Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಅಧ್ಯಕ್ಷರ ನುಡಿ :ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ

ಅಧ್ಯಕ್ಷರ ನುಡಿ
ಸ್ವಾಭಿಮಾನಿ ಕನ್ನಡಿಗ,

ಕರ್ನಾಟಕ ರಕ್ಷಣಾ ವೇದಿಕೆಯ ವೀರಸೇನಾನಿಗಳು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಒತ್ತಾಯಿಸಿ ನಡೆಸುತ್ತಿರುವ ಚಳವಳಿ ಇದೀಗ ಕಾವು ಪಡೆದುಕೊಳ್ಳುತ್ತಿದೆ. ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ, ಕನ್ನಡ, ಕನ್ನಡಿಗರೆಂದರೆ ಅದೆಷ್ಟು ಅಸಡ್ಡೆ ಇದೆ ಅನ್ನುವುದನ್ನು ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಇಂದು ಹೋರಾಟ ಮಾಡಬೇಕಾಗಿರುವ  ಪರಿಸ್ಥಿತಿಯೇ ತೋರಿಸಿಕೊಡುತ್ತಿದೆ.

ಮೊದಲಿಗೆ ೨೦೦೪ರಲ್ಲಿ ತಮಿಳಿಗೆ ಶಾಸ್ತ್ರೀಯ ಭಾಷಾ ಪಟ್ಟ ಕಟ್ಟುವಾಗ ಯಾವ ಸಮಿತಿ, ಯಾವ ನಿಬಂಧನೆಯೂ ಇರಲಿಲ್ಲ. ಇದೀಗ ಕನ್ನಡದ ವಿಷಯಕ್ಕೆ ಬಂದಾಗ ಇವೆಲ್ಲವನ್ನೂ ಹುಟ್ಟುಹಾಕಲಾಯಿತು. ಮೊದಲಿಗೆ ಭಾಷಾ ಹಳಮೆ ಒಂದು ಸಾವಿರ ವರ್ಷಗಳು ಎಂದಾಗ ಕನ್ನಡಕ್ಕೆ ಅಂತಹ ಹಳಮೆ ಇದೆ ಎನ್ನುವುದು ನಿರ್ವಿವಾದವಾಗಿ ಸಾಬೀತು ಮಾಡಲಾಯಿತು. ಕೂಡಲೇ ಆ ನಿಬಂಧನೆಯನ್ನು ಸಾವಿರದೈನೂರು ವರ್ಷಗಳಿಗೆ ಏರಿಸಲಾಯಿತು. ಯಾವ ಯಾವ ನಿಬಂಧನೆಗಳನ್ನು ತಮಿಳು ಪೂರೈಸುತ್ತದೋ ಮತ್ತು ಇತರೆ ಭಾಷೆಗಳು ಪೂರೈಸುವುದಿಲ್ಲವೋ ಅವನ್ನು ನಿಬಂಧನೆಗಳನ್ನಾಗಿಸಿ ನಿಮಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗದು ಎಂದು ಹೇಳುವ ಉದ್ದೇಶವಿರುವುದನ್ನು ಈ ನಡೆ ತೋರಿಸುವುದಿಲ್ಲವೇ? ಇದೀಗ ಒಟ್ಟಿನಲ್ಲಿ ಕನ್ನಡ ತೆಲುಗು ಭಾಷಾ ಪಂಡಿತರು ಸಾವಿರದೈನೂರು ವರ್ಷಗಳ ಭಾಷಾ ಹಳಮೆಯನ್ನು ಹೊಡೆದಾಡಿ ಸಾಬೀತು ಮಾಡಬೇಕಾಯಿತು.
 
 
 ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವುದನ್ನು ತಡೆಯಲು ಅಥವಾ ಸಾಧ್ಯವಾದಷ್ಟು ಮುಂದೂಡಲು ಹೇಗೆ ಹೆಜ್ಜೆ ಹೆಜ್ಜೆಗೂ ಪ್ರಯತ್ನಿಸಲಾಯಿತು ಎಂಬುದನ್ನು ನೋಡಿದರೆ ಒಕ್ಕೂಟ ವ್ಯವಸ್ಥೆಯೆಂಬುದು ನಿಜಕ್ಕೂ ಕೆಲಸ ಮಾಡುತ್ತಲೇ ಇಲ್ಲವೇನೋ ಅನ್ನಿಸುತ್ತದೆ. ಸಮಿತಿಯ ಒಳಗಿನ ಸದಸ್ಯರುಗಳಲ್ಲಿ ತಮಿಳು ಮೂಲದ ಇಬ್ಬರು ಯಾಕೆ ಕನ್ನಡಕ್ಕೆ ಇಂತಹ ಸ್ಥಾನಮಾನ ನೀಡುವುದನ್ನು ವಿರೋಧಿಸಿದರು? ಯಾಕೆ ವಿಶ್ವ ತಮಿಳು ಸಂಘ ತನಗೆ ಸಂಬಂಧವಿಲ್ಲದಿದ್ದರೂ ಸಮಿತಿಯನ್ನೇ ರದ್ದು ಮಾಡಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿತು? ತಮಿಳುನಾಡು ಸರ್ಕಾರ ತನಗೂ ಈ ಮೊಕದ್ದಮೆಗೂ ಯಾವ ಸಂಬಂಧವೂ ಇಲ್ಲ ಅಂದಿದ್ದು ಯಾಕೆ? ಈ ತಕರಾರು ಅರ್ಜಿಯನ್ನು ಇನ್ನೇನು ಸಮಿತಿ ತನ್ನ ಕೊನೆಯ ನಿರ್ಣಾಯಕ ಸಭೆಯನ್ನು ನಡೆಸುವ ಮುನ್ನ ಸಲ್ಲಿಸಲಾಯಿತು? ಏಕೆ? ಏಕೆ? ಒಕ್ಕೂಟ ವ್ಯವಸ್ಥೆಯೆಂದರೆ ಇಂತಹ ತೊಡರುಗಾಲು ಹಾಕುವುದೇ ಏನು?
 
ಇದೊಂದೇ ವಿಷಯವಲ್ಲ. ಮೊನ್ನೆ ಮೊನ್ನೆ ಕೊಯ್ನಾ ಅಣೆಕಟ್ಟೆಯ ಬಾಗಿಲು ತೆರೆದು ಬೆಳಗಾವಿಯಲ್ಲಿ ಪ್ರವಾಹಕ್ಕೆ ಕಾರಣವಾದ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳ ಹೇಳಿಕೆಯನ್ನೇ ಗಮನಿಸಿ. ನೀರು ಬಿಡಬೇಕಾದಾಗ ಕರ್ನಾಟಕಕ್ಕೆ ನಾವು ಹೇಳಲೇ ಬೇಕಾದ ಯಾವ ಕಟ್ಟಳೆಯಿಲ್ಲ ಅನ್ನುವ ಅವರ ಮಾತಿನ ಅರ್ಥವೇನು? ಕರ್ನಾಟಕ ಎನ್ನುವುದನ್ನು ಏಕೆ ಇಷ್ಟು ಹಗುರವಾಗಿ ಪರಿಗಣಿಸಲಾಗುತ್ತಿದೆ? ಪ್ರತಿಬಾರಿ ಮಹಾರಾಷ್ಟ್ರದಲ್ಲಿ ನೆರೆ ಬಂದಾಗಲೆಲ್ಲಾ ಕರ್ನಾಟಕದ ಆಲಮಟ್ಟಿಯ ಎತ್ತರವನ್ನು ದೂರುವ ಇವರು ಈಗ ನೇರಾನೇರ ನಮ್ಮಲ್ಲಿ ಹಾನಿಗೆ ಕಾರಣವಾಗಿದ್ದರೂ ಅದರ ಬಗ್ಗೆ ಯಾವ ಕಾಳಜಿಯೂ ಇಲ್ಲದಂತೆ ಮಾತಾಡುವುದನ್ನು ನೋಡಿದರೆ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಅಳುವ ಮಗುವಿಗೆ ಮಾತ್ರಾ ಹಾಲು ಎನ್ನುವ ನೀತಿಯೊಂದೇ ಜೀವಂತವಿರುವುದು ಎದ್ದುಕಾಣುತ್ತದೆ. ಇಂತಹ ಪ್ರಕೃತಿ ವಿಕೋಪಗಳ ಸಮಯದಲ್ಲಿ ನೆರೆಹೊರೆಯ ರಾಜ್ಯಗಳು ಹೇಗೆ ನಡೆದುಕೊಳ್ಳಬೇಕು? ಕೇಂದ್ರ ಸರ್ಕಾರದ ಹೊಣೆಗಾರಿಕೆಯೇನು? ಯಾವ ರೀತಿಯಲ್ಲಿ ಹಾನಿಯನ್ನು ಕಡಿಮೆ ಮಾಡಬೇಕು? ಇಂತಹ ಸನ್ನಿವೇಶಗಳಲ್ಲಿ ಹೇಗೆ ನಷ್ಟವನ್ನು ಸಮನಾಗಿ ಹಂಚಿಕೊಳ್ಳಬೇಕು? ಹೇಗೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು? ಎಂದೆಲ್ಲಾ ರೀತಿ ರೂಪಿಸಿ ಅದರಂತೆ ನಡೆದುಕೊಳ್ಳಬೇಕಲ್ಲವೇ? ಯಾಕೆ ಕರ್ನಾಟಕದೆಡೆಗೆ ಈ ತಾತ್ಸಾರ? ಭಾರತ ದೇಶದ ಈ ಒಕ್ಕೂಟ ವ್ಯವಸ್ಥೆಗೆ ಕನ್ನಡಿಗರ ಅಗತ್ಯವಿಲ್ಲವೇ ಎನ್ನುವ ಪ್ರಶ್ನೆ ಗಾಢವಾಗಿ ಕಾಡುತ್ತದೆ.
 

ಆ ಕಾರಣಗಳಿಂದಲೇ ಕೇಂದ್ರಸರ್ಕಾರಕ್ಕೆ ಇನ್ನು ಈ ತಾರತಮ್ಯವನ್ನು ಕನ್ನಡಿಗರು ಸಹಿಸುವುದಿಲ್ಲ ಎಂಬ ಸಂದೇಶ ನೀಡಲು ಮುನ್ನೆಚ್ಚರಿಕೆ ನೀಡಲಾಯಿತು. ಅದಕ್ಕೆ ಸ್ಪಂದಿಸದಿದ್ದಾಗಲೇ ಬಿ‌ಎಸ್‌ಎನ್‌ಎಲ್, ರೇಲ್ವೆ, ಕೇಂದ್ರೀಯ ಸದನವೇ ಮೊದಲಾದ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಮುತ್ತಿಗೆ ಹಾಕಲಾಯಿತು. ಕೇಂದ್ರ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದೇ ಕನ್ನಡಿಗರಿಗೆ ಅನ್ಯಾಯ ಮಾಡುವುದನ್ನು ಮತ್ತೂ ಮುಂದುವರಿಸುವುದಾದರೆ ಮುಂದಿನ ದಿನಗಳಲ್ಲಿ ಈ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. ನಾಡಿನ ಹಿತ ಕಾಯುವ ಹೋರಾಟಗಳಲ್ಲಿ ಯಾವ ರಾಜಿಗೂ ಕರ್ನಾಟಕ ರಕ್ಷಣಾ ವೇದಿಕೆ ಸಿದ್ಧವಿಲ್ಲ. ಲಾಠಿ, ಬೂಟು, ಗುಂಡಿನೇಟುಗಳು ನಮ್ಮ ನಾಡಪರ ನಿಲುವನ್ನು, ಹೋರಾಟದ ಕಿಚ್ಚನ್ನು ನಂದಿಸಲಾರವು. ಈ ನಮ್ಮ ಹೋರಾಟದಲ್ಲಿ ತಾವು ನಮ್ಮ ಬೆಂಬಲಕ್ಕೆ ನಿಲ್ಲಬೇಕೆಂದು ಈ ಮೂಲಕ ಕೋರುತ್ತೇವೆ.

ಇಂತಿ,

ಟಿ. ಏ. ನಾರಾಯಣ ಗೌಡ - ರಾಜ್ಯಾಧ್ಯಕ್ಷರು

 

ಅಧ್ಯಕ್ಷರ ನುಡಿ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ