Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಅಧ್ಯಕ್ಷರ ನುಡಿ - ಕನ್ನಡಿಗರ ಕೂಗನ್ನು ಕೇಂದ್ರ ಸರಕಾರಕ್ಕೆ ಮುಟ್ಟಿಸಲು ದೆಹಲಿಯಲ್ಲಿ ಪ್ರತಿಭಟನೆ

ಅಧ್ಯಕ್ಷರ ನುಡಿ
ಮೊಳಗಲಿದೆ ದೆಹಲಿಯಲ್ಲಿ ಕನ್ನಡದ ಕಹಳೆ . . . .

ನನ್ನ ಒಲುಮೆಯ ಅಭಿಮಾನಿ ಕನ್ನಡಿಗರೇ, ಕರ್ನಾಟಕ ರಕ್ಷಣಾ ವೇದಿಕೆಯ ಅಂತರ್ಜಾಲ ತಾಣಕ್ಕೆ ನಿಮ್ಮನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತೇನೆ. ಕನ್ನಡನಾಡಿನಲ್ಲಿ ಕನ್ನಡಿಗರು ಪರಭಾಷಿಕರ, ಪರಸಂಸ್ಕೃತಿಯ ದಾಳಿಗಳಿಗೆ ಸಿಲುಕಿ ನಲುಗುತ್ತಿರುವಾಗ, ತಮ್ಮ ಮೇಲೆ ನಡೆಯುತ್ತಿರುವ ಆಕ್ರಮಣಗಳನ್ನು ಮೌನವಾಗಿ ಸಹಿಸುತ್ತಲಿರುವಾಗ, ಕನ್ನಡಿಗ ಮರೆತೇಬಿಟ್ಟ ಎಂಬಂತಿದ್ದ ಪೌರುಷವನ್ನು ಮರಳಿ ಉದ್ದೀಪಿಸುತ್ತಾ ನಾಡ ಜನರಲ್ಲಿ ಸ್ವಾಭಿಮಾನದ ದೀಪ ಬೆಳಗುತ್ತಾ ಸಾಗಿರುವ 'ಕರ್ನಾಟಕ ರಕ್ಷಣಾ ವೇದಿಕೆ', ಇಂದು ನಾಡು-ನುಡಿ-ಗಡಿಗಳಿಗೆ, ಕನ್ನಡಿಗರ ಅಭಿಮಾನಕ್ಕೆ ಧಕ್ಕೆಯಾಗುವ ಸನ್ನಿವೇಶ ಬಂದಾಗಲೆಲ್ಲಾ ಹೋರಾಟದ ಕಣಕ್ಕೆ ಧುಮುಕಿ ಜಯಸಾಧಿಸುತ್ತಾ ಮುನ್ನಡೆದಿದೆ. 

ಬೆಳಗಾವಿ ನಗರ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರ ನಿರ್ಣಯ ಮಂಡಿಸಿದ್ದಾಗಲಾಗಲಿ, ಚಿತ್ರಾವತಿ ಅಣೆಕಟ್ಟೆಯ ಹೋರಾಟವಾದಾಗಲಾಗಲೀ, ಕನ್ನಡ ಕಾರ್ಯಕ್ರಮಗಳ ಪ್ರಸಾರಕ್ಕೆ ನಕಾರ ಹಾಡಿದ ಎಫ಼್.ಎಂ ಕೇಂದ್ರಗಳ ವಿರುದ್ಧದ ಹೋರಾಟವಾಗಿರಲಿ, ರೈಲ್ವೇಯಲ್ಲಿ ಕನ್ನಡ ಅಳಿಸುವ ಕೇಂದ್ರ ಸರ್ಕಾರದ ಆದೇಶದ ವಿರುದ್ಧವಾಗಲಿ, ವಿಮಾನ ನಿಲ್ದಾಣದಲ್ಲಿ ನೂರಾರು ಕನ್ನಡಿಗರನ್ನು ಕೆಲಸದಿಂದ ತೆಗೆದು ಹಾಕಿದ್ದ ಸಂದರ್ಭದಲ್ಲಿಯಾಗಲಿ, ಅಷ್ಟೇಕೆ, ಇತ್ತೀಚಿಗೆ ಬೆಂಗಳೂರಿನ ಶ್ರೀರಾಮಪುರದಲ್ಲಿ ಕನ್ನಡ ಬಾವುಟಕ್ಕೆ ಅಪಮಾನ ನಡೆದಾಗಲಾಗಲಿ . . . ಅತ್ಯಂತ ತ್ವರಿತವಾಗಿ ಸ್ಪಂದಿಸುವುದರ ಜೊತೆಜೊತೆಗೇ ತನ್ನ ದಿಟ್ಟ ಹೋರಾಟಗಳಿಂದ, ಕನ್ನಡ-ಕರ್ನಾಟಕ-ಕನ್ನಡಿಗರಿಗೆ ಸೂಕ್ತ ನ್ಯಾಯವನ್ನು ಸಕಾಲದಲ್ಲಿ ದೊರಕಿಸಿಕೊಡುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಫಲವಾಗಿದೆ. ಕನ್ನಡಿಗರು ಸಹನ ಶೀಲರು, ಸಹೃದಯರು ಎಂದಷ್ಟೇ ಅರಿತಿದ್ದ ಲೋಕಕ್ಕೆ ಕನ್ನಡಿಗರ ಸ್ವಾಭಿಮಾನವನ್ನು ಪರಿಚಯ ಮಾಡಿಕೊಡುತ್ತಿರುವ, ಕನ್ನಡ ವಿರೋಧಿಗಳಿಗೆ ಸಿಂಹಸ್ವಪ್ನವಾಗಿರುವ, ನಾಡಿನ  ಉದ್ದಗಲಕ್ಕೆ ಸಾವಿರಾರು ಶಾಖೆಗಳು, ಲಕ್ಷಾಂತರ ನಿಷ್ಠಾವಂತ ಕಾರ್ಯಕರ್ತರನ್ನು ಹೊಂದಿರುವ ಸಂಘಟನೆ 'ಕರ್ನಾಟಕ ರಕ್ಷಣಾ ವೇದಿಕೆ'. ನಿಮ್ಮ ಪ್ರೀತಿಯ ಕರ್ನಾಟಕ ರಕ್ಷಣಾ ವೇದಿಕೆ ಹೀಗೆ ಕೆಚ್ಚೆದೆಯಿಂದ ಕನ್ನಡದ ಸ್ವಾಭಿಮಾನದ ಕಹಳೆ ಮೊಳಗಿಸಲು ನಿಮ್ಮ ಸಹಾನುಭೂತಿ, ಅಪಾರವಾದ ಪ್ರೀತಿ ಮತ್ತು ಬೆಂಬಲಗಳೇ ಕಾರಣ. ಕನ್ನಡ-ಕನ್ನಡಿಗ-ಕರ್ನಾಟಕಗಳ ಹಿತ ಕಾಪಾಡುವ ವಿಷಯದಲ್ಲಿ ಯಾವುದೇ ಒತ್ತಡ, ಬೆದರಿಕೆ ಮತ್ತು ಆಮಿಶಗಳಿಗೆ ಮಣಿಯದೇ 'ಕರ್ನಾಟಕ ರಕ್ಷಣಾ ವೇದಿಕೆ' ಮುನ್ನಡಿ ಇಡಲು ನಿಮ್ಮ ವಿಶ್ವಾಸವೇ ಮೂಲವಾಗಿದೆ.
 
೨೫೦೦ ವರ್ಷಗಳಿಗೂ ಮಿಗಿಲಾದ ಸಾಹಿತ್ಯ ಪರಂಪರೆ ಹೊಂದಿರುವ ಕನ್ನಡ ಭಾಷೆಗೆ ನ್ಯಾಯಯುತವಾಗಿ ದಕ್ಕಲೇಬೇಕಾದ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ನಾಡಿನಾದ್ಯಂತ ಎದ್ದಿರುವ ಕೂಗನ್ನು ಕೇಂದ್ರಸರ್ಕಾರದ ಕಿವಿಗಳಿಗೆ ಮುಟ್ಟಿಸಲೆಂದು, ದಶಕಗಳಿಂದ ನೆನೆಗುದಿಗೆ ಬಿದ್ದಿರುವ 'ಮಹಾಜನ್ ವರದಿ'ಯೊಂದೇ ನಾಡಿನ ಗಡಿ ಸಮಸ್ಯೆಗೆ ಪರಿಹಾರ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಸಲೆಂದು, ಇದೇ ಜನವರಿ ತಿಂಗಳ ೧೬, ೧೭ ಮತ್ತು ೧೮ರಂದು ದೆಹಲಿಯ ಜಂತರ್-ಮಂತರ್‌ನಲ್ಲಿ 'ಕರ್ನಾಟಕ ರಕ್ಷಣಾ ವೇದಿಕೆ'ಯು ಭಾರಿ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಅಲ್ಲಿ ಕರ್ನಾಟಕ ರಕ್ಷಾಣಾ ವೇದಿಕೆಯ ಐದುನೂರಕ್ಕೂ ಹೆಚ್ಚಿನ ಕನ್ನಡದ ಕಟ್ಟಾಳುಗಳು, ಕೆಂಪು-ಹಳದಿಯ ಬಾವುಟಗಳೊಂದಿಗೆ ಕನ್ನಡಿಗರ ಆಕ್ರೋಶವನ್ನು ದೆಹಲಿಯ ಧಣಿಗಳಿಗೆ ಮುಟ್ಟಿಸಲಿದ್ದಾರೆ. ಕನ್ನಡಿಗರ ಸಹನೆ ಮುಗಿಯುವ ಮುನ್ನ ಎಚ್ಚೆತ್ತುಕೊಳ್ಳಿರೆಂದು ಗುಡುಗಲು ಈ ಪಡೆ ದೆಹಲಿಗೆ ನಡೆದಿದೆ. 

ಈ ಸಂದರ್ಭದಲ್ಲಿ ನಾಡಿನ ಎಲ್ಲ ಕನ್ನಡಿಗರನ್ನು, 'ಕರ್ನಾಟಕ ರಕ್ಷಣಾ ವೇದಿಕೆ'ಯು ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದೆ. ವೇದಿಕೆಯ ಇಲ್ಲಿಯವರೆಗಿನ ಎಲ್ಲ ಯಶಸ್ಸಿಗೂ ಕನ್ನಡಿಗರು ತೋರಿರುವ ಆದರ, ವಿಶ್ವಾಸಗಳೇ ಕಾರಣವೆಂದೂ, 'ಶಾಸ್ತ್ರೀಯ ಭಾಷಾ ಸ್ಥಾನಮಾನ'ಕ್ಕಾಗಿ ನಡೆಯುತ್ತಿರುವ ಈ ಪ್ರತಿಭಟನೆಯ ನಿರ್ಣಾಯಕ ಘಟ್ಟದಲ್ಲಿ ಕನ್ನಡಿಗರೆಲ್ಲ ನಮ್ಮೊಂದಿಗೆ ಕೈಜೋಡಿಸಬೇಕೆಂದು ನಮ್ರತೆಯಿಂದ ತಮ್ಮನ್ನು ಕೋರುತ್ತೇನೆ.
 
ಇಂತಿ, 
ಟಿ.ಏ.ನಾರಾಯಣ ಗೌಡ
- ಸಿರಿಗನ್ನಡಮ್ ಗೆಲ್ಗೆ : ಸಿರಿಗನ್ನಡಮ್ ಬಾಳ್ಗೆ -

 
 

ಅಧ್ಯಕ್ಷರ ನುಡಿ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ