿಯ ಇಂತಹ ಕಿತಾಪತಿ ಇದೇ ಮೊದಲಲ್ಲ. ಪ್ರತಿಬಾರಿ ಬೆಳಗಾವಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎನ್ನುವ ಮೂಲಕವೋ ಮಹಾಮೇಳಾವ ಹೆಸರಿನ ಮೂಲಕವೋ ಕಾರ್ಯಕ್ರಮ ನಡೆಸಿ ಕನ್ನಡ ನಾಡೊಡೆಯುವ ಘೋಷಣೆ ಮಾಡುವುದನ್ನು ಎಲ್ಲರೂ ಬಲ್ಲರು. ಇದೆಲ್ಲಾ ತಿಳಿದಿದ್ದೂ ಸಹ ಕರ್ನಾಟಕ ರಾಜ್ಯಸರ್ಕಾರ ಅದು ಹೇಗೆ ಸೀಮಾ ಪರಿಷತ್ ಕಾರ್ಯಕ್ರಮಕ್ಕೆ ಅನುಮತಿ ನೀಡಿತು?
ಕಳೆದ ವರ್ಷವಷ್ಟೇ ರಾಜ್ಯ ಸರ್ಕಾರದ ಸಂಪುಟ ಸಭೆಯನ್ನು ಬೆಳಗಾವಿಯಲ್ಲಿ ನಡೆಸುತ್ತಿದ್ದಾಗ ಅದಕ್ಕೆ ಪರ್ಯಾಯವೆಂಬಂತೆ ಎಂಇಎಸ್ ಮಹಾಮೇಳಾವ ಹೆಸರಲ್ಲಿ ಸಭೆ ಮಾಡಿ ರಾಜ್ಯಸರ್ಕಾರಕ್ಕೇ ಸವಾಲು ಹಾಕಿದ್ದನ್ನು ಇವರು ಮರೆತು ಬಿಟ್ಟರೇನು? ಕರ್ನಾಟಕದ ನೆಲದಲ್ಲೇ ನಿಂತು ಕರ್ನಾಟಕ ರಾಜ್ಯ ಪೊಲೀಸರನ್ನೇ ‘ಇವರು ಪಾಕಿಸ್ತಾನಿ ಸೈನಿಕರಿಗಿಂತಾ ಕ್ರೂರಿಗಳು’ ಎಂದು ಮಹಾರಾಷ್ಟ್ರದ ರಾಜಕಾರಣಿಗಳು ಅಂದು ಹೇಳಿಕೆ ಕೊಟ್ಟರಲ್ಲಾ... ಅದಕ್ಕೆ ಯಾವ ಪ್ರತಿಕ್ರಿಯೆ ನೀಡಿತು ನಮ್ಮ ಸರ್ಕಾರ? ಸರ್ಕಾರದವರಿಗೆ - ಎಂಇಎಸ್‌ನ ಮೇಳಾವಗಳು, ಸಭೆಗಳು, ಸಂಸ್ಕೃತಿ ಉತ್ಸವಗಳು ಹೇಗಿರುತ್ತವೆ? ಅಲ್ಲಿಗೆ ಯಾರು ಬರುತ್ತಾರೆ? ಬಂದವರು ಏನು ಭಾಷಣ ಮಾಡುತ್ತಾರೆ? - ಅನ್ನುವುದರ ಅರಿವಿಲ್ಲವೇನು? ಮತ್ಯಾಕೆ ಅನುಮತಿ ಇತ್ತರು? ರಾಜ್ಯಸರ್ಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ತನ್ನ ರಾಷ್ಟ್ರೀಯ ಅಧ್ಯಕ್ಷರು ಮರಾಠಿ ಭಾಷಿಕರು ಅನ್ನುವ ಕಾರಣದಿಂದ ಹೈಕಮಾಂಡಿಗೆ ಬೆದರಿ, ತನ್ನ ನಿಷ್ಠೆ ಪಕ್ಷದ ಹೈಕಮಾಂಡಿಗೇ ಹೊರತು ರಾಜ್ಯದ ಜನತೆಯ ಹಿತ ಕಾಪಾಡಲು ಅಲ್ಲಾ ಅನ್ನುವುದನ್ನು ಸಾರುವಂತೆ ಈ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದೆ.
ಹಿಂದೊಮ್ಮೆ ಬೆಳಗಾವಿಯ ಸುವರ್ಣಸೌಧದ ಮೇಲೆ ಕೈಲಿ ಮರಾಠಾ ಧ್ವಜ ಹಿಡಿದು, ಬಾಯಲ್ಲಿ ಮರಾಠಾ ಪರ ಘೋಷಣೆ ಚೀರುತ್ತಾ ಬಾವುಟ ಹಾರಿಸಲು ಮುಂದಾಗಿದ್ದು ಇದೇ ಬಿಜೆಪಿಯ ಸಂಸದರಾದ ಸುರೇಶ್ ಅಂಗಡಿಯವರು. ಮೊನ್ನಿನ ಮರಾಠಾ ಗಡಿ ಸಾಹಿತ್ಯ ಸಮ್ಮೇಳನದಲ್ಲಿ ನಾಡವಿರೋಧಿ ನಿಲುವು ತೋರಿಸಿದ್ದ ಶಾಸಕ ಸಂಜಯಪಾಟೀಲ್‌ರ ಉದ್ಧಟತನಕ್ಕೆ ಸದಾ ಮನ್ನಣೆ ನೀಡುತ್ತಿರುವುದು ಇಂದು ಅಧಿಕಾರದಲ್ಲಿರುವ ಬಿಜೆಪಿಯೇ. ಮುಂದಿನ ದಿನಗಳಲ್ಲಿ ಗೋವಾದ ಜೊತೆ ಸೌಹಾರ್ದತೆಗಾಗಿ ಮಹದಾಯಿ ಮೇಲಿನ ಹಕ್ಕನ್ನೂ, ಆಂಧ್ರದ ಜೊತೆ ಸೌಹಾರ್ದತೆಗಾಗಿ ಕೃಷ್ಣಾ ತುಂಗಭದ್ರೆಗಳ ಮೇಲಿನ ಹಕ್ಕನ್ನೂ, ತಮಿಳುನಾಡಿನ ಜೊತೆಗಿನ ಸೌಹಾರ್ದತೆಗಾಗಿ ಕಾವೇರಿ ನೀರು, ಹೊಗೇನಕಲ್ ದ್ವೀಪಗಳ ಮೇಲಿನ ಹಕ್ಕನ್ನೂ, ಮಹಾರಾಷ್ಟ್ರದ ಜೊತೆಗಿನ ಸೌಹಾರ್ದತೆಗಾಗಿ ಬೆಳಗಾವಿಯನ್ನೂ ಇವರು ಬರೆದುಕೊಡಲು ಹೇಸುವುದಿಲ್ಲ ಅನ್ನುವ ಅಭಿಪ್ರಾಯ ನಾಡಜನರಲ್ಲಿ ಮೂಡುತ್ತಿದೆ. ಸೌಹಾರ್ದತೆಯ ಹೆಸರಲ್ಲಿ ನಾಡಿನ ಹಿತ ಬಲಿಕೊಡಲು ಕರ್ನಾಟಕ ರಾಜ್ಯಸರ್ಕಾರವೇನು ಬಿಜೆಪಿಯ ಸ್ವತ್ತಲ್ಲ. ಹೀಗೆ ಕನ್ನಡಿಗರ ಸ್ವಾಭಿಮಾನವನ್ನು ಅಡವಿಡಲೆಂದೇ ನಾಡ ಜನತೆ ಅವರನ್ನು ಪಟ್ಟದಲ್ಲಿ ಕೂಡಿಸಿಲ್ಲ. ಅಧಿಕಾರ ಮದದಿಂದ ಭಾಷಾಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುವ, ಸೌಹಾರ್ದತೆಯ ಹೆಸರಲ್ಲಿ ಸ್ವಾಭಿಮಾನವನ್ನೇ ಪಕ್ಕದ ರಾಜ್ಯಗಳ ಕಾಲಬುಡದಲ್ಲಿ ಅರ್ಪಿಸುತ್ತಿರುವ ಬಿಜೆಪಿಯ ಸೈದ್ಧಾಂತಿಕ ಪೊಳ್ಳುತನವನ್ನು ನಾಡಜನತೆ ತಿರಸ್ಕರಿಸುವ ದಿನಗಳು ದೂರವಿಲ್ಲ.
ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಡಿರೆಂದು ಸರ್ಕಾರಕ್ಕೆ ಮನವಿ ಮಾಡಿದರೆ, ಮಾನ್ಯ ಗೃಹಸಚಿವರು ‘ಯಾರು ಎಲ್ಲಿ ಬೇಕಾದರೂ, ಯಾವುದಾದರೂ ಸಭೆ ಮಾಡಬಹುದು’ ಅನ್ನುವ ಬೇಜವಾಬ್ದಾರಿ ಮತ್ತು ಉಡಾಫೆಯ ಉತ್ತರವನ್ನು ಕೊಟ್ಟು ಇಂದು ನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣರಾಗಿದ್ದಾರೆ. ಒಟ್ಟಾರೆ ಕನ್ನಡಿಗರ ತೀವ್ರವಾದ ವಿರೋಧ ಮತ್ತು ಎಚ್ಚರಿಕೆಗಳನ್ನು ಕಡೆಗಣಿಸಿ ಬಿಗಿ ಭದ್ರತೆ ಒದಗಿಸಿ ನಾಡದ್ರೋಹಿ ಮಾತುಗಳ ಕಾರ್ಯಕ್ರಮಕ್ಕೆ ಸರ್ಕಾರವೇ ಅನುಮತಿ ನೀಡಿದ್ದು ಸತ್ಯ. ಫೆಬ್ರವರಿ ೫ರಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಹಮ್ಮಿಕೊಂಡಿದ್ದ ಸೀಮಾ ಪರಿಷತ್ ಎನ್ನುವ ಹೆಸರಿನ ನಾಡದ್ರೋಹಿ ಕಾರ್ಯಕ್ರಮದ ವಿರುದ್ಧವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಧೀರ ಕಾರ್ಯಕರ್ತರು ಹೋರಾಟ ಮಾಡಿ ಕಾರ್ಯಕ್ರಮವನ್ನು ಅಸ್ತವ್ಯಸ್ತಗೊಳಿಸಲು ಯಶಸ್ವಿಯಾದರು. ಶಾಂತಿಯುತವಾಗಿ ಪ್ರತಿಭಟನೆಗೆ ಮುಂದಾದ ನಮ್ಮ ಸಂಘಟನೆಯ ಮಹಿಳಾ ಸದಸ್ಯರ ಮೇಲೆಯೂ ಎಂ.ಇ.ಎಸ್. ಪುಂಡರು ಹಲ್ಲೆ ಮಾಡುತ್ತಿದ್ದರೆ, ಘನ ಕರ್ನಾಟಕ ಸರ್ಕಾರದವರು ನಮ್ಮ ಕಾರ್ಯಕರ್ತರುಗಳನ್ನೇ ಬಂಧಿಸಿ ಜೈಲಿಗಟ್ಟಲು ಮುಂದಾಯ್ತು. ಒಂದೆಡೆ ಬೀದಿಬೀದಿಗಳಲ್ಲಿ ಸಿರಿಗನ್ನಡಂ ಗೆಲ್ಗೆ ಎಂದು ಘೋಷಣೆ ಕೂಗುತ್ತ ಕನ್ನಡ ಬಾವುಟ ಹಿಡಿದು ಮೇಲೆತ್ತಿದ ಕೈಗಳಿಗೆ ಕೋಳ ತೊಡಿಸಲು ಹಿಂಜರಿಯದ ಇವರು ಮಹಾರಾಷ್ಟ್ರದ ಗ್ರಾಮೀಣ ಅಭಿವೃದ್ಧಿ ಸಚಿವರಾದ ಜಯಂತ್ ಪಾಟೀಲ ‘ಬೆಳಗಾವಿಯನ್ನು ಮಹಾರಾಷ್ಟ್ರದ ಭಾಗವನ್ನಾಗಿಸುತ್ತೇವೆ, ಕನ್ನಡ ನಾಡನ್ನು ಒಡೆಯುತ್ತೇವೆ’ ಎನ್ನುತ್ತಿದ್ದರೆ, ಮನೋಹರ್ ಕಿಣೇಕರ್ ಎನ್ನುವ ಮಾಜಿ ಶಾಸಕ ಕನ್ನಡಿಗರನ್ನು ನಾಯಿಗಳು ಎನ್ನುತ್ತಿದ್ದರೆ ಅವರಿಗೆ ಬಲು ಬಿಗಿಯಾದ ಭದ್ರತೆ ಕೊಡಲು ಮುಂದಾಗುತ್ತಿದ್ದರು. ಈ ಸರ್ಕಾರದ್ದು ಕನ್ನಡ ದ್ರೋಹಿ ನಿಲುವೆಂಬುದಕ್ಕೆ ಸಾಕ್ಷಿಯಾಗಿ ಇದಷ್ಟೇ ಸಾಕಲ್ಲವೇ?
ಕರ್ನಾಟಕದ ಇಂದಿನ ಈ ರಾಜ್ಯಸರ್ಕಾರದ ಇಂತಹ ದಬ್ಬಾಳಿಕೆಯ ಧೋರಣೆಯನ್ನು ನಾವು ಖಂಡಿಸುತ್ತೇವೆ. ಪ್ರತಿಯೊಂದು ಸಂದರ್ಭದಲ್ಲೂ ನಾಡಿನ ಹಿತವನ್ನು ಬಲಿಕೊಡುತ್ತಿರುವ ಬಿಜೆಪಿ ನಾಯಕತ್ವದ ಈ ಸರ್ಕಾರದ ಉದ್ಧಟತನವನ್ನೂ, ನಾಡದ್ರೋಹಿ ನಿಲುವುಗಳನ್ನೂ ಜನತೆಯ ಮುಂದಿಡುತ್ತೇವೆ. ನೆರೆಯಲ್ಲಿ ನಲುಗಿ ಬದುಕು ಕಟ್ಟಿಕೊಳ್ಳಲು ಆಗದೆ, ಒಪ್ಪೊತ್ತಿನ ಕೂಳಿಲ್ಲದೆ, ನಿಲ್ಲಲು ಸೂರಿಲ್ಲದೆ ಲಕ್ಷಾಂತರ ಜನರು ಕಣ್ಣೀರಿಡುತ್ತಿದ್ದಾಗ ನೂರಾರು ಕೋಟಿ ಹಣವನ್ನು ಪೋಲುಮಾಡಿ ಉತ್ಸವ ಹಮ್ಮಿಕೊಳ್ಳುವ ಈ ಸರ್ಕಾರದ ನಾಯಕರಾದ ಯಡ್ಯೂರಪ್ಪನವರ ಎಲ್ಲಾ ಸಭೆಗಳಲ್ಲಿ ಇಡೀ ವರ್ಷ ಇನ್ನು ಮುಂದೆ ಕಪ್ಪುಬಾವುಟ ಪ್ರದರ್ಶಿಸುತ್ತೇವೆ. ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿಯುವ ರಾಜಕೀಯ ಶಕ್ತಿಯನ್ನು ಈ ನಾಡದ್ರೋಹಿ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಕಟ್ಟೋಣ ಬನ್ನಿ. ಸದಾ ನಮ್ಮೊಂದಿಗೆ ಕೈಜೋಡಿಸಿ ಎಂದು ಕೋರುತ್ತೇನೆ.
ವಂದನೆಗಳು ಟಿ.ಏ.ನಾರಾಯಣಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ |