Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಅಧ್ಯಕ್ಷರ ನುಡಿ : ೨೦೦೮ ರ ರಾಜ್ಯೋತ್ಸವ ಶುಭ ಹಾರೈಕೆಗಳು

ಅಧ್ಯಕ್ಷರ ನುಡಿ
ಅಕ್ಕರೆಯ ಕನ್ನಡ ಬಂಧು,
ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಲು ನಮ್ಮ ಹಿರಿಯರು ಮಾಡಿದ ತ್ಯಾಗ, ಬಲಿದಾನ ಮತ್ತು ಹೋರಾಟಗಳನ್ನು ನಾವು ನೆನೆಯಬೇಕಾದ ದಿನ. ಈ ದಿನವನ್ನು ಪ್ರತಿವರ್ಷವೂ ಕನ್ನಡ ಬಾವುಟವನ್ನು ಹಾರಿಸಿ ಹಬ್ಬ ಮಾಡುವ ಮೂಲಕ ಆಚರಿಸುತ್ತೇವೆ. ಇದು ವಾಡಿಕೆ. ಆದರೆ ಈ ಸಂದರ್ಭದಲ್ಲಿ ನಾವು ಇಷ್ಟಾದರೆ ಸಾಕೇನು ಎಂದು ಆಲೋಚಿಸಬೇಕಾಗಿದೆ.
ನಮ್ಮ ನಾಡು ಪ್ರಪಂಚದಲ್ಲೇ ಮುಂದುವರಿದ ನಾಡಾಗಬೆಕು, ನಮ್ಮ ಕನ್ನಡಿಗರು ಪ್ರಪಂಚದ ಅತ್ಯಂತ ಮುಂದುವರಿದ ಜನಾಂಗವಾಗಬೇಕು ಎನ್ನುವುದೇ ನಮ್ಮ ನಿಜವಾದ ಗುರಿಯಾಗಬೇಕಾಗಿದೆ. ಕನ್ನಡ ನಾಡಿನಿಂದ ಬಡತನ, ಅಜ್ಞಾನ, ಅನಕ್ಷರತೆಗಳು ನಿರ್ನಾಮವಾಗಿ ಸಮೃದ್ಧಿ, ಸುಖ ಶಾಂತಿಗಳು ಇಲ್ಲಿ ಮನೆ ಮಾಡಬೇಕಾಗಿದೆ. ಈ ಗುರಿಯನ್ನು ಮುಟ್ಟುವುದಾದರೂ ಹೇಗೆ? ಇದನ್ನು ಸಾಧಿಸಲು ಪ್ರಪಂಚದ ಮೂಲೆ ಮೂಲೆಯಲ್ಲಿ ಚದರಿಹೋಗಿರುವ ಕನ್ನಡಿಗರೂ ಸೇರಿದಂತೆ ನಾಡಿನೆಲ್ಲ ಕನ್ನಡಿಗರೂ ಒಗ್ಗಟ್ಟಾಗಬೇಕಾಗಿದೆ.
ಏಳಿಗೆಯ ಈ ಹಾದಿಯಲ್ಲಿ ಮೊದಲನೆಯದಾಗಿ ನಾಡಿನಲ್ಲಿರುವ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು. ನಾಡಿನಾದ್ಯಂತ ಹೆಚ್ಚು ಹೆಚ್ಚು ಉದ್ದಿಮೆಗಳು ತಲೆಯೆತ್ತಬೇಕು. ನಮ್ಮ ನಾಡಿನ ನಿಸರ್ಗ ಸಂಪತ್ತಿನ ಸದ್ಬಳಕೆಯಾಗಬೇಕು. ನಾಡಿನ ಎಲ್ಲ ಸಂಪತ್ತುಗಳ ಹೇರಳವಾದ ಲಾಭ ನಾಡಿಗರಿಗೆ ಸಿಗಬೇಕು. ನಮ್ಮ ನಾಡಿನ ರೈತ ಸಮುದಾಯ ಅತ್ಯುತ್ತಮ ಕೃಷಿ ಪದ್ದತಿ ಅಳವಡಿಸಿಕೊಂಡು ಉತ್ತಮ ಬೆಳೆ, ಉತ್ತಮ ಲಾಭ, ಉನ್ನತ ಜೀವನ ನಡೆಸುವಂತಾಗಬೇಕು. ನಾಡಿನ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಕಲಿಕೆ ದೊರೆಯಬೇಕು. ಒಟ್ಟಾರೆ ಕನ್ನಡನಾಡು ಸರ್ವಾಂಗೀಣ ಅಭಿವೃದ್ಧಿ ಕಾಣಬೇಕು. ಆಗ ನಮ್ಮ ರಾಜ್ಯೋತ್ಸವವನ್ನು ಉತ್ಸವವಾಗಿ ಆಚರಿಸುವುದಲ್ಲಿ ಸಾರ್ಥಕತೆ ಇದೆ.
 
 ಈ ಏಳಿಗೆಯ ಹಾದಿಯ ಮೊದಲ ಹೆಜ್ಜೆಯಾಗಿ ನಮ್ಮ ರಾಜ್ಯ ಸರ್ಕಾರ ಮೊದಲಿಗೆ ಕನ್ನಡ ಸರ್ಕಾರವಾಗಬೇಕು. ನಾಡಿನ ಜನರ ಬದುಕನ್ನು ಕಟ್ಟುವಂತಹ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವ ಸ್ಥಾಪನೆಗೆ ಎಡೆಬಿಡದೆ ದುಡಿಯಬೇಕು. ಕನ್ನಡಿಗರಾದ ನಮ್ಮಲ್ಲಿ ಕನ್ನಡತನದ ಜಾಗೃತಿಯಾಗಬೇಕು. ಈ ಜಾಗೃತಿಯ ಮಹತ್ ಕಾರ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ತೊಡಗಿದ್ದು ನಾಳಿನ ಸಮೃದ್ಧ ಕರ್ನಾಟಕವನ್ನು ಕಟ್ಟಲು ಪಣ ತೊಟ್ಟು ನಿಂತಿದೆ.
 
ಓ ಕನ್ನಡ ಬಂಧುಗಳೇ, ಕನ್ನಡ ನುಡಿಯೇ ನಮ್ಮ ಏಳಿಗೆಯ ಸಹಜ ಸಾಧನ. ಈ ಮಣ್ಣಿನ ಮಕ್ಕಳಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದೇ ನಮ್ಮ ಬಡತನ ತೊಲಗಿಸಲು ಇಡಬೇಕಾದ ಮೊದಲ ಹೆಜ್ಜೆ. ಈ ನಾಡಿನ ಆಡಳಿತ ವ್ಯವಸ್ಥೆ ಇರಬೇಕಾದದ್ದೇ ಈ ನಾಡಿನ ಮಕ್ಕಳಿಗಾಗಿ. ಹಾಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕಛೇರಿಗಳೂ ಸೇರಿದಂತೆ ಎಲ್ಲೆಡೆ ಆಡಳಿತ ಭಾಷೆ ಸಹಜವಾಗಿ ಕನ್ನಡವಾಗಬೇಕಾಗಿದೆ. ಈ ಕಛೇರಿಗಳಾಗಲೀ, ಕೇಂದ್ರ ಸರ್ಕಾರಿ ಉದ್ದಿಮೆಗಳಾಗಲೀ ಎಲ್ಲೆಡೆ ಈ ಮಣ್ಣಿನ ಮಕ್ಕಳಿಗೇ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕಾಗಿದೆ. ಕನ್ನಡಿಗರ ಈ ಮೂಲಭೂತ ಹಕ್ಕುಗಳಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದೊಂದು ದಶಕದಿಂದ ನಿರಂತರವಾಗಿ ಹೋರಾಡುತ್ತಿದೆ. ಬನ್ನಿ, ನಮ್ಮೊಂದಿಗೆ ಕೈಜೋಡಿಸಿ. ಕನ್ನಡ ನಾಡು ಕಟ್ಟುವ ಈ ಪುಣ್ಯಕಾರ್ಯದಲ್ಲಿ ನೀವೂ ಭಾಗಿಗಳಾಗಿರಿ.
ವಂದನೆಗಳು

 

ಅಧ್ಯಕ್ಷರ ನುಡಿ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ