Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಅಧ್ಯಕ್ಷರ ಲೇಖನಿಯಿಂದ - ಮಾರ್ಚ್ ೨೦೧೦

ಅಧ್ಯಕ್ಷರ ನುಡಿ
ದಿನಾಂಕ-೧೬-೦೩-೨೦೧೦

ಅಕ್ಕರೆಯ ಕನ್ನಡಿಗಾ,

ಯುಗಾದಿ ಹಬ್ಬದ ಶುಭಾಶಯಗಳು. ಇದೇ ತಿಂಗಳ 28ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಗಳು ನಡೆಯಲಿವೆ. ಕಳೆದ ಹತ್ತುವರ್ಷಗಳಿಂದಲೂ ನಾಡಪರ ಹೋರಾಟದಲ್ಲಿ ತೊಡಗಿರುವ ಕರ್ನಾಟಕ ರಕ್ಷಣಾ ವೇದಿಕೆಯು ಹಲವು ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಸುತ್ತಿದೆ. ಆ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯು, ತನ್ನ ನಾಡಪರ ಹೋರಾಟದ ವ್ಯಾಪ್ತಿಯನ್ನು ರಾಜಕೀಯ ರಂಗಕ್ಕೂ ವಿಸ್ತರಿಸುತ್ತಿದೆ.

ಇದುವರೆಗೂ ನಮ್ಮ ನಾಡನ್ನಾಳಿದ ರಾಷ್ಟ್ರೀಯ ಪಕ್ಷಗಳೇ ಇಂದಿನ ನಮ್ಮ ಎಲ್ಲಾ ಸಮಸ್ಯೆಗಳಿಗೂ ಕಾರಣ. ಈ ಪಕ್ಷಗಳಲ್ಲಿ ಯಾವೊಂದು ಪಕ್ಷಕ್ಕೂ ಕನ್ನಡ - ಕನ್ನಡಿಗ ಹಾಗೂ ಕರ್ನಾಟಕಗಳ ಹಿತ ಕಾಪಾಡುವ ಬದ್ಧತೆಯಿಲ್ಲ. ಸದಾಕಾಲ ಹೈಕಮಾಂಡಿನ ಗುಲಾಮಗಿರಿಯನ್ನು ಮಾಡಿಕೊಂಡಿರುವ ಇವುಗಳು ನಾಡಪರವಾಗಿ ಎಂದಿಗೂ ಪ್ರಾಮಾಣಿಕವಾಗಿ ದನಿಯೆತ್ತಿಲ್ಲ. ನದಿ ನೀರು ಹಂಚಿಕೆಯಿರಲಿ, ಗಡಿ ಸಮಸ್ಯೆಗಳಿರಲಿ, ಅಂತರರಾಜ್ಯ ತಕರಾರುಗಳಿರಲಿ... ಯಾವುದರಲ್ಲೂ ಇವಕ್ಕೆ ನಾಡಪರ ನಿಲ್ಲುವ ಛಾತಿಯಿಲ್ಲ. ಹೋಗಲಿ, ಉಳಿದಂತೆ ಹೇಗೆ ನಡೆದುಕೊಂಡಿವೆ ಎಂದರೆ ಅಲ್ಲೂ ನಿರಾಸೆಯೇ. ನಮ್ಮ ನಾಡಿಗೆ ಬರಬೇಕಾದ ಯೋಜನೆಗಳನ್ನು ತರುವಲ್ಲಿ ಅಂದರೆ ರೈಲು, ರಾಷ್ಟ್ರೀಯ ಹೆದ್ದಾರಿ, ಕಾರ್ಖಾನೆಗಳ ಸ್ಥಾಪನೆಯಂತಹ ಯೋಜನೆಗಳನ್ನು ತರುವಲ್ಲಿ, ನೆರೆ ಬರ ಪರಿಹಾರ ಧನಗಳನ್ನು ದಕ್ಕಿಸಿಕೊಳ್ಳುವಲ್ಲಿಯೂ ಇವು ಎಡವಿವೆ. ಅಷ್ಟೇ ಏಕೆ, ನಮ್ಮ ಜನರಿಗೆ ನ್ಯಾಯಯುತವಾಗಿ ಸಿಗಬೇಕಾದ ಪಡಿತರ ಚೀಟಿ, ಗುರುತು ಚೀಟಿ, ಕುಡಿಯುವ ನೀರು ಮೊದಲಾದ ಸೌಲಭ್ಯಗಳನ್ನು ಒದಗಿಸಿಕೊಡಲೂ ಸೋತುಹೋಗಿವೆ. ಹೀಗೆ ರಾಜಕಾರಣವೆಂದರೆ ಜನರ ಹಿತಕಾಯುವುದು ಎನ್ನುವುದನ್ನೇ ಮರೆತಿರುವ ಈ ರಾಷ್ಟ್ರೀಯತೆಯ ಸೋಗಿನ ರಾಷ್ಟ್ರೀಯ ಪಕ್ಷಗಳಿಂದಲೇ ನಮ್ಮ ನಾಡಿಂದು ಸೊರಗಿದೆ.

ಈ ಕಾರಣದಿಂದಲೇ ನಾಡಿನ ಮಹಾಜನತೆ ನಮ್ಮನ್ನು ರಾಜಕೀಯಕ್ಕಿಳಿಯಲು ಬಹುದಿನಗಳಿಂದ ಒತ್ತಾಯಿಸುತ್ತಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯೂ ಕೂಡಾ ಇದರ ಅಗತ್ಯವನ್ನು ಮನಗಂಡಿದ್ದು ಇದೀಗ ರಾಜಕೀಯವನ್ನು ಪ್ರವೇಶಿಸಲು ತೀರ್ಮಾನಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಈ ನಮ್ಮ ಪ್ರಯತ್ನವನ್ನು ಬೆಂಬಲಿಸಿ ಬೆನ್ನುತಟ್ಟುತ್ತಿರುವ ಲಕ್ಷಾಂತರ ಜನರನ್ನು ಕಂಡಾಗ ನಮ್ಮ ನಾಡಿಗೊದಗಿರುವ ದುರ್ದಿನಗಳು ದೂರಾಗುವ ಕಾಲ ಹತ್ತಿರವಾಗಿದೆ ಎನ್ನಿಸುತ್ತಿದೆ. ಇದೇ ಸಂದರ್ಭದಲ್ಲಿ ಕನ್ನಡದ ಹೆಸರಲ್ಲಿ ಮತ ಕೇಳಿ ಗೆದ್ದವರಿಲ್ಲ ಎನ್ನುವ ಕೊಂಕನ್ನು ಸವಾಲಾಗಿ ಸ್ವೀಕರಿಸಿ ನಾಡಿನ ಕನ್ನಡಿಗರು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಅಭ್ಯರ್ಥಿಗಳಿಗೇ ಮತ ನೀಡಿ ಗೆಲ್ಲಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಈ ಮೂಲಕ ಪಕ್ಷೇತರರಾಗಿ ಕಣಕ್ಕಿಳಿಯುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಟ್ಟಾಳುಗಳನ್ನು ನೀವುಗಳು ಮತನೀಡಿ ಹರಸಬೇಕೆಂದು ಕೋರುತ್ತೇನೆ.

ವಂದನೆಗಳು
ಟಿ.ಏ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
 

ಅಧ್ಯಕ್ಷರ ನುಡಿ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ