Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಅಧ್ಯಕ್ಷರ ನುಡಿ - ಚುನಾವಣೆ

ಅಧ್ಯಕ್ಷರ ನುಡಿ
ಅಕ್ಕರೆಯ ಕನ್ನಡಿಗ,
ನಮ್ಮ ಮುಂದೆ ಈಗ ಹೊಸ ಜನಪ್ರತಿನಿಧಿಗಳನ್ನು ಆರಿಸುವ ಅವಕಾಶ ಬಂದಿದೆ. ಈ ಸನ್ನಿವೇಶದಲ್ಲಿ ನಾವು ಅತ್ಯಂತ ಜವಾಬ್ದಾರಿಯಿಂದ ನಮ್ಮ ಮತಗಳನ್ನು ನೀಡಬೇಕಾಗಿದೆ. ಇಂದು ಕನ್ನಡನಾಡು ಎದುರಿಸುತ್ತಿರುವ ಸವಾಲುಗಳೂ ಸಾಕಷ್ಟಿವೆ. ನಮ್ಮ ರಾಜ್ಯದ ಅನೇಕ ಪ್ರದೇಶಗಳನ್ನು, ನಮ್ಮ ಜೀವನದಿಗಳನ್ನು ಕಬಳಿಸಲು ನೆರೆಯ ರಾಜ್ಯಗಳು ಹೊಂಚು ಹಾಕುತ್ತಿದ್ದು ಸಂಸತ್ತಿನಲ್ಲಿ, ನ್ಯಾಯಾಲಯಗಳಲ್ಲಿ, ಮಾಧ್ಯಮಗಳಲ್ಲಿ ಕರ್ನಾಟಕದ ವಿರುದ್ಧ ಸಮರ ಸಾರಿವೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಾಡು ನುಡಿ ಗಡಿಗಳ ರಕ್ಷಣೆ ಮಾಡುವುದು ನಮ್ಮ ಜನಪ್ರತಿನಿಧಿಗಳ, ನಮ್ಮ ರಾಜಕೀಯ ಪಕ್ಷಗಳ ಮೂಲಭೂತ ಹೊಣೆಯಾಗಿದೆ. ಅದಷ್ಟೇ ಅಲ್ಲದೆ ಈ ಮಣ್ಣಿನ ಮಕ್ಕಳ ಬದುಕನ್ನು ಹಸನು ಮಾಡಲು ಅಗತ್ಯವಿರುವ ಉದ್ದಿಮೆಗಳನ್ನು ಆರಂಭಿಸುವ, ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ, ಮೂಲಭೂತ ಸೌಕರ್ಯಗಳನ್ನು ರೂಪಿಸಿಕೊಡುವ, ನಮ್ಮ ಜನರಿಗೆ ಕೆಲಸದ ಅವಕಾಶ ಹುಟ್ಟುಹಾಕುವ ಜವಾಬ್ದಾರಿಯನ್ನು ಅವುಗಳು ಹೊರಬೇಕಾಗಿದೆ. ಇಂತಹ ಕ್ರಮಗಳ ಮೂಲಕ ನಾಡಿನ ಆರ್ಥಿಕ ಬೆಳವಣಿಗೆಗೆ ಹೊಸ ವೇಗ ನೀಡಬೇಕಾಗಿದೆ. ಇದರ ಜೊತೆಯಲ್ಲೇ ನಾಡಿನ ಸ್ವಾಭಿಮಾನ ಕಾಪಾಡುವ, ಸಂಸ್ಕೃತಿಯನ್ನು ಗೌರವಿಸಿ ಬೆಳೆಸುವ ಕೆಲಸಕ್ಕೂ ಬದ್ಧರಾಗಬೇಕಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಈ ಬಗ್ಗೆ ಯಾವ ರಾಜಕೀಯ ಪಕ್ಷಗಳೂ ಗಟ್ಟಿಯಾದ ನಿಲುವನ್ನು ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಮತದಾರರಾದ ನಾವು ಜಾಗೃತರಾಗಿ ಮುಂದಿನ ಹೆಜ್ಜೆ ಇಡಬೇಕಾಗಿದೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳನ್ನು, ಅವರು ಯಾವ ಪಕ್ಷಕ್ಕೇ ಸೇರಿದ್ದರೂ ಕೂಡಾ, ನಮ್ಮ ನಾಡು ನುಡಿಯನ್ನು ಕಾಪಾಡುವ ಬಗ್ಗೆ, ನಾಡಿನ ಏಳಿಗೆಯ ಯೋಜನೆಯ ಬಗ್ಗೆ, ನಾಡಿನ ಮಕ್ಕಳಿಗೆ ಕೆಲಸ ಕೊಡಿಸುವ ಬಗ್ಗೆ ಅವರು ಹೊಂದಿರುವ ನಿಲುವುಗಳನ್ನು ಪ್ರಶ್ನಿಸಿರಿ. ಯಾವ ಅಭ್ಯರ್ಥಿ ಕನ್ನಡ ಪರರೋ ಅವರಿಗೇ ನಿಮ್ಮ ಮತಗಳನ್ನು ನೀಡಿ.
ರಾಜಕೀಯ ದಾಳವಾಗಿ ನಾಡನ್ನು ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕೊಡಗು ಎಂದೆಲ್ಲಾ ಒಡೆಯುವ ಜನರನ್ನು ತಿರಸ್ಕರಿಸಿ. ತಾವು ಗೆಲ್ಲುವ ಸಲುವಾಗಿ ಪರಭಾಷೆಗಳಲ್ಲಿ ಪ್ರಚಾರ ಮಾಡುತ್ತಾ ಪರಭಾಷಿಕರನ್ನು ಓಲೈಸುವ ಆ ಮೂಲಕ ನಾಡಿನ ಸಾರ್ವಭೌಮತ್ವಕ್ಕೆ ಧಕ್ಕೆ ತರುವವರನ್ನು ಬೆಂಬಲಿಸಬೇಡಿ. ನಾಡಿನ ಅಮೂಲ್ಯ ಸ್ಮಾರಕಗಳ ಬಗ್ಗೆ ಗೌರವವಿರದ, ಅವುಗಳನ್ನು ಕಾಪಾಡಲು ಮುಂದಾಗದವರನ್ನು ಧಿಕ್ಕರಿಸಿ. ಉತ್ತಮ ಆಡಳಿತ ನೀಡುವ ಜೊತೆಜೊತೆಗೇ ಕನ್ನಡ-ಕನ್ನಡಿಗ-ಕರ್ನಾಟಕಗಳ ಹಿತ ಕಾಯಲು ಬದ್ಧರಾಗಿರುವವರಿಗೆ ಮಾತ್ರಾ ಮತ ನೀಡಿ.

ವಂದನೆಗಳು

ಟಿ.ಏ.ನಾರಾಯಣಗೌಡ
ರಾಜ್ಯಾಧ್ಯ್
 

ಅಧ್ಯಕ್ಷರ ನುಡಿ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ