Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಅಧ್ಯಕ್ಷರ ನುಡಿ : ಕರವೇ ೧೦ ವರ್ಷ ಪೂರೈಸಿದ ಬಗ್ಗೆ

ಅಧ್ಯಕ್ಷರ ನುಡಿ

ಅಕ್ಕರೆಯ ಕನ್ನಡಿಗಾ,

ಒಂದು ಮಹಾ ಸಂಕ್ರಮಣದ ಹೊಸ್ತಿಲಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ನಿಂತಿದೆ. ಸಂಘಟನೆಯು ಹತ್ತುವರ್ಷಗಳನ್ನು ಪೂರೈಸಿದ ಸಂಭ್ರಮದ ಸನ್ನಿವೇಶದಲ್ಲೇ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಈ ಒಂದು ಬೆಳವಣಿಗೆಗಳ ಬಗ್ಗೆ ನಿಮ್ಮೊಂದಿಗೆ ಇಂದು ಮಾತನಾಡಬೇಕಾಗಿದೆ. ಸಾಂದರ್ಭಿಕವಾಗಿ ಸಂಘಟನೆಯ ಹುಟ್ಟು ಮತ್ತು ನಡೆದು ಬಂದ ಹಾದಿಯ ಬಗ್ಗೆ ಮೆಲುಕು ಹಾಕೋಣ.

೧೯೯೯ರಲ್ಲಿ ಒಂದು ವಿಶಿಷ್ಠವಾದ ಸನ್ನಿವೇಶದಲ್ಲಿಯೇ ಕರ್ನಾಟಕ ರಕ್ಷಣಾ ವೇದಿಕೆ ಜನ್ಮ ತಾಳಿತು. ಅಂದು ಬೆಂಗಳೂರಿನ ಕೇಂದ್ರೀಯ ಲೆಕ್ಕಪರಿಶೋಧಕ ಕಛೇರಿಯಲ್ಲಿ (ಏಜೀಸ್ ಆಫೀಸ್) ಖಾಲಿಯಿದ್ದ ಕೆಲವು ಹುದ್ದೆಗಳನ್ನು ಅಲ್ಲಿನ ಕೆಲವು ಮೇಲಧಿಕಾರಿಗಳ ಕುತಂತ್ರ ಮತ್ತು ಸ್ವಜನ ಪಕ್ಷಪಾತದಿಂದಾಗಿ ಹೊರನಾಡಿಗರಿಗೆ ನೀಡಲಾಯಿತು. ಅರ್ಹತೆಯಿರುವ ಅಭ್ಯರ್ಥಿಗಳು ನಮ್ಮ ನಾಡಿನಲ್ಲೇ ಇದ್ದಾಗಲೂ ನೆರೆಯ ನಾಡಿನಿಂದ ಜನರನ್ನು ಕರೆತಂದ ಆ ಕ್ರಮವನ್ನು ಪ್ರತಿಭಟಿಸಲಾಯ್ತು. ಅಂದು ಜನ್ಮತಳೆದ ಕರ್ನಾಟಕ ರಕ್ಷಣಾ ವೇದಿಕೆಯು ನಂತರದ ದಿನಗಳಲ್ಲಿ ನಾಡಿನಾದ್ಯಂತ ಹಬ್ಬಿಕೊಳ್ಳುತ್ತಾ, ನಾಡು ನುಡಿ ನಾಡಿಗರ ರಕ್ಷಣೆಯ ಬಹಳಷ್ಟು ಹೋರಾಟಗಳನ್ನು ಯಶಸ್ವಿಯಾಗಿ ನಡೆಸಿದೆ. ಅಲ್ಲಿಯವರೆಗೂ ಮೈಸೂರು ಬ್ಯಾಂಕ್ ವೃತ್ತಕ್ಕೆ ಸೀಮಿತವಾಗಿದ್ದ ಕನ್ನಡ ಚಳವಳಿಯನ್ನು ಇಡೀ ರಾಜ್ಯಕ್ಕೆ ಹಬ್ಬಿಸಿದ ಹಿರಿಮೆ ಕರ್ನಾಟಕ ರಕ್ಷಣಾ ವೇದಿಕೆಯದ್ದು. ತನ್ನ ಶಾಖೆಗಳನ್ನು ವಿಸ್ತರಿಸುತ್ತಾ ಊರೂರು, ಹಳ್ಳಿಹಳ್ಳಿಗಳಿಗೆ ಹರಡುತ್ತಾ ಸಾಗಿದ ಸಂಘಟನೆಯಲ್ಲಿ ಇಂದು ನಲವತ್ತು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರಿದ್ದಾರೆ ಮತ್ತು ನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಇದರ ಶಾಖೆಗಳಿವೆ.

ಕನ್ನಡ ಕನ್ನಡಿಗ ಕರ್ನಾಟಕದ ಹಿತಾಸಕ್ತಿಗಳಿಗೆ ಧಕ್ಕೆಯೊದಗಿದಾಗೆಲ್ಲಾ ಹೋರಾಟದ ಕಣಕ್ಕೆ ಧುಮುಕುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಅನೇಕ ಯಶಸ್ವಿ ಹೋರಾಟಗಳನ್ನು ಕೈಗೊಂಡಿದೆ. ಕಾವೇರಿ, ಕೃಷ್ಣಾ, ತುಂಗಭದ್ರಾ, ಕಳಸಾ-ಭಂಡೂರ, ಚಿತ್ರಾವತಿ ಮೊದಲಾದ ನೀರಾವರಿ ಸಮಸ್ಯೆಗಳು, ಆಲ್‌ಲೈನ್ ಲಾಟರಿ, ನಕಲಿ ರಸಗೊಬ್ಬರ, ಬೀಜಸಮಸ್ಯೆ, ರೇಷ್ಮೆಬೆಳೆ ಸಮಸ್ಯೆ, ನೆರೆಹಾವಳಿ, ತೆಂಗು ನುಸಿಪೀಡೆ ಮುಂತಾದ ರೈತ ಸಮಸ್ಯೆಗಳಿಗೆ ದನಿಯಾಗಿದೆ. ಕಾರವಾರ, ಬೆಳಗಾವಿ, ಹೊಗೆನಕಲ್, ಗೋವಾ, ಕಾಸರಗೋಡು, ಬಳ್ಳಾರಿ ಸೇರಿದಂತೆ ಗಡಿ ಭಾಗಗಳಲ್ಲಿ ಜನಾಭಿಪ್ರಾಯವನ್ನು ರೂಪಿಸಿ ಎಂ.ಇ.ಎಸ್‌ನಂತಹ ನಾಡದ್ರೋಹಿ ಸಂಘಟನೆಗಳ ನಿಜಬಣ್ಣ ಬಯಲು ಮಾಡಿ ನಿರ್ಣಾಯಕವಾಗಿ ಅವುಗಳ ಉಸಿರಡಗಿಸಲಾಗಿದೆ. ಸರಳ ಸಾಮೂಹಿಕ ವಿವಾಹ, ರಕ್ತದಾನ, ವಿದ್ಯಾರ್ಥಿಗಳಿಗೆ, ವಿಕಲಚೇತನರಿಗೆ ನೆರವು, ನಾಡು ನುಡಿಗಾಗಿ ದುಡಿದ ಹಿರಿಯರಿಗೆ ಗೌರವಾರ್ಪಣೆ, ಬದುಕು ಕಟ್ಟಿಕೊಳ್ಳಲು ಉಚಿತ ಹೊಲಿಗೆಯಂತ್ರ, ಗೂಡಂಗಡಿ, ಆಟೋ ರಿಕ್ಷಾ ಕೊಡುವುದರ ಜೊತೆಗೆ ಉದ್ದಿಮೆಗಾರಿಕೆಗೆ ನೆರವು ನೀಡಲಾಗಿದೆ. ನಾಡಿನ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಅನೇಕ ಹೋರಾಟಗಳನ್ನು ನಡೆಸಲಾಗಿದೆ. ಜನಪ್ರತಿನಿಧಿಗಳ ನಿಷ್ಕಾಳಜಿ, ನಿಷ್ಕ್ರಿಯತೆಗಳನ್ನು ಬಯಲಿಗೆಳೆದು ಪ್ರತಿಭಟಿಸಲಾಗಿದೆ. ಕನ್ನಡ ಕನ್ನಡಿಗ ಮತ್ತು ಕರ್ನಾಟಕಗಳ ರಕ್ಷಣೆಗಾಗಿ, ಏಳಿಗೆಗಾಗಿ ಸಾಮಾಜಿಕ ಸ್ತರದಲ್ಲಿ ಇಷ್ಟೆಲ್ಲಾ ರೀತಿಗಳಲ್ಲಿ ಶ್ರಮಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು ಇದೀಗ ರಾಜಕೀಯವಾದ ಹೋರಾಟವನ್ನು ಆರಂಭಿಸಲು ಮುಂದಾಗಿದೆ.

ನಾಡು ನುಡಿಗೆ ಧಕ್ಕೆಯಾಗುವಂತಹ ಬೆಳವಣಿಗೆಗಳನ್ನು ಪ್ರತಿಭಟಿಸುವ, ಅವುಗಳ ಸದ್ದಡಗಿಸುವ ಮಹತ್ವದ ಬೇಲಿ ಹಾಕುವ ಕೆಲಸ ಒಂದೆಡೆಯಾದರೆ, ನಾಳೆಗಳನ್ನು ಕಟ್ಟಿಕೊಡುವ ನಾಡನ್ನು ಸಮೃದ್ಧತೆಯತ್ತ ಕೊಂಡೊಯ್ಯುವ ಕೆಲಸ ಮತ್ತೊಂದು. ನಮ್ಮ ಹೋರಾಟಗಳು ಎಷ್ಟೇ ಪರಿಣಾಮಕಾರಿಯಾಗಿದ್ದರೂ ಅವುಗಳ ಮೂಲ ಉದ್ದೇಶವಾದ ಆಳುವವರನ್ನು ತಿದ್ದುವ, ಜನರಲ್ಲಿ ಜಾಗೃತಿ ಮೂಡಿಸುವಕೆಲಸಗಳಷ್ಟೇ ನಮ್ಮ ನಾಡನ್ನು ಏಳಿಗೆಯೆಡೆಗೆ ಕೊಂಡಯ್ಯಲು ಸಾಲದಾಗಿವೆ. ಇಂದು ಹೋರಾಟಗಳಿಗೂ ಮಿತಿಯೆಂಬುದಿದ್ದು ನಾಡಿನ ಒಳಿತುಆ ಮಿತಿಯನ್ನು ದಾಟದೆ ಸಾಧ್ಯವಿಲ್ಲವಾಗಿದೆ. ನಾಡಿನ ಸಮಸ್ಯೆಗಳ ಬುತ್ತಿಯ ಚೀಲ ತೆರೆದಷ್ಟೂ ಮುಗಿಯದಾಗಿದೆ. ಇದಕ್ಕೆಲ್ಲಾ ಮೂಲಕಾರಣ ನಮ್ಮ ನಾಡಲ್ಲಿ ಇಂದು ರಾಜಕಾರಣ ನಡೆಸುತ್ತಿರುವ ರಾಜಕೀಯ ಪಕ್ಷಗಳೇ ಆಗಿವೆ. ಇಲ್ಲೂ ಕೂಡಾ ಎರಡು ಸಮಸ್ಯೆಗಳಿವೆ. ಮೊದಲನೆಯದಾಗಿ, ಪ್ರಾಮಾಣಿಕವಾಗಿ ನಾಡಿನ ಪರವಾಗಿ ದನಿಯೆತ್ತಬಲ್ಲ ಜನಪ್ರತಿನಿಧಿಗಳ ಕೊರತೆ. ಇಂದಿನ ಕರ್ನಾಟಕದ ಯಾವ ರಾಜಕಾರಣಿಯೂ ಸಮರ್ಥವಾಗಿ ರಾಜ್ಯದ ಪರವಾಗಿ ಕೇಂದ್ರದಲ್ಲಾಗಲೀ, ವಿಧಾನಸೌಧದಲ್ಲಾಗಲೀ ದನಿಯೆತ್ತುತ್ತಿರುವುದು ವಿರಳವಾಗಿದೆ. ಎರಡನೆಯದಾಗಿ ನಾಡಿನ ರಾಜಕೀಯ ಪಕ್ಷಗಳ ಸಿದ್ಧಾಂತವೇ ಕನ್ನಡ ಕನ್ನಡಿಗ ಕರ್ನಾಟಕ ಕೇಂದ್ರಿತವಾಗಿಲ್ಲ. ಯಾವ ರಾಜಕೀಯ ಪಕ್ಷಕ್ಕೂ ನಮ್ಮ ನಾಡಿನ ಹಿತವೇ ಪರಮ ಗುರಿಯಾಗಿಲ್ಲ. ಇವುಗಳ ಜುಟ್ಟು ದೆಹಲಿಯ ಹೈಕಮಾಂಡಿನ ಕೈಯ್ಯಲ್ಲಿದೆ. ಆ ಕಾರಣದಿಂದಲೇ ಇವು ನಮ್ಮ ನಾಡಿನ ಸಮಸ್ಯೆಗಳನ್ನು ಬಗೆಹರಿಸಲಾರವು. ನಮ್ಮ ಪರವಾಗಿ ದನಿಯೆತ್ತಿ ನಿಲ್ಲಲಾರವು. ಕರ್ನಾಟಕದಲ್ಲಿ ಕನ್ನಡಪರವಾಗಿ ಜಾರಿಯಾಗಬೇಕಾದ ಅದೆಷ್ಟೊ ವರದಿಗಳು ಜಾರಿಯಾಗದಿರುವುದು ಇಂತಹಾ ರಾಜಕೀಯ ಪಕ್ಷಗಳಿಂದಲೇ. ಕೆಲಸದ ಹಕ್ಕನ್ನು ಪ್ರತಿಪಾದಿಸಿದ ಸರೋಜಿನಿ ಮಹಿಷಿ ವರದಿ, ಅಸಮಾನತೆಯನ್ನು ಅಳಿಸುವ ಉದ್ದೇಶದ ನಂಜುಂಡಪ್ಪ ವರದಿ, ಗಡಿ ನಾಡಿಗೆ ಅನ್ವಯಿಸುವ ಅನೇಕ ವರದಿಗಳು, ಶಿಕ್ಷಣ - ಆಡಳಿತ ಸುಧಾರಣಾ ಕ್ರಮಗಳು, ನಾಡಿನ ಸಂಪನ್ಮೂಲ ಕಾಪಾಡುವ ನೀತಿಗಳು... ಇವ್ಯಾವುದನ್ನೂ ಜಾರಿಗೆ ತರಲಾಗದೆ ಇರಲು ಇರುವ ಮುಖ್ಯ ಕಾರಣವೇ ಈ ನಮ್ಮ ನಾಡಿನ ರಾಜಕೀಯ ಪಕ್ಷಗಳು ಕನ್ನಡ ಕೇಂದ್ರಿತವಾಗಿಲ್ಲದೇ ಇರುವುದು. ನಮ್ಮ ನಾಡಿನಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿಸುವ ದಿಟ್ಟ ಪ್ರಾಮಾಣಿಕ ಕ್ರಮಕ್ಕೆ ಇವೆಂದಿಗೂ ಮುಂದಾಗಲಾರವೇನೋ ಅನ್ನಿಸುವಂತಿದೆ ಇಂದಿನ ಪರಿಸ್ಥಿತಿ.

ಇದಕ್ಕೆಲ್ಲಾ ಪರಿಹಾರ ಒಂದೇ. ಅದು ನಮ್ಮ ನಾಡಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಈ ಮಣ್ಣಿನ ಮಕ್ಕಳದೇ ಆದ ಕನ್ನಡ ಕನ್ನಡಿಗ ಕರ್ನಾಟಕಗಳನ್ನು ಕೇಂದ್ರವಾಗಿಸಿಕೊಂಡ ರಾಜಕೀಯ ಪಕ್ಷ. ಅಂತಹ ರಾಜಕೀಯ ಶಕ್ತಿಯೊಂದು ಇಂದಿನ ತುರ್ತು ಅಗತ್ಯವಾಗಿದೆ. ಈ ಅಗತ್ಯವನ್ನು ಪೂರೈಸಬಲ್ಲ ಶಕ್ತಿ ಮತ್ತು ಯೋಗ್ಯತೆ ಇಂದು ಇರುವುದು ಕರ್ನಾಟಕ ರಕ್ಷಣಾ ವೇದಿಕೆಗೆ ಮಾತ್ರವೇ ಅನ್ನುವುದು ನಿರ್ವಿವಾದವಾದ ಜನಾಭಿಪ್ರಾಯವಾಗಿದೆ.

ನಾಡಿನ ಮೂಲೆಮೂಲೆಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯು ರಾಜಕೀಯ ಶಕ್ತಿಯಾಗಬೇಕೆಂಬ ಕೂಗು ಬಹುವಾಗಿ ಕೇಳಿಬರುತ್ತಿದೆ. ನಾಡಿನ ಹಿತ ಕಾಪಾಡುವ ನೀತಿಗಳನ್ನು ರೂಪಿಸುವುದರಲ್ಲಾಗಲೀ, ನಾಡಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುವುದರಲ್ಲಾಗಲೀ, ನಾಡನ್ನು ದೆಹಲಿಯಲ್ಲಿ ಸಮರ್ಥವಾಗಿ ಪ್ರತಿನಿಧಿಸುವುದರಲ್ಲಿಯೇ ಆಗಲೀ ಸಂಪೂರ್ಣವಾಗಿ ಸೋತಿರುವ ನಾಡಿನ ಇಂದಿನ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಕರ್ನಾಟಕ ರಕ್ಷಣಾ ವೇದಿಕೆಯು ರಾಜಕೀಯ ರಂಗಕ್ಕೆ ಧುಮುಕಲು ನಾಡಿನ ಜನತೆಯ ಒತ್ತಾಸೆಯೇ ಕಾರಣವಾಗಿದೆ. ನಿಮ್ಮ ಪ್ರೀತಿ ಅಭಿಮಾನ ಮತ್ತು ಬೆಂಬಲಗಳಿಂದಾಗಿ ಇದರಲ್ಲೂ ಯಶಗಳಿಸುವುದು ನಿಶ್ಚಿತ. ಬನ್ನಿ ಕನ್ನಡಿಗರೇ ಹೆಮ್ಮೆಯ, ಸ್ವಾಭಿಮಾನದ ಸಮೃದ್ಧ ಕರ್ನಾಟಕವನ್ನು ಕಟ್ಟೋಣ. ಸಮಗ್ರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸೋಣ. ಕನ್ನಡ ಸಂಸ್ಕೃತಿಯನ್ನು ಪ್ರಪಂಚದ ಭೂಪಟದಲ್ಲಿ ಮತ್ತೊಮ್ಮೆ ಮೆರೆಸೋಣ.


ಸಿರಿಗನ್ನಡಂ ಗೆಲ್ಗೆ        ಸಿರಿಗನ್ನಡಮ್ ಬಾಳ್ಗೆ        ಸಿರಿಗನ್ನಡಂ ಆಳ್ಗೆ

 

ಅಧ್ಯಕ್ಷರ ನುಡಿ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ