ಅಕ್ಕರೆಯ ಕನ್ನಡಿಗ, ಕರ್ನಾಟಕ ರಕ್ಷಣಾ ವೇದಿಕೆಯು ಆಯೋಜಿಸಿದ್ದ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ನಿರೀಕ್ಷೆಗೂ ಮೀರಿ ಯಶಗಳಿಸಿದೆ. ಸಮಾವೇಶದಲ್ಲಿ ನಡೆದ ವಿಚಾರ ಸಂಕಿರಣ, ಅನಿವಾಸಿ ಕನ್ನಡಿಗರಿಗೆ ಅಭಿನಂದನೆ ಸಲ್ಲಿಕೆ, ಜಾನಪದೋತ್ಸವ ಮತ್ತು ಏಳು ಜನ ಸಾಧಕರಿಗೆ ಕನ್ನಡನಾಡಿನ ಮಹನೀಯರ ಹೆಸರಲ್ಲಿ ಕೊಡಮಾಡಲಾದ ಪ್ರಶಸ್ತಿ ಪ್ರದಾನ ಸಮಾರಂಭಗಳು ಈ ಸಮಾವೇಶದ ಮುಖ್ಯಾಂಶಗಳು. ಜೊತೆಯಲ್ಲೇ ಕನ್ನಡಿಗರ ಬದುಕನ್ನು ಕಟ್ಟಲು ಇಂದು ಅಗತ್ಯವಾಗಿ ಆಗಲೇಬೇಕಾದ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮತ್ತು ನಲವತ್ತೆರಡು ಮಹತ್ವದ ನಿರ್ಣಯಗಳನ್ನು ಅಂದಿನ ಕಾರ್ಯಕ್ರಮದಲ್ಲಿ ಮಂಡಿಸಲಾಯಿತು. ಈ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ ಎಲ್ಲ ಬಂಧುಗಳಿಗೆ ನನ್ನ ಅಭಿನಂದನೆಗಳು. ೨೦೦೯ರ ವರ್ಷಪೂರ್ತಿ ನಾವು ಈ ಬಾರಿಯ ಸಮಾವೇಶದಲ್ಲಿ ಮಂಡಿಸಿದ ನಿರ್ಣಯಗಳ ಆಧಾರದ ಮೇಲೆ ಹೋರಾಟಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಬದ್ಧರಾಗಿದ್ದೇವೆ. ರಾಜ್ಯಸರ್ಕಾರ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಸಲು ಮುಂದಾದಾಗ ಎಂ.ಇ.ಎಸ್ ಇದಕ್ಕೆ ಪ್ರತಿಯಾಗಿ ಮರಾಠಿ ಮಹಾಮೇಳಾವಾ ಒಂದನ್ನು ನಡೆಸಲು ಮುಂದಾಯಿತು. ಕಡೇ ಕ್ಷಣದವರೆಗೆ ಇದಕ್ಕೆ ಅನುಮತಿ ನಿರಾಕರಿಸಲು ಹಿಂದೆಮುಂದೆ ನೋಡುತ್ತಿದ್ದ ರಾಜ್ಯಸರ್ಕಾರ, ನಮ್ಮ ಒತ್ತಡಕ್ಕೆ ಮಣಿದು ಕಡೆಗೂ ಮರಾಠಾ ಮಹಾಮೇಳಾವಕ್ಕೆ ಅನುಮತಿ ನೀಡದೆ ಹೋದದ್ದು ಒಳ್ಳೆಯ ಬೆಳವಣಿಗೆ. ಆದರೆ ಕರ್ನಾಟಕಕ್ಕೆ ಪಕ್ಕದ ಮಹಾರಾಷ್ಟ್ರದಿಂದ ರಾಜಕಾರಣಿಗಳನ್ನೂ, ಜನರನ್ನೂ ಕರೆತಂದು ನಮ್ಮ ಸರ್ಕಾರಕ್ಕೇ ಸವಾಲಾಗಿ, ನಮ್ಮ ನಾಡಿನಲ್ಲೇ ಒಂದು ಸಮಾನಾಂತರವಾದ ಸಮಾವೇಶ ಮಾಡುತ್ತೇವೆ ಅನ್ನುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಉದ್ಧಟತನದ ಕ್ರಮಗಳನ್ನು ನಾವು ಮಟ್ಟಹಾಕಲೇಬೇಕಾಗಿದೆ. ಮಹಾಜನ್ ವರದಿ ಬೆಳಗಾವಿ ವಿವಾದಕ್ಕೆ ಅಂತಿಮ ಪರಿಹಾರ. ಇದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಸಲ್ಲದ ಸಂಘರ್ಷಕ್ಕೆ ಮುಂದಾಗಿರುವ ಎಂ.ಇ.ಎಸ್‌ನ ಪುಂಡಾಟಿಕೆಗೆ ಬೆಳಗಾವಿಯೂ ಸೇರಿದಂತೆ ಕರ್ನಾಟಕದ ಯಾವ ಮರಾಠಿಗರ ಬೆಂಬಲವೂ ಇಲ್ಲ. ಇದು ಮನವರಿಕೆಯಾದ್ದರಿಂದಲೇ ಎಂ.ಇ.ಎಸ್ ಮಹಾರಾಷ್ಟ್ರದ ರಾಜಕಾರಣಿಗಳನ್ನು ಈ ಮನೆಮುರುಕು ಕೆಲಸಕ್ಕೆ ಬಳಸಿಕೊಳುತ್ತಿದೆ. ಪಕ್ಕದ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನದ ವ್ಯಕ್ತಿಯೊಬ್ಬ ನಮ್ಮ ನಾಡಿಗೆ ಬಂದು ನಾಡೊಡೆಯುತ್ತೇವೆ ಎನ್ನುವುದು ಅಕ್ಷಮ್ಯವಾಗಿದೆ. ಕನ್ನಡಿಗರನ್ನು ಕೈ ಕತ್ತರಿಸುತ್ತೇವೆ, ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತೇವೆ ಎಂದು ನೇರವಾಗೇ ಹೇಳಿದ ಮಹಾರಾಷ್ಟ್ರದ ವಿರೋಧಪಕ್ಷದ ನಾಯಕರನ್ನು ಆ ಕ್ಷಣವೇ ಬಂಧಿಸಿ ಜೈಲಿಗಟ್ಟಬೇಕಿತ್ತೆನ್ನುವುದು ನಮ್ಮ ನಿಲುವು. ಈ ಮಹಾಮೇಳಾವ ಹೆಸರಿನ ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡನಾಡಿನ ಬಸ್ಸುಗಳ ಮೇಲಿನ ಆಕ್ರಮಣ ಎಂ.ಇ.ಎಸ್‌ನ ಹತಾಶತನದ ಪ್ರತೀಕವಾಗಿದೆ. ನಾಡಿನ ಹಿತಕ್ಕೆ ವಿರುದ್ಧವಾದ ಶಕ್ತಿಗಳು ಎಷ್ಟೇ ಬಲಿಷ್ಟವಾಗಿದ್ದರೂ ಅವುಗಳ ವಿರುದ್ಧ ಹೋರಾಟ ಸಂಘಟಿಸಿ ಅವುಗಳನ್ನು ಇಲ್ಲವಾಗಿಸದೇ ಕರ್ನಾಟಕ ರಕ್ಷಣಾ ವೇದಿಕೆ ವಿರಮಿಸದು. ಇದಾದ ಮೂರು ದಿನಗಳಲ್ಲೇ ಬೆಂಗಳೂರಿನ ಮಹಾರಾಷ್ಟ್ರ ಬ್ಯಾಂಕ್ ಬಳಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ಯಾವ ಪ್ರಚೋದನೆಯೂ ಇಲ್ಲದೆ, ಮುನ್ಸೂಚನೆಯೂ ನೀಡದೆ ಪೊಲೀಸರು ಏಕಾಏಕಿ ಲಾಠಿಛಾರ್ಜ್ ಮಾಡಿ ಅತ್ಯಂತ ಅಮಾನುಷವಾಗಿ ನಮ್ಮ ಅನೇಕ ಕಾರ್ಯಕರ್ತರ ಮೂಳೆಗಳನ್ನು ಮುರಿದುಹಾಕಿದರು. ಲಾಠಿ, ಬೂಟು, ಬಂದೂಕುಗಳಿಗೆ ಬೆದರುವ ಜಾಯಮಾನ ನಮ್ಮದಲ್ಲ ಎಂಬುದು ಇಡೀ ನಾಡಿಗೆ ಗೊತ್ತಿರುವ ಸಂಗತಿ. ಚಳವಳಿಗಳನ್ನು ಹತ್ತಿಕ್ಕುವ ಈ ಅಮಾನವೀಯ ಕೃತ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಗಂಭೀರವಾಗಿ ಪರಿಗಣಿಸಿದ್ದು ಇಂತಹ ಅತಿರೇಕಕ್ಕೆ ಮುಂದಾದ ಪೊಲೀಸ್ ಇಲಾಖೆಯ ಈ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಮಾಡುತ್ತೇವೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜಿರಹಿತ ಹೋರಾಟಗಳಿಗೆ ತಮ್ಮಗಳ ಬೆಂಬಲ ಹೀಗೇ ಇರಲಿ ಎಂದು ವಿನಂತಿಸಿಕೊಳ್ಳುತ್ತೇನೆ. ವಿಶ್ವಾಸದೊಂದಿಗೆ ಟಿ.ಏ.ನಾರಾಯಣ ಗೌಡ ರಾಜ್ಯಾಧ್ಯಕ್ಷರು |