Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಅಧ್ಯಕ್ಷರ ನುಡಿ : ನೈರುತ್ಯ ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ

ಅಧ್ಯಕ್ಷರ ನುಡಿ
ಫೆಬ್ರವರಿ ೨೦೦೮ : ನೈರುತ್ಯ ರೈಲ್ವೆ ಯ ಡಿ-ದರ್ಜೆ ಉದ್ಯೋಗದ ನೇಮಕಾತಿಯಲ್ಲಿ ಕನ್ನಡಿಗರಿಗೆ  ಅನ್ಯಾಯವಾದ ಸಮಯದಲ್ಲಿ ಕರವೇ ಐತಿಹಾಸಿಕ ಹೋರಾಟ ನಡೆಸಿ ಆನ್ಯಾಯವನ್ನು ತಪ್ಪಿಸಿತ್ತು. ಈ ವಿಷಯದ ಬಗ್ಗೆ ನಮ್ಮ ಅಧ್ಯಕ್ಷರ ಮನದಾಳದ ಮಾತುಗಳು:
 
ಸ್ವಾಭಿಮಾನಿ ಕನ್ನಡಿಗರೇ,

ಈ ಹುದ್ದೆಯ ಜಾಹಿರಾತನ್ನು ಕನ್ನಡದ ಪತ್ರಿಕೆಗಳಲ್ಲಿ ಕಾಟಾಚಾರಕ್ಕೆ ಪ್ರಕಟಿಸಲಾಗಿದೆ. ಮೈಸೂರು ಮಿತ್ರ, ಗುಲ್ಬರ್ಗದಲ್ಲಿ ಸಂಯುಕ್ತ ಕರ್ನಾಟಕದಂತಹ ಬೆರಳೆಣಿಕೆಯಷ್ಟು ಪತ್ರಿಕೆಗಳಲ್ಲಿ ಜಾಹಿರಾತು ನೀಡಿರುವ ಇಲಾಖೆ ಎಲ್ಲ ಕನ್ನಡ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದರೂ ಸೂಕ್ತ ಪುರಾವೆ ಒದಗಿಸುತ್ತಿಲ್ಲ.
 
ಕಳೆದ ವಾರ ಆರಂಭವಾದ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರ ಸಂಖ್ಯೆ ಅತಿಕಡಿಮೆ ಎನ್ನುವ ಮಾಹಿತಿ ಇದ್ದುದರಿಂದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರುಗಳು ನೇಮಕಾತಿ ನಡೆಯುತ್ತಿದ್ದ ಬೆಂಗಳೂರು, ಹುಬ್ಬಳ್ಳಿ, ಮೈಸೂರುಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಕಂಡಿದ್ದು ನಿರೀಕ್ಷೆಯಂತೆಯೇ ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ಕೆಲಸವೇ. ಯಶವಂತಪುರದಲ್ಲಿ ನಡೆಯುತ್ತಿದ್ದ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದ ೧೨೦೦ ಅಭ್ಯರ್ಥಿಗಳಲ್ಲಿ ಕೇವಲ ೫೨ ಜನರು ಕನ್ನಡಿಗರು. ಆಗ ರೈಲ್ವೇ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಕ್ಕದ್ದು ಇದು ಭಾರತ ದೇಶ, ಯಾರು ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳಬಹುದು, ರೈಲ್ವೇ ರಾಷ್ಟ್ರೀಯ ಸಂಸ್ಥೆ. . . ಇತ್ಯಾದಿ ಎನ್ನುವ ಉತ್ತರಗಳು. ಕನ್ನಡಿಗ ಅಭ್ಯರ್ಥಿಗಳು ಇಲ್ಲದೇ ಇರುವ ಪಕ್ಷದಲ್ಲಿ ಬೇರೆ ರಾಜ್ಯದವರಿಗೆ ಅವಕಾಶ ಮಾಡಿಕೊಡಬಹುದು. ಆದರೆ ಅರ್ಜಿ ತುಂಬುವಾಗ, ಜಾಹಿರಾತು ನೀಡುವಾಗ ತಾರತಮ್ಯ ನೀತಿ ಅನುಸರಿಸಿ ಅದಕ್ಕೆ ಸಂವಿಧಾನದ, ಆಡಳಿತದ ನಿಯಮಾವಳಿಗಳತ್ತ ಕೈ ತೋರಿಸುವ ರೀತಿ ಆಂಗ್ಲರು ನಮ್ಮನ್ನಾಳಲು ನೀಡುತ್ತಿದ್ದ ಕಾರಣಗಳಿಗಿಂತ ಭಿನ್ನವಾಗೇನಿಲ್ಲ. ಬಿಹಾರಿನಿಂದ ಬಂದ ಅಭ್ಯರ್ಥಿಗಳಿಗಂತೂ ಉಚಿತ ರೈಲ್ವೇ ಪ್ರಯಾಣಕ್ಕೆ ಅನುಮತಿ, ಪುಗಸಟ್ಟೆ ಊಟ (ಊಟದ ಚೀಟಿ ವಿತರಿಸಲಾಗಿತ್ತು), ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು ಎಂದರೆ ರೈಲ್ವೇ ಇಲಾಖೆ ಅದೆಷ್ಟು ಪಕ್ಷಪಾತತನದಿಂದ ವರ್ತಿಸಿದೆ ಎನ್ನುವುದು ಗೊತ್ತಾಗುತ್ತದೆ. ಈ ಅನ್ಯಾಯ ಇಂದಿನದ್ದು ಮಾತ್ರವಲ್ಲ. ಈ ಹಿಂದೆ ೨೦೦೫ರಲ್ಲಿ ನಡೆದ ಸಹಾಯಕ ಸ್ಟೇಷನ್ ಮಾಸ್ತರ್ ಹುದ್ದೆಯಲ್ಲಿ ನೇಮಕವಾದ ೭೦ ಜನರಲ್ಲಿ ಬಿಹಾರಿಗಳ ಸಂಖ್ಯೆ ೨೬ ಆದರೆ ಕನ್ನಡಿಗರ ಸಂಖ್ಯೆ ಬರಿ ೩. ಈ ಬಗ್ಗೆ ಕೆಲ ಕನ್ನಡಿಗ ಅಭ್ಯರ್ಥಿಗಳು  ಸುಪ್ರಿಂಕೋರ್ಟಿನ ಮೊರೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ರೈಲ್ವೇ ಪೊಲೀಸರ ಸುಮಾರು ಹತ್ತು ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು ಅದರಲ್ಲೂ ಈ ಅನ್ಯಾಯ ಮುಂದುವರೆಯದಿರಲು ಇಂದು ಕನ್ನಡಿಗರೆಲ್ಲ ಒಟ್ಟಾಗಿ ಹೋರಾಡಲೇ ಬೇಕಿದೆ. ಇದೀಗ ರೈಲ್ವೇ ಅಧಿಕಾರಿಯೊಬ್ಬರು ೬೨೩ ಕನ್ನಡಿಗರ ನೇಮಕಾತಿ ಈಗಾಗಿದೆ, ನೇಮಕಾತಿ ವಿರುದ್ಧ ಹೋರಾಟ ನಡೆದರೆ ನಾಡಿನ ಬೆಳವಣಿಗೆಗೆ ಧಕ್ಕೆ ಆಗುತ್ತದೆ, ಕನ್ನಡಿಗರಿಗೆ ಉದ್ಯೋಗಕ್ಕೆ ವಂಚನೆಯಾಗುತ್ತದೆ ಎಂಬ ಸಿಹಿ ಸುಳ್ಳನ್ನು ಮಾಧ್ಯಮಗಳ ಮೂಲಕ ನೀಡುತ್ತಿದ್ದಾರೆ. ಗಮನಿಸಿ, ಈ ೬೨೩ ಕನ್ನಡಿಗರ ನೇಮಕಾತಿ ಆಗಿರುವುದು ಕೂಡಾ ಕರ್ನಾಟಕ ರಕ್ಷಣಾ ವೇದಿಕೆಯು ಪರೀಕ್ಷಾ ಕೇಂದ್ರಗಳಿಗೆ ದಾಳಿ ಇಟ್ಟು ಪರಭಾಷಿಕರನ್ನು ಓಡಿಸಿದ್ದರಿಂದ. ಇಲ್ಲದಿದ್ದರೆ ೬೩ ಹುದ್ದೆಯೂ ನಮ್ಮವರಿಗೆ ದಕ್ಕುತ್ತಿರಲಿಲ್ಲ. ಜೊತೆಗೆ ಇದೀಗ ಕನ್ನಡಿಗರ ಹೋರಾಟವನ್ನು ತಣ್ಣಗಾಗಿಸಲು ನೇಮಕಾತಿಯನ್ನು ಮುಂದೂಡಿದ್ದಾರೆ.

ಅದರಿಂದ ಏನಾದೀತು? ಮುಂದಿನ ಮೂರು ತಿಂಗಳ ನಂತರ ಮತ್ತೆ ಇದೇ ತೆರನಾದ ನೇಮಕಾತಿ ನಡೆಯದು ಎನ್ನುವ ಭರವಸೆ ಏನಿದೆ? ನಮ್ಮ ಬೇಡಿಕೆ ಇಡಿಯ ನೇಮಕಾತಿ ಪ್ರಕ್ರಿಯೆಯನ್ನು ಅಕ್ರಮವೆಂದು ಘೋಷಿಸಿ ಮತ್ತೆ ಹೊಸದಾಗಿ ಆರಂಭಿಸಬೇಕು. ಕನ್ನಡ ನಾಡಿನಲ್ಲಿನ ಈ ಹುದ್ದೆಗಳಿಗೆ ಕನ್ನಡದಲ್ಲಿ ಅರ್ಜಿ ಬರೆಯುವುದು ಕಡ್ಡಾಯವಾಗಬೇಕು. ಕನ್ನಡನಾಡಿನ ಮೂಲೆಮೂಲೆಗಳಲ್ಲಿ ಈ ಜಾಹಿರಾತಿನ ಪ್ರಕಟಣೆಯನ್ನು ಎಲ್ಲ ರಾಜ್ಯಮಟ್ಟದ, ಜಿಲ್ಲಾಮಟ್ಟದ ಪತ್ರಿಕೆಗಳಲ್ಲಿ ಪ್ರಕಟಮಾಡಬೇಕು. ನಮ್ಮ ನಾಡಿನ ಹುದ್ದೆಗಳು ಕನ್ನಡಿಗರ ಮೊದಲ ಹಕ್ಕು. ಇದು ಬರಿಯ ಅಭಿಮಾನದ ಪ್ರಶ್ನೆ ಅಲ್ಲ. ನಮ್ಮ ಜನರ ಬದುಕಿನ ಪ್ರಶ್ನೆ. ಸಹಾಯಕ ಸ್ಟೇಷನ್ ಮಾಸ್ತರ್ ಹುದ್ದೆಯ ೭೦, ಡಿ ದರ್ಜೆಯ ನೇಮಕಾತಿಯ ೪೭೦೧, ರೇಲ್ವೆ ಪೊಲೀಸ್ ಹುದ್ದೆಯಾದ ೧೦೦೦೦ ಇವೆಲ್ಲಾ ಕನ್ನಡದ ಮಕ್ಕಳ ಹಕ್ಕು ಏಕೆಂದರೆ ಈ ಹುದ್ದೆಗಳು ಇರುವುದು ನಮ್ಮ ನಾಡಿನಲ್ಲಿಯೇ. ಇವು ನಮ್ಮ ಪಾಲಾದರೆ ೧೦೫೦೦ ಕುಟುಂಬಗಳ ಒಲೆ ಉರಿಯುತ್ತದೆ. ಇಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆ ಪರಿಹಾರ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ನಾಡಿನ ಎಲ್ಲ ಜನಪ್ರತಿನಿಧಿಗಳು ಮುಂದಾಗಬೇಕು. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ಗುರಿ ಮುಟ್ಟುವತನಕ ಎಂಥದೇ ಬೆಲೆ ತೆತ್ತಾದರೂ ಮುಂದುವರೆಸುತ್ತದೆ.

ಭಾರತದ ಒಕ್ಕೂಟ ವ್ಯವಸ್ಥೆ ಎನ್ನುವುದು ನಮಗೆ ಹಾನಿ ಮಾಡುವ ಹಾಗಿದ್ದರೆ, ಅಂತಹ ವ್ಯವಸ್ಥೆಗೆ ಅಪ್ಪ ಹಾಕಿದ ಆಲದ ಮರವೆಂದು ನೇಣು ಹಾಕಿಕೊಳ್ಳಬೇಕೇ? ಈ ವ್ಯವಸ್ಥೆ ಸರಿ ಹೋಗುವುದು ಬೇಡವೇ? ಬದುಕಲು ಬೇಕಾದ ಉದ್ಯೋಗದ ಹಕ್ಕಿಗೇ ಸಂಚಕಾರ ತರುವಂತಹ ಒಕ್ಕೂಟ ವ್ಯವಸ್ಥೆ ಹೀಗೇ ಇರುವುದು ನಮಗೇ ಬೇಕೆ? ಕರ್ನಾಟಕ ರಕ್ಷಣಾ ವೇದಿಕೆಯ ಈ ಹೋರಾಟವನ್ನು ತಾವುಗಳೆಲ್ಲಾ ಬೆಂಬಲಿಸಬೇಕೆಂದು, ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದೂ ಈ ಮೂಲಕ ಕಳಕಳಿಯಿಂದ ಕರೆ ನೀಡುತ್ತಿದ್ದೇವೆ.

ಟಿ.ಎ.ನಾರಾಯಣ ಗೌಡ

 

ಅಧ್ಯಕ್ಷರ ನುಡಿ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ