Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಅಧ್ಯಕ್ಷರ ನುಡಿ - ಕಾವೇರಿ ರಥಯಾತ್ರೆ

ಅಧ್ಯಕ್ಷರ ನುಡಿ
ಪ್ರೀತಿಯ ಕನ್ನಡ ಬಂಧು,

ಕಳೆದ ಬಾರಿ ನಿಮಗೆ ತಿಳಿಸಿದಂತೆ ಮಾರ್ಚ್ ೨೭ರಿಂದ ೩೧ರವರೆಗೆ ಕಾವೇರಿ ರಥಯಾತ್ರೆಯನ್ನು ನಡೆಸಲಾಯಿತು. ರಥಯಾತ್ರೆಯನ್ನು ತಲಕಾವೇರಿಯಲ್ಲಿ ತಾಯಿ ಕಾವೇರಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು. ಅದರ ವರದಿಯನ್ನು ನೀವೆಲ್ಲಾ ಓದಿಯೇ ಇದ್ದೀರಿ. 
ರಥಯಾತ್ರೆಯು ಸಾಗಿದ ಎಲ್ಲ ಊರುಗಳಲ್ಲೂ ಜನತೆ ನೀಡಿದ ಅಭೂತಪೂರ್ವವಾದ ಪ್ರತಿಕ್ರಿಯೆ ತುಂಬಾ ಪ್ರೋತ್ಸಾಹಕಾರಿಯಾಗಿತ್ತು. ಭಾಗಮಂಡಲ, ಮಡಿಕೇರಿ, ಕುಶಾಲ ನಗರ, ಪಿರಿಯಾಪಟ್ಟಣ, ಹುಣಸೂರು, ಕೃಷ್ಣರಾಜ ನಗರ, ಮೈಸೂರುಗಳಲ್ಲಿ ಮೊದಲ ದಿನ ರಥಯಾತ್ರೆ ನಡೆಯಿತು. ಮಡಿಕೇರಿಯ ದಾರಿಯಲ್ಲಿ ರಥ ಸಾಗಲು ಎದುರಾದ ತೊಡರು ಎಲ್ಲ ಊರುಗಳ ಕಾರ್ಯಕ್ರಮಗಳು ಮೂರ್ನಾಲ್ಕು ಘಂಟೆಗಳಷ್ಟು ಕಾಲ ವಿಳಂಬವಾಗಲು ಕಾರಣವಾಯಿತು. ಎಲ್ಲ ಊರುಗಳಲ್ಲಿನ ಕನ್ನಡಿಗರು ಅಷ್ಟು ಹೊತ್ತೂ ರಥಯಾತ್ರೆಗಾಗಿ ಕಾದು ಸಾಂಪ್ರದಾಯಿಕ ಕಳಸಗಳು, ಜಾನಪದ ಕಲೆಗಳ ಮೆರವಣಿಗೆಯಲ್ಲಿ ನಮ್ಮನ್ನು ಸ್ವಾಗತಿಸಿದ್ದು ಮರೆಯಲಾಗದ ಅನುಭವ. ಮರುದಿನದಿಂದ ಸುಗಮವಾಗಿ ಸಾಗಿದ ರಥಯಾತ್ರೆ ೨೯ರಂದು ಮಂಡ್ಯದ ಸಿಲ್ವರ್ ಜೂಬಿಲಿ ಪಾರ್ಕ್‌ನಲ್ಲಿ ಬಹಿರಂಗ ಸಭೆಯಾಯ್ತು. ಮುಂದೆ ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ ಮಾರ್ಗವಾಗಿ ಸಾಗಿಬಂದ ರಥಯಾತ್ರೆ ಬೆಂಗಳೂರಿನ ಬಿ.ಎಚ್.ಇ.ಎಲ್ ವೃತ್ತದಿಂದ ದೊಡ್ಡ ಸಾಗರವಾಗಿ ಮಲ್ಲೇಶ್ವರ ಮೈದಾನಕ್ಕೆ ಸಾಗಿಬಂತು. ಬಹುಶಃ ಹಿಂದೆಂದೂ ನಮ್ಮ ನಾಡಿನ ಇತಿಹಾಸದಲ್ಲಿ ಅಷ್ಟೊಂದು ಕನ್ನಡ ಬಾವುಟಗಳು ರಾರಾಜಿಸುತ್ತಾ ಬೀದಿಯುದ್ದಕ್ಕೂ ಮೆರೆದಾಡುತ್ತಾ ಮೆರವಣಿಗೆಯಲ್ಲಿ ಸಾಗಿದ ಉದಾಹರಣೆಯಿಲ್ಲ. ಅಂದು ಹತ್ತು ಸಾವಿರಕ್ಕೂ ಹೆಚ್ಚಿನ ಕನ್ನಡ ಯೋಧರು ಆ ಮೆರವಣಿಗೆಯಲ್ಲಿ ಸಾಗಿಬಂದರು. 
ನಾನು ಹೋದಲ್ಲೆಲ್ಲಾ ನಮ್ಮ ಜನರ ಕಣ್ಣಲ್ಲಿ ನಮ್ಮ ಗತಿ ಮುಂದೇನಾದೀತೋ ಎನ್ನುವ ಆತಂಕ ಮಡುಗಟ್ಟಿದ್ದು ಕಾಣುತ್ತಿತ್ತು. ನಡುನೀರಲ್ಲಿ ಕೈಬಿಟ್ಟಿರುವ ಜನಪ್ರತಿನಿಧಿಗಳು, ರಾಜಿನಾಮೆಯ ನಾಟಕವಾಡುತ್ತಿರುವ ಸಂಸದರು, ಎಲ್ಲೋ ಕಳೆದು ಹೋಗಿರುವ ರೈತ ಮುಖಂಡರುಗಳು, ಕಳೆದ ಬಾರಿ ಕಾವೇರಿ ಚಳವಳಿಯ ಉಸಿರಾಗಿದ್ದು ಈಗ ಉಸಿರು ಮರೆತಂತಿರುವ ನಾಯಕರುಗಳುಗಳಿಂದ ಬೇಸತ್ತಿರುವ ಜನತೆ ನಮ್ಮ ಹೋರಾಟದಲ್ಲಿ ಇಡೀ ನಾಡು ನಮ್ಮ ಕೈಬಿಟ್ಟಿದೆಯೇನೋ, ನಮ್ಮನ್ನು ಕಾಪಾಡಲು ಯಾರೂ ಇಲ್ಲವೇನೋ ಎನ್ನುವ ನಿರಾಶೆಯಿಂದ ಕಂಗೆಟ್ಟಿರುವ ದೃಶ್ಯ ಕಾಣುತ್ತಿತ್ತು. ರಾಷ್ಟ್ರೀಯ ಪಕ್ಷಗಳ ಬೂಟಾಟಿಕೆಯ ನಿಲುವುಗಳಿಂದ ಜನತೆ ಬೇಸತ್ತಿದ್ದು ನಮ್ಮ ನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ರಾಜಕಾರಣದ ಅಗತ್ಯ ಮನಗಂಡಿರುವುದು ಎದ್ದು ಕಾಣುತ್ತಿತ್ತು.
 
 

ಅಷ್ಟೇ ಏಕೆ? ಕೇಂದ್ರ ಸರ್ಕಾರಗಳು ಅಂದಿನಿಂದಲೂ ಕನ್ನಡಿಗರೆಡೆಗೆ ನೆಲ, ಜಲ, ಗಡಿ, ಉದ್ಯೋಗ, ಸಂಪನ್ಮೂಲ ಹಂಚಿಕೆ, ಪರಿಹಾರ ಹಂಚಿಕೆಯೂ ಸೇರಿದಂತೆ ಎಲ್ಲ ವಿಷಯಗಳಲ್ಲಿ ತಾರತಮ್ಯ ತೋರುತ್ತಾ ಬಂದಿರುವುದು ಎಲ್ಲ ಜನತೆಯ ಅರಿವಿಗೆ ಇತ್ತೀಚಿಗೆ ಬರತೊಡಗಿದ್ದು ನಮ್ಮ ನಾಡಿಗೆ ಅನ್ಯಾಯ ಹೀಗೆಯೇ ಮುಂದುವರೆಯುವುದಾದರೆ ಈ ಒಕ್ಕೂಟ ವ್ಯವಸ್ಥೆಯಿಂದಲೇ ಹೊರ ಬರಬೇಕೆನ್ನುವ ಆಕ್ರೋಶ ಹಳ್ಳಿಹಳ್ಳಿಗಳ ಜನತೆಯಲ್ಲಿ ಮನೆಮಾಡುತ್ತಿರುವುದು ಗೋಚರವಾಯಿತು.
ಕನ್ನಡಿಗರ ನ್ಯಾಯಯುತವಾದ ಹಕ್ಕಿಗಾಗಿ ಹೋರಾಡಲು 'ಕೃಷ್ಣಾ ಕಾವೇರಿ ಜಂಟಿ ಹೋರಾಟ ಸಮಿತಿ'ಯ ಹೆಸರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘಗಳ ಜೊತೆಯಲ್ಲಿ‌ಅನೇಕ ಸಂಘಟನೆಗಳು ತೀರ್ಮಾನಿಸಿವೆ. ದೆಹಲಿಯ ಕುರುಡು ಮತ್ತು ಕಿವುಡು ದೊರೆಗಳಿಗೆ ನಮ್ಮ ಕೂಗು ಮುಟ್ಟಿಸಲು ಲಕ್ಷ ಕನ್ನಡಿಗರ 'ದೆಹಲಿ ಮುತ್ತಿಗೆ' ಕಾರ್ಯಕ್ರಮವನ್ನು ಮೇ ೪ ರಂದು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ ೨೬ರಿಂದ ದೆಹಲಿಗೆ ಹೊರಡಲಿರುವ ಎಲ್ಲ ರೈಲುಗಳಲ್ಲಿ ಟಿಕೆಟ್ ರಹಿತವಾಗಿ ದೆಹಲಿಗೆ ನಾವೆಲ್ಲಾ ಹೊರಡೋಣ. ಈ ಹೋರಾಟದಲ್ಲಿ ಎಲ್ಲ ಕನ್ನಡಿಗರೂ ಪಾಲ್ಗೊಳ್ಳಿರೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. 
ಇಡೀ ರಥಯಾತ್ರೆಯಲ್ಲಿ ನೆರೆದ ಜನತೆಯ ಪ್ರತಿಕ್ರಿಯೆ ಕಂಡಾಗ ಕನ್ನಡಿಗರಲ್ಲಿ ಸ್ವಾಭಿಮಾನ ಎಚ್ಚರವಾಗುತ್ತಿರುವ ಎಲ್ಲ ಭರವಸೆಗಳು ಕಾಣುತ್ತಿವೆ. ನಮ್ಮ ಎಲ್ಲರ ಮನಮನಗಳಲ್ಲಿ ಕನ್ನಡದ ದೀಪ ದೇದೀಪ್ಯಮಾನವಾಗಿ ಬೆಳಗಿದರೆ ನಾವು ಭವ್ಯವಾದ ನಾಡನ್ನು ಮತ್ತೆ ಕಟ್ಟಬಹುದು.

ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು ಕಟ್ಟೇ ಕಟ್ಟುತೇವಾ
ಕನ್ನಡ ನಾಡ ಕಟ್ಟುತ್ತೇವ, ಚಿನ್ನದ ಬೀಡ ಕಟ್ಟುತೇವಾ
ಗೋಳಿಲ್ಲದಾ ನೋವಿಲ್ಲದಾ ನಾಡ ಕಟ್ತುತೇವಾ
ಜಾತಿಯಿಲ್ಲದಾ ಭೀತಿಯಿಲ್ಲದ ನಾಡಕಟ್ಟುತೇವಾ
ನೆಲದ ಹಾಡ ಬರೆಯುತೇವಾ . . . 



ಟಿ.ಏ.ನಾರಾಯಣ ಗೌಡ

 

ಅಧ್ಯಕ್ಷರ ನುಡಿ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ