Karnataka Rashana Vedike
Kuvempu
ico_adhyaksharalEkhaniyinda3.jpg
yashassugaLu.jpg
Sangatane.jpg

ಅಧ್ಯಕ್ಷರ ಲೇಖನಿಯಿಂದ.....

ಸಂಘಟನೆ
ದಿನಾಂಕ-೦೩-೦೬-೨೦೦೯ 
 
ಅಕ್ಕರೆಯ ಕನ್ನಡಿಗ,
 
ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಗಳು ಕೊನೆಯಾಗಿದ್ದು ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂಸದರಿಗೆ ಅಭಿನಂದನೆಗಳು. ದೆಹಲಿಯಲ್ಲಿ ರಾಜ್ಯವನ್ನು ಇವರುಗಳು ಸೂಕ್ತವಾಗಿ ಪ್ರತಿನಿಧಿಸಿ, ಕನ್ನಡನಾಡಿನ ನೆಲ, ಜಲದ ಹಿತ ಕಾಪಾಡುತ್ತಾ, ಕೇಂದ್ರದ ಯೋಜನೆಗಳ ಲಾಭ ನಾಡಿಗೆ ಸಂಪೂರ್ಣವಾಗಿ ದೊರಕಿಸಿಕೊಡಲು ಮತ್ತು ಕೇಂದ್ರ ಇದುವರೆಗೂ ತೋರಿದ್ದ ಮಲತಾಯಿ ಧೋರಣೆಗಳನ್ನು ಕೊನೆಗೊಳಿಸಲು ಮುಂದಾಗಲಿ ಎಂದೂ ಈ ಸಂದರ್ಭದಲ್ಲಿ ಬಯಸುತ್ತೇವೆ.
 
’ಗೆದ್ದ ಸಂಸದರುಗಳು ಪ್ರಮಾಣವಚನ ತೆಗೆದುಕೊಳ್ಳುವಾಗ, ನಾಡಿನ ಸ್ವಾಭಿಮಾನದ ಪ್ರತೀಕವಾಗಿ, ಕನ್ನಡದಲ್ಲೇ ಪ್ರಮಾಣವಚನ ತೆಗೆದುಕೊಳ್ಳಬೇಕು’ಎನ್ನುವ ನಾಡ ಜನತೆಯ ಮನದಾಳದ ಆಶಯವನ್ನು ಕರ್ನಾಟಕ ರಕ್ಷಣಾ ವೇದಿಕೆಯು ಈ ಚುನಾವಣೆಯಲ್ಲಿ ಗೆದ್ದ ಎಲ್ಲಾ ಜನಪ್ರತಿನಿಧಿಗಳಿಗೆ ಆಗ್ರಹಪೂರ್ವಕ ಮನವಿಯ ರೂಪದಲ್ಲಿ  ತಲುಪಿಸಿತ್ತು. ಈ ಮನವಿಗೆ ಸ್ಪಂದಿಸಿ ಪಕ್ಷಭೇದವಿಲ್ಲದೆ ಈ ಬಾರಿ ಹೆಚ್ಚಿನ ಸಂಸದರು ಕನ್ನಡದಲ್ಲೇ ಪ್ರಮಾಣವಚನ ತೆಗೆದುಕೊಂಡಿದ್ದು ನಾಡಪರ ಕಾಳಜಿ ತೋರಿದ್ದಾರೆ.
 
ಕಾಂಗ್ರೆಸ್ ಮುಂದಾಳ್ತನದ ಕೇಂದ್ರಸರ್ಕಾರದ ಸಚಿವ ಸಂಪುಟದಲ್ಲಿ ಕನ್ನಡಿಗರಾದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ್ ಖರ್ಗೆ, ವೀರಪ್ಪ ಮೊಯ್ಲಿ ಮತ್ತು ಮುನಿಯಪ್ಪ ಅವರುಗಳು ನೇಮಕವಾಗಿರೋದು ನಾಡಿಗರೆಲ್ಲರಿಗೂ ಸಂತಸ ತಂದಿದೆ. ಈ ನಾಯಕರುಗಳೆಲ್ಲಾ ತಮ್ಮ ತಮ್ಮ ಹುದ್ದೆಗಳಲ್ಲಿ ಯಶ ಗಳಿಸಲಿ ಮತ್ತು ಸಂಪುಟ ಸಭೆಯಲ್ಲಿ ಕರ್ನಾಟಕದ ಹಿತ ಕಾಪಾಡಲಿ.
 
ಒಟ್ಟಾರೆ ಇವೆಲ್ಲಾ ಸಂತಸದ ಸುದ್ದಿಗಳೇ ಆಗಿದ್ದರೂ ಇಷ್ಟರಿಂದಲೇ ಕನ್ನಡಿಗರ ನಿರೀಕ್ಷೆಗಳೆಲ್ಲವೂ ಈಡೇರಿದಂತಾಗಿಲ್ಲ. ಮುಂದಿನ ದಿನಗಳಲ್ಲಿ ಸಂಸತ್ತಿನ ಎಲ್ಲಾ ಕಲಾಪಗಳಲ್ಲಿ ಎಲ್ಲಾ ಸಂಸದರೂ ಭಾಗವಹಿಸುವಂತಾಗಲಿ. ನಾಡುನುಡಿಯ ಪ್ರಶ್ನೆ ಬಂದಾಗಲೆಲ್ಲಾ ಕರ್ನಾಟಕದ ಪರವಾದ ಗಟ್ಟಿದನಿ ಎತ್ತಲಿ. ನಮ್ಮ ನಾಡಿಗೆ ನಿರಂತರವಾಗಿ ಕೇಂದ್ರಸರ್ಕಾರ ತೋರಿಸುತ್ತಾ ಬಂದಿರುವ ಮಲತಾಯಿ ಧೋರಣೆಗಳಿಗೆ ಕೊನೆ ಹಾಡಲು ಕಾರಣರಾಗಲಿ.
 
ಈ ಬಾರಿಯ ಲೋಕಸಭಾ ಚುನಾವಣೆಗಳ ನಂತರ ನಮ್ಮ ಸಂಸದರು ಕನ್ನಡದಲ್ಲಿ ಪ್ರಮಾಣವಚನ ತೆಗೆದುಕೊಂಡಿದ್ದಾಗಲೀ, ನಾಡಿಗೆ ದೊರೆತ ಮಂತ್ರಿಗಳ ಸಂಖ್ಯೆಗಳಾಗಲೀ ಆಕಾಶದಿಂದ ಉದುರಿರುವ ವರಗಳಲ್ಲ. ಕನ್ನಡನಾಡಿನಲ್ಲಿ ಕಳೆದ ದಶಕದಿಂದ ಕರ್ನಾಟಕ ರಕ್ಷಣಾ ವೇದಿಕೆಯು ಕಟ್ಟಿರುವ ಚಳವಳಿಯು ಕನ್ನಡಿಗರಲ್ಲಿ ಹುಟ್ಟು ಹಾಕುತ್ತಿರುವ ಕನ್ನಡತನದ ಜಾಗೃತಿಗಳೇ ಈ ಬೆಳವಣಿಗೆಗಳ ಹಿಂದಿರುವ ಶಕ್ತಿಯಾಗದೆ. ಕನ್ನಡಿಗರ ಈ ಕನ್ನಡತನದ ಅರಿವು ಮತ್ತಷ್ಟು ಹೆಚ್ಚಲಿ, ಇದರಿಂದ ಕನ್ನಡನಾಡಿನ ಏಳಿಗೆಯ ಹೊಸ ಶಕೆಯೊಂದು ಆರಂಭವಾಗಲಿ..
 
ಸಿರಿಗನ್ನಡಂ ಗೆಲ್ಗೆ
 
ವಂದನೆಗಳು
ಟಿ.ಏ ನಾರಾಯಣಗೌಡ
ರಾಜ್ಯಾಧ್ಯಕ್ಷರು

**************************************************************************


ಈ ಹಿಂದಿನ ಅಧ್ಯಕ್ಷರ ನುಡಿ ಸಂಚಿಕೆಗಳನ್ನು ಕೆಳಗಿನ ಕೊಂಡಿಗಳಲ್ಲಿ ಓದಿರಿ:-
 

ಸಂಘಟನೆ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ