| ಬೆಂಗಳೂರಿನಲ್ಲಿ ನಡೆಯಲಿರುವ ೭೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಸಮೀಪಿಸುತ್ತಿದೆ. ಇಂತಹ ಮಹತ್ವದ ಸಂದರ್ಭದಲ್ಲಾದರೂ ಬೆಂಗಳೂರನ್ನೂ ಒಳಗೊಂಡು, ರಾಜ್ಯದಲ್ಲಿರುವ ಎಲ್ಲ ಸಾರ್ವಜನಿಕ ನಾಮಫಲಕಗಳು ಮತ್ತು ಜಾಹಿರಾತುಗಳಲ್ಲಿ ಕನ್ನಡದ ಕಡ್ಡಾಯ ಬಳಕೆಯ ನಿಯಮವನ್ನು ಅನುಷ್ಠಾನಗೊಳಿಸಿ, ಕನ್ನಡದ ವಾತಾವರಣ ನಿರ್ಮಿಸಬೇಕಾದುದು ಸರ್ಕಾರದ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ. ಆದರೆ ನಾಮಫಲಕಗಳಲ್ಲಿ ಕನ್ನಡದ ಬಳಕೆಯ ನಿಯಮವನ್ನೂ ನಿರಂತರವಾಗಿ ಮೀರಲಾಗುತಿದ್ದರೂ ನಮ್ಮ ಸರ್ಕಾರ ಮಾತ್ರ ನಿಯಮ ಮೀರಿದವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೇ ಕೈಕಟ್ಟಿ ಕುಳಿತಿದೆ.
ನಾಮಫಲಕಗಳಲ್ಲಿ ಕನ್ನಡದ ಕಡ್ಡಾಯ ಬಳಕೆಯನ್ನು ಎಲ್ಲ ನಿಯಮಾವಳಿಗಳ ಪ್ರಕಾರ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ನಮ್ಮ ವೇದಿಕೆ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿರುವುದು ತಮಗೆಲ್ಲಾ ತಿಳಿದಿದೆ. ಇದೇ ವಿಷಯವಾಗಿ ಜನವರಿ ೩೧ ರಂದು ಬೆಂಗಳೂರಿನಲ್ಲಿ ನಮ್ಮ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ: http://karave.blogspot.com/2011/01/naamaphalakadalli-kannada.html
ನಾಮಫಲಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಗೆ ಒತ್ತಾಯಿಸಿ ಕರವೇ ನಡೆಸಿರುವ ಹೋರಾಟಗಳು-
ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಹೋರಾಟ
ಸರಕಾರದ ನಿಯಮದ ಪ್ರಕಾರ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಬೇಕು. ಆದರೆ ಹಲವಾರು ವಾಣಿಜ್ಯ ಸಂಸ್ಥೆಗಳು ಈ ನಿಯಮವನ್ನು ಗಾಳಿಗೆ ತೂರಿವೆ. ಹೀಗಿದ್ದರೂ ಸರಕಾರ ನಿಯಮ ಮೀರಿರುವವರ ವಿರುದ್ಧ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ. ಹಲವಾರು ದಿನಗಳಿಂದ ನಮ್ಮ ವೇದಿಕೆಯು ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಒತ್ತಾಯಿಸಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಇದೇ ನಿಟ್ಟಿನಲ್ಲಿ ಜನವರಿ ೧೨ ೨೦೧೧ ರಂದು ಬೆಂಗಳೂರಿನಲ್ಲಿ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಇದರ ಪತ್ರಿಕಾ ವರದಿಯನ್ನು ನೋಡಿ- http://karave.blogspot.com/2011/01/kannadadalli-naamapalaka.html
ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಕರ್ನಾಟಕದ ಅಂಗಡಿ, ಜಾಹಿರಾತುಗಳು ಮತ್ತು ವಾಣಿಜೋದ್ಯಮ ಸಂಸ್ಥೆಗಳಲ್ಲಿ ಕನ್ನಡದ ನಾಮಫಲಕವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಈಗಾಗಲೆ ಇರುವ ಕಾನೂನಿನ ಉಲ್ಲಂಘನೆಯ ವಿರುದ್ಧ ನಾವು ನವೆಂಬರ್ ೧ ರಂದು ಹೋರಾಟ ಆರಂಭಿಸಿದ್ದೆವು. ಅದನ್ನು ಮುಂದುವರೆಸುತ್ತಾ, ಮತ್ತೊಮ್ಮೆ ನವೆಂಬರ್ ೧೬ ರಂದು ಬೆಂಗಳೂರು ನಗರ ಪಾಲಿಕೆ ಕಛೇರಿ ಎದುರು ಪ್ರತಿಭಟನೆ ನಡೆಸಿದೆವು. ನಿಯಮವನ್ನು ಜಾರಿಗೆ ತರಬೇಕೆಂದು ಮತ್ತು ನಿಯಮವನ್ನು ಮೀರಿದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆವು. ಪ್ರತಿಭಟನೆಗೆ ಸ್ಪಂದಿಸಿದ ಮೇಯರ್ ಎಸ್.ಕೆ. ನಟರಾಜ್ ಅವರು ಎಲ್ಲ ಬಗೆಯ ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಮತ್ತು ಇದನ್ನು ಪಾಲಿಸುವುದು ಆಯಾ ಮಾಲೀಕರ ಜವಾಬ್ದಾರಿಯೂ ಕೂಡ ಎಂದು ಅಭಿಪ್ರಾಯಪಡುತ್ತಾ, ಇದರ ಬಗ್ಗೆ ಸರಿಯಾದ ವಿಚಾರಣೆ ನಡೆಸಿ, ನಿಯಮದ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನೂ ನೀಡಿದರು. ಇದರ ಪತ್ರಿಕಾ ವರದಿಯನ್ನು ಕೆಳಗಿನ ಕೊಂಡಿಯಲ್ಲಿ ನೋಡಿ: http://karave.blogspot.com/2010/11/kannadadalli-naamapalaka.html ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆಗೆ ಒತ್ತಾಯಿಸಿ ನಡೆಸಿದ ಇನ್ನಿತರ ಹೋರಾಟಗಳು
ಕನ್ನಡದಲ್ಲಿ ನಾಮಫಲಕ - ಕಾನೂನು ಮುರಿದದ್ದನ್ನು ಪ್ರತಿಭಟಿಸಿದ್ದಕ್ಕೇ ಬಂಧನ ಕರ್ನಾಟಕದ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳಲ್ಲಿ ಇರಬೇಕಾದ ಕನ್ನಡದ ನಾಮಫಲಕದ ಕುರಿತು, ಕಾನೂನಿನ ನಿಯಮ ೨೪ರ ಅನ್ವಯ ಇರುವ ಸರ್ಕಾರಿ ಆಜ್ಞೆಯನ್ನು ಇಂದಿಗೂ ಉಲ್ಲಂಘಿಸುತ್ತಿರುವವರ ವಿರುದ್ಧ ಮತ್ತು ಕಾನೂನು ಮುರಿಯುವುದನ್ನು ಸುಮ್ಮನೆ ನೋಡಿಕೊಂಡಿರುವ ಸರ್ಕಾರದ ವಿರುದ್ಧ ಕರ್ನಾಟಕದ ರಾಜ್ಯೋತ್ಸವದ ದಿನವಾದ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆವು. ವಿಷಾದದ ಸಂಗತಿಯೆಂದರೆ ೧೯೮೫ ರಲ್ಲೇ ರಚನೆಯಾದ ಕಾನೂನು ೨೫ ವರ್ಷಗಳು ಕಳೆದರೂ ಜಾರಿಯಾಗದೆ, ನಿರಂತರವಾಗಿ ಕಾನೂನು ಮುರಿಯಲಾಗುತ್ತಿದ್ದು ಇಂದಿಗೂ ಇದರ ವಿರುದ್ಧ ಜನಸಾಮಾನ್ಯರು ಪ್ರತಿಭಟನೆ ನಡೆಸಬೇಕಾದ ದಯನೀಯ ಸ್ಥಿತಿ ಇದೆ. ಇದಕ್ಕಿಂತಲೂ ವಿಪರ್ಯಾಸದ ಸಂಗತಿಯೆಂದರೆ, ಕಾನೂನು ಮುರಿಯುತ್ತಿರುವವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದಿರುವ ಸರ್ಕಾರ, ಬದಲಾಗಿ ಇದರ ವಿರುದ್ಧ ಪ್ರತಿಭಟಿಸಿದವರನ್ನೇ ಕಾನೂನು ಮುರಿದರೆಂದು ಆರೋಪಿಸಿ ಬಂಧಿಸುವ ಕಾರ್ಯಕ್ಕೆ ಮುಂದಾಗಿದೆ. ಇದರ ಪತ್ರಿಕಾ ವರದಿಯನ್ನು ಕೆಳಗಿನ ಕೊಂಡಿಯಲ್ಲಿ ನೋಡಿ: http://karave.blogspot.com/2010/11/kannadadalli-naamaphalaka-aagrahisi.html |