| ಜುಲೈ ೨೦೦೭ : ಕೊಂಕಣಿ ರಾಜ್ಯ ಏಕೀಕರಣ ಮಂಚ್ ಮತ್ತು ಕಾರವಾರ ಗೋಮಾಂತ ಮಂಚ್ ಎಂಬ ಹೆಸರಿನ ಎರಡು ಸಂಘಟನೆಗಳು ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ, ಕಾರವಾರ ಮತ್ತು ಹಳಿಯಾಳ ತಾಲೂಕುಗಳನ್ನು ಗೋವಾ ರಾಜ್ಯಕ್ಕೆ ಸೇರಿಸಬೇಕೆಂದು ಹುನ್ನಾರವನ್ನು ನಡೆಸಿದಾಗ ಅದರ ವಿರುದ್ಧ ಕಾರವಾರದಲ್ಲಿ ದೊಡ್ಡ ಜಾಗೃತಿ ಜಾಥಾವನ್ನು ನಡೆಸಿದ್ದೆವು. ಇದರ ಬಗ್ಗೆ ನಮ್ಮ ಅಧ್ಯಕ್ಷರ ಮಾತುಗಳು ಹೀಗಿವೆ : ಪ್ರೀತಿಯ ಕನ್ನಡಿಗ, ಸುಮ್ಮನಿದ್ರೆ ಇಲೀನೂ ಹುಲಿ ಬಾಲ ಕಡಿಯುತ್ತಂತೆ ಅಂತ ಒಂದು ಗಾದೆ ಇದೆ. ಕನ್ನಡಿಗರು ಬಹಳ ಸಹನಶೀಲರು, ಪರಭಾಷಾ ಸಹಿಷ್ಣುಗಳು, ನಮ್ಮ ನಾಡಲ್ಲಿ ಯಾವ ಭಾಷೆಯವರಾದರೂ ಸುಖವಾಗಿ ಬದುಕಬಹುದು ಎನ್ನುವ ಹೊಗಳಿಕೆಗಳು ಇದೀಗ ಹೊನ್ನಶೂಲಗಳಾಗಿವೆ. ಕರ್ನಾಟಕವೆನ್ನುವ ಈ ನಮ್ಮ ತಾಯಿನಾಡನ್ನು ಸುತ್ತುವರೆದಿರುವ ಐದು ರಾಜ್ಯಗಳು ನಮ್ಮ ಈ ಸಹನಶೀಲತೆಯನ್ನೇ ಬಂಡವಾಳವಾಗಿಸಿಕೊಂಡು ನಮ್ಮ ನೆಲ ಜಲ ನುಡಿಗಳ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಗಡಿ ವಿಷಯದಲ್ಲಿ ಬೆಳಗಾವಿಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ವಿದ್ರೋಹದ ವಿಷವನ್ನು ನೆರೆಯ ನೆಮ್ಮದಿಯ ಕಾರವಾರಕ್ಕೆ ಹಚ್ಚಲು ಯತ್ನಿಸಿತು. ಕೊಂಕಣಿಯನ್ನು ಮರಾಠಿಯ ಉಪಭಾಷೆ, ಹಾಗಾಗಿ ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ವರಾತೆ ತೆಗೆಯಿತು. ಈ ಪ್ರಯತ್ನದಲ್ಲಿ ಕಾರವಾರದಿಂದ ಕಾಂಗ್ರೆಸ್ ವತಿಯಿಂದ ೧೯೬೦ರ ದಶಕದಲ್ಲಿ ಎಮ್.ಇ.ಎಸ್ ಶಾಸಕರೊಬ್ಬರು ಆಯ್ಕೆಯಾದ ಇತಿಹಾಸವೂ ಇದೆ. ಆದರೆ ಮರಾಠಿಯ ಉಪಭಾಷೆಯೆನ್ನುವುದು ತನ್ನ ಅಸ್ತಿತ್ವಕ್ಕೆ ಮುಳುವಾಗುವುದು ಎನ್ನುವುದನ್ನು ಅರಿತ ಕಾರವಾರ ಜನತೆ ಎಮ್.ಇ.ಎಸ್‌ನ ನಿಜಬಣ್ಣವನ್ನು ತಿಳಿದು ಅವರಿಂದ ದೂರವಾಗಿಯೇ ಉಳಿದರು. ಇದಕ್ಕೂ ಮುನ್ನ ಕರ್ನಾಟಕ ಏಕೀಕರಣದ ವೇಳೆಗೆ ಇಲ್ಲಿನ ಜನತೆ ಕರ್ನಾಟಕದಲ್ಲಿ ಉಳಿಯುವುದಾಗಿ ತೀರ್ಮಾನಿಸಿದ್ದಾರೆ. ಮುಂದೆ ಮಹಾರಾಷ್ಟ್ರದ ಒತ್ತಾಯದಂತೆ ರಚಿತವಾದ 'ಮಹಾಜನ ಆಯೋಗ'ದ ಎದುರು ತಮ್ಮ ಅನಿಸಿಕೆ ಹೇಳಿಕೊಳ್ಳುವ ಅವಕಾಶ ದೊರೆತಾಗ ತಮ್ಮ ಏಳಿಗೆ ಕರ್ನಾಟಕದಲ್ಲಿಯೇ ಮತ್ತು ತಮ್ಮ ಅಸ್ತಿತ್ವ ಮತ್ತು ತಮ್ಮತನದ ಉಳಿವು ಕನ್ನಡಿಗರೊಂದಿಗೆ ಬದುಕುವುದರಿಂದ ಮಾತ್ರ ಸಾಧ್ಯ ಎನ್ನುವುದನ್ನು ಅರಿತೇ ಕರ್ನಾಟಕದಲ್ಲಿ ಉಳಿಯುವ ತೀರ್ಮಾನವನ್ನು ದಾಖಲಿಸಿದರು. ಇದೀಗ ಕೊಂಕಣಿ ರಾಜ್ಯ ಏಕೀಕರಣ ಮಂಚ್ ಮತ್ತು ಕಾರವಾರ ಗೋಮಾಂತ ಮಂಚ್ ಎಂಬ ಹೆಸರಿನ ಎರಡು ಸಂಘಟನೆಗಳು ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಒಂದು ಅರ್ಜಿ ಸಲ್ಲಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ, ಕಾರವಾರ ಮತ್ತು ಹಳಿಯಾಳ ತಾಲೂಕುಗಳನ್ನು ಗೋವಾ ರಾಜ್ಯದಲ್ಲಿ ಸೇರಿಸಬೇಕೆಂದು ಹೊಸ ಕೂಗನ್ನು ಎತ್ತಿದ್ದಾರೆ. ಕೊಂಕಣಿ ಭಾಷಿಕರಿಗೆ ಕರ್ನಾಟಕದಿಂದ ಕಿರುಕುಳವಾಗುತ್ತಿದೆ, ತಮ್ಮ ಪ್ರದೇಶವನ್ನು ಭಾಷೆಯ ಕಾರಣದಿಂದಾಗಿ ಹಿಂದುಳಿಯುವಂತೆ ಮಾಡಲಾಗಿದೆ, ಕೊಂಕಣಿ ಭಾಷಿಕರಿಗೆ ಕರ್ನಾಟಕದಲ್ಲಿ ಉದ್ದೇಶಪೂರ್ವಕವಾಗಿ ಕೆಲಸ ಕೊಡುತ್ತಿಲ್ಲ ಎಂಬೆಲ್ಲಾ ಸಮರ್ಥನೆಗಳನ್ನು ಕೊಟ್ಟಿದ್ದಾರೆ. ರಾಜ್ಯ ರಾಜ್ಯಗಳ ಗಡಿ ವಿಷಯ ತೀರ್ಮಾನಿಸುವ ವಿಷಯದಲ್ಲಿ ಸುಪ್ರಿಂಕೋರ್ಟ್ ಹೆಚ್ಚಿನ ಸಹಾಯ ಮಾಡಲಾಗದು ಮತ್ತು ಇದನ್ನು ತೀರ್ಮಾನ ಮಾಡುವ ಏಕೈಕ ಅಧಿಕಾರ ಇರುವುದು ಸಂಸತ್ತಿಗೆ ಎನ್ನುವ ಅರಿವಿದ್ದರೂ ಕಿರುಕುಳ ನೀಡುವ ಉದ್ದೇಶದಿಂದ ಇಂತಹ ಕೂಗನ್ನು ಎಬ್ಬಿಸಲಾಗುತ್ತಿದೆ. ಈ ಕಾರಣಕ್ಕಾಗಿ ಹಳ್ಳಿ ಹಳ್ಳಿಗಳ ಕೊಂಕಣಿ ಜನರಲ್ಲಿ ಜಾಗೃತಿಯ ಹೆಸರಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲಾಗುತ್ತಿದೆ. ಇಂತಹುದೇ ಕೂಗನ್ನು ನಮ್ಮ ಪ್ರದೇಶವನ್ನು ಅಭಿವೃದ್ಧಿ ಮಾಡದೆಯೇ ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎನ್ನುತ್ತಾ ಹೈದರಬಾದ್ ಕರ್ನಾಟಕ ಏಕೀಕರಣ ಎನ್ನುವ ಹೆಸರಲ್ಲಿ ಕೆಲಶಕ್ತಿಗಳು ಎತ್ತುತ್ತಿವೆ. ಆ ಮೂಲಕ ಕನ್ನಡ ನಾಡನ್ನು ಒಡೆಯುವ ಸಂಚು ಮಾಡುತ್ತಿವೆ. ನಿಜ, ನಮ್ಮ ನಾಡಿನ ಕೆಲ ಪ್ರದೇಶಗಳು ಅಭಿವೃದ್ಧಿಯಾಗಿಲ್ಲ. ಇದಕ್ಕೆ ಕಾರಣಕರ್ತರು ಯಾರು? ಅಲ್ಲಿಂದಲೂ ಶಾಸಕರು, ಸಂಸದರು ಆಯ್ಕೆಯಾಗುತ್ತಾ ಬಂದಿಲ್ಲವೇ. ಆ ಭಾಗಗಳ ಶಾಸಕರುಗಳು ನಮ್ಮ ನಾಡಿನಲ್ಲಿ ಮಂತ್ರಿಗಳೂ, ಮುಖ್ಯಮಂತ್ರಿಗಳೂ ಆಗಿಲ್ಲವೇ? ಪ್ರಾಮಾಣಿಕವಾದ ಜನಪರವಾದ ಕಾಳಜಿ ಇಲ್ಲದ ಜನಪ್ರತಿನಿಧಿ(?)ಗಳ ಕೊರಳ ಪಟ್ಟಿಯನ್ನು ಹಿಡಿದು ನ್ಯಾಯ ಕೇಳುವ ಬದಲಿಗೆ ಪ್ರತ್ಯೇಕತೆಯ ಕೂಗು ಹಾಕುತ್ತಿರುವುದು ನಿಜಕ್ಕೂ ಖಂಡನೀಯ. ಇದೀಗ ಕಾರವಾರದಲ್ಲಿ ಎದ್ದಿರುವ ನಾಡು ಒಡೆಯುವ ಹುನ್ನಾರದ ಹಿಂದಿರುವುದು ಪ್ರಾಮಾಣಿಕವಾದ ಕೊಂಕಣಿ ಪರವಾದ ಕಾಳಜಿಯೂ ಅಲ್ಲ. ತಮ್ಮ ವೈಯುಕ್ತಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ತಮ್ಮ ಉದ್ದಿಮೆಗಳನ್ನು ಬೆಳಸಿಕೊಳ್ಳಲು ಕೆಲವೇ ಜನ ಮಾಡುತ್ತಿರುವ ಸಂಚು ಇದಾಗಿದೆ. ನೆಮ್ಮದಿಯ ವಿಷಯವೆಂದರೆ ಈ ಕೂಗಿಗೆ ನಾಡಿನ ಕೊಂಕಣಿ ಜನರಿಂದ ಉತ್ತೇಜನ ಸಿಕ್ಕಿಲ್ಲ ಮತ್ತು ಪ್ರಜ್ಞಾವಂತ ಕೊಂಕಣಿಗರು ಈ ಮನೆ ಒಡೆಯುವ ಹುನ್ನಾರವನ್ನು ಖಂಡಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯು ಈ ಎಲ್ಲ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಾ ಬಂದಿದೆ. ಟಿ.ಎ. ನಾರಾಯಣ ಗೌಡ |