ಕರವೇ ದಶಮಾನೋತ್ಸವದ ವರದಿ
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುತ್ತಾ ನಾಡಿನ ಉದ್ದಗಲಕ್ಕೂ ಹಳದಿ ಕೆಂಪು ಬಾವುಟದಡಿಯಲ್ಲಿ ಕನ್ನಡಿಗರನ್ನು ಸಂಘಟಿಸುತ್ತಾ, ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ರಕ್ಷಣೆ ಮತ್ತು ಏಳಿಗೆಯ ಹೊಣೆ ಹೊತ್ತು ೧೦ ವರ್ಷಗಳ ದಿಟ್ಟ, ರಾಜಿರಹಿತ ಹೋರಾಟಗಳ ಪಯಣ ನಡೆಸಿ, ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯೆಡೆ ಕರ್ನಾಟಕವನ್ನು ಕರೆದೊಯ್ಯುವ ಗುರಿ ಹೊತ್ತು ಮುನ್ನಡೆದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಕಳೆದ ಜೂನ್ ೨೨ ಮತ್ತು ೨೩ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾವಿರಾರು ಕನ್ನಡಿಗರು, ನಾಡಿನ ಅನೇಕ ಗಣ್ಯರು ಮತ್ತು ರಾಜಕೀಯ ಮುಖಂಡರ ಸಮ್ಮುಖದಲ್ಲಿ ತನ್ನ ದಶಮಾನೋತ್ಸವವನ್ನು ಆಚರಿಸಿಕೊಂಡಿತು. ನಾಡಿನ ನೂರಾರು ಜಾನಪದ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಜಾನಪದ ಸಂಭ್ರಮದೊಂದಿಗೆ ಅದ್ದೂರಿಯಾಗಿ ಆರಂಭವಾದ ಸಮಾವೇಶವು, ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಸ್ಯೆಗಳು, ಪರಿಹಾರಗಳು ಮತ್ತು ಏಳಿಗೆಯ ಬಗ್ಗೆ ವಿಚಾರಗೋಷ್ಠಿಗಳು ಮತ್ತು ಬಲು ಮುಖ್ಯವಾದ ಸಮಾವೇಶ ನಿರ್ಣಯಗಳೊಂದಿಗೆ ಮುಕ್ತಾಯವಾಯಿತು. ತಯಾರಿಯನ್ನೂ ಒಳಗೊಂಡು ಇಡೀ ಸಮಾರಂಭದ ವಿವರವಾದ ವರದಿಯನ್ನು ಕೆಳಗೆ ನೀಡಲಾಗಿದೆ : ಸಮಾವೇಶದ ತಯಾರಿ: ಸಮಾವೇಶಕ್ಕೆ ಇನ್ನೂ ೧ ವಾರವಿದ್ದಾಗಲೇ, ನಮ್ಮ ಹೆಮ್ಮೆಯ ಬೆಂಗಳೂರು ಕರವೇ ದಶಮಾನೋತ್ಸವಕ್ಕೆ ಸಿಂಗಾರಗೊಳ್ಳಲಾರಂಭಿಸಿತು. ಬೆಂಗಳೂರಿನ ಮೂಲೆ ಮೂಲೆಗಳಲ್ಲೂ ದಶಮಾನೋತ್ಸವ - ಜಾನಪದ ಸಂಭ್ರಮ ಕಾರ್ಯಕ್ರಮದ ಬಗ್ಗೆ ಭಿತ್ತಿ ಚಿತ್ರಗಳನ್ನು ಹಾಕಲಾಯಿತು. ಆ ಮೂಲಕ ಎಲ್ಲ ಕನ್ನಡಿಗರಿಗೂ ಸಂಭ್ರಮದಲ್ಲಿ ಪಾಲ್ಗೊಳ್ಳಲು ನಲ್ಮೆಯ ಕರೆ ನೀಡಲಾಯಿತು. ಕಾರ್ಯಕ್ರಮ ಇನ್ನೇನು ಒಂದೆರಡು ದಿನವಿದ್ದಾಗ, ಬೆಂಗಳೂರಿನ ಪ್ರಮುಖ ವೃತ್ತಗಳಲ್ಲಿ, ಮುಖ್ಯವಾದ ಬೀದಿಗಳಲ್ಲಿ, ಅರಮನೆ ಮೈದಾನದ ಸುತ್ತಮುತ್ತಲಿನ ಬೀದಿಗಳಲ್ಲಿ ಹಳದಿ-ಕೆಂಪು ಬಣ್ಣದ ಕನ್ನಡ ಬಾವುಟಗಳು ರಾರಾಜಿಸತೊಡಗಿದವು. ಸೊಂಪಾಗಿ ಬೀಸುತ್ತಿದ್ದ ಗಾಳಿಯಿಂದ ಸಾಲುಸಾಲು ಬಾವುಟಗಳ ದೃಶ್ಯ ಸ್ವಾಭಿಮಾನಿ ಕನ್ನಡಿಗರ ಕಣ್ಣಿಗೆ ತಂಪೆರೆಯುವಂತಿದ್ದರೆ, ಕನ್ನಡತನವನ್ನು ಮರೆತು ಓಡಾಡುತ್ತಿದ್ದ ಕನ್ನಡಿಗರಿಗೆ ಸ್ವಾಭಿಮಾನವನ್ನು, ಕನ್ನಡದ ಕಿಚ್ಚನ್ನು ಹಚ್ಚುವಂತಿದ್ದವು. ವಿವಿಧ ಜಾಗಗಳಿಂದ ಬಂದಿದ್ದ ವಲಸಿಗರಿಗಂತೂ ಇಡೀ ಬೆಂಗಳೂರಿನ ಕನ್ನಡಮಯ ವಾತಾವರಣ ಕನ್ನಡಿಗರ ಒಗ್ಗಟ್ಟು, ಬಲ ಪ್ರದರ್ಶನ ಮತ್ತು ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಕರವೇ ಬದ್ಧತೆಯನ್ನು ತೋರುತ್ತಾ, ವಲಸಿಗರು ಕನ್ನಡ ನಾಡಿನಲ್ಲಿ ಕನ್ನಡಿಗರೊಡನೆ ಬೆರೆತು ಕನ್ನಡಿಗರಾಗಿ ಬಾಳಲು ಕರೆ ನೀಡುವಂತಿತ್ತು. ಕಾರ್ಯಕ್ರಮದ ಹಿಂದಿನ ದಿನ, ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣ ಸಾವಿರಾರು ಕನ್ನಡಿಗರನ್ನು ಸೇರಿಸಲು ವಧುವಿನಂತೆ ಸಿಂಗಾರಗೊಂಡು, ನಾಡಿನ ವಿವಿಧ ಭಾಗಗಳು ಮತ್ತು ದೇಶ-ವಿದೇಶಗಳಿಂದ ಸಮಾವೇಶಕ್ಕೆ ಬರಲಿದ್ದ ಕನ್ನಡಿಗರ ಸ್ವಾಗತಕ್ಕೆ, ಅವರಿಗೆ ಅಚ್ಚುಕಟ್ಟಾದ ಉಳಿದುಕೊಳ್ಳುವ ವ್ಯವಸ್ಥೆ ಮತ್ತು ಊಟೋಪಚಾರದ ವ್ಯವಸ್ಥೆಯೊಂದಿಗೆ ಸಜ್ಜಾಗಿನಿಂತಿತ್ತು. ನೂರಾರು ಜನ ವೇದಿಕೆ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು ಸಭಾಂಗಣದ ಒಳಗೆ, ಹೊರಗೆ ಆಗಬೇಕಿದ್ದ ಕೊನೆ ಗಳಿಗೆ ಕೆಲಸದಲ್ಲಿ ಮಗ್ನರಾಗಿದ್ದ ದೃಶ್ಯ ಆ ಎಲ್ಲ ಕನ್ನಡಿಗರಿಗೆ ಕನ್ನಡಮ್ಮನ ಮೇಲಿದ್ದ ಭಕ್ತಿ ಪ್ರತಿಬಿಂಬವಾಗಿ ತೋರುತ್ತಿತ್ತು. ತಯಾರಿ ಇಷ್ಟಕ್ಕೇ ನಿಲ್ಲದೆ, ಕಾರ್ಯಕ್ರಮದ ದಿನ ಸಾವಿರಾರು ಕನ್ನಡಿಗರು ಅರಮನೆ ಮೈದಾನದೆಡೆ ಬರುವ ವಾಹನಗಳು ಎಲ್ಲೂ ಸಂಚಾರಿ ದಟ್ಟನೆ ಮಾಡದಂತೆ ಸುಗಮವಾಗಿ ಸಭಾಂಗಣ ಸೇರಲು ವೇದಿಕೆ ಕಾರ್ಯಕರ್ತರು ಸಂಚಾರಿ ಪೋಲಿಸ್ ಸಹಯೋಗದೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಇದಲ್ಲದೆ, ಕರವೇ ದಶಮಾನೋತ್ಸವದ ಬಗ್ಗೆ ಕರವೇ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ. ನಾರಾಯಣಗೌಡರೊಡನೆ ವಿವಿಧ ಮಾಧ್ಯಮ ಪ್ರತಿನಿಧಿಗಳು ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ಹಿನ್ನೆಲೆ, ಉದ್ದೇಶ, ತಯಾರಿ, ಇತ್ಯಾದಿ ವಿಚಾರಗಳ ಬಗ್ಗೆ ವಿಶೇಷ ಸಂಚಿಕೆಯೊಡನೆ ವರದಿಯನ್ನೂ ಮಾಡಿದರು. ಕೆಲವು ಟಿ.ವಿ. ಚಾನೆಲ್ ಗಳಲ್ಲಿ ದಶಮಾನೋತ್ಸವದ ಕುರಿತು ಜಾಹಿರಾತನ್ನೂ ಪ್ರಸಾರ ಮಾಡಲಾಯಿತು. ಸಮಾವೇಶದ ಮೊದಲ ದಿನ : ೨೦೧೧ ನೇ ಜೂನ್ ೨೨, ಬುಧವಾರ ಕಿಕ್ಕಿರದ ಸಭಾಂಗಣದಲ್ಲಿ ಜೂನ ೨೨ರ ಬುಧವಾರ, ಸಮಾವೇಶದ ಮೊದಲನೇ ದಿನವೇ ಸುಮಾರು ೫೦ ಸಾವಿರಕ್ಕೂ ಹೆಚ್ಚು ಕನ್ನಡಿಗರು ಜಮಾಯಿಸಿದ್ದರು. ಸಂಜೆ ೫ ಗಂಟೆಗೆ ಸರಿಯಾಗಿ, ಕರವೇ ಜಾನಪದ ಕಲಾವಿದರ ಘಟಕದ ಸದಸ್ಯರು ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಜಾನಪದ ಸಂಭ್ರಮಕ್ಕೆ ಚಾಲನೆ ನೀಡಿದರು. ಸ್ವಲ್ಪ ಹೊತ್ತಿನಲ್ಲೇ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದ ನಾಡಿನ ಹಲವಾರು ಗಣ್ಯರು, ರಾಜಕೀಯ ಮುಖಂಡರು, ಮಠಾಧೀಶರು ಸಭಾಂಗಣಕ್ಕೆ ಆಗಮಿಸಲಾರಂಭಿಸಿದರು. ನಾಡಗೀತೆಯ ನಂತರ, ಸುಮಾರು ಸಂಜೆ ೬ ರ ವೇಳೆಗೆ ಬಹುತೇಕ ಗಣ್ಯರು ಸಭಾಂಗಣದಲ್ಲಿ ಉಪಸ್ಥಿತರಿದ್ದು, ಕರವೇ ರಾಜ್ಯ ವಕ್ತಾರರಾದ ಶ್ರೀ ಸಣ್ಣೀರಪ್ಪನವರು ಬಂದಿದ್ದ ಅತಿಥಿಗಳನ್ನೂ ಹಾಗೂ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡರನ್ನು ವೇದಿಕೆ ಮೇಲೆ ಬರಮಾಡಿಕೊಂಡು ಎಲ್ಲ ಕನ್ನಡಿಗರು ಮತ್ತು ಕರವೇ ಸಂಘಟನೆಯ ಪರವಾಗಿ ವೆದಿಕೆಯಲ್ಲಿದ್ದ ಅತಿಥಿಗಳಿಗೆ, ನೆರೆದಿದ್ದ ಸಾವಿರಾರು ಕನ್ನಡಿಗರಿಗೆ ಸ್ವಾಗತ ಕೋರಿದರು. ನಂತರ ಕೇಂದ್ರ ಸಚಿವ ಶ್ರೀ ಅನಂತ್ ಕುಮಾರ್ ಅವರು "ಸಿರಿ ಸಂಪತ್ತು" ಎಂಬ ಜಾನಪದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮ ಮುಂದುವರೆಯುತ್ತಾ ವೇದಿಕೆಯಲ್ಲಿ ನೆರೆದಿದ್ದ ವಿವಿಧ ಗಣ್ಯರು ಕರ್ನಾಟಕ ರಕ್ಷಣಾ ವೇದಿಕೆಯು ಕಳೆದ ೧೦ ವರ್ಷಗಳಿಂದ ಮಾಡಿದ್ದ ಸಾಧನೆಗಳ ಬಗ್ಗೆ, ಅವರು ಕಂಡಹಾಗೆ ಕರವೇ ಅನುಭವಿಸಿದ ಸವಾಲುಗಳ ಬಗ್ಗೆ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ರಕ್ಷಣೆ ಮತ್ತು ಏಳಿಗೆಯ ದೃಷ್ಟಿಯಿಂದ ಕರವೇಯ ಅವಶ್ಯಕತೆ, ಪ್ರಾಮುಖ್ಯತೆ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಮಾತನಾಡಿದ ಎಲ್ಲ ಗಣ್ಯರೂ ಕರವೇ ಇನ್ನೂ ಬೆಳೆದು, ಮತ್ತಷ್ಟು ಪರಿಣಾಮಕಾರಿ ಕೆಲಸಗಳನ್ನು ಮಾಡಲಿ ಎಂದು ಬಯಸುತ್ತಾ ಕರವೇಯ ಎಲ್ಲ ಕೆಲಸಗಳಿಗೆ, ಮತ್ತು ಕರವೇ ಮುಖಂಡರಾದ ನಾರಾಯಣಗೌಡರಿಗೆ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದರು. ಕರವೇ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುತ್ತಾ ಶ್ರೀಮತಿ ಮೋಟಮ್ಮನವರು ವೇದಿಕೆಯಲ್ಲಿ ಉಪ್ದಸ್ಥಿತರಿದ್ದ ಅನಂತಕುಮಾರ್ ಅವರನ್ನು, ಕನ್ನಡಿಗರ ಏಳಿಗೆಗಾಗಿ ಹೋರಾಟ ನಡೆಸಿದ ಕರವೇ ಕಾರ್ಯಕರ್ತರ ಮೇಲಿರುವ ಕೇಸುಗಳನ್ನು ಯಾಕಿನ್ನೂ ಹಿಂಪಡೆದಿಲ್ಲ ಎಂದು ಪ್ರಶ್ನಿಸಿದರು ಮತ್ತು ಕೂಡಲೆ ಹಿಂಪಡೆಯುವಂತೆ ಆಗ್ರಹಿಸಿದರು. ಮೊದಲ ದಿನದ ಕಾರ್ಯಕ್ರಮದ ಕೊನೆಯ ಭಾಗ ಮತ್ತು ಇಡೀ ಕಾರ್ಯಕ್ರಮದ ಮುಖ್ಯ ಪರಿಕಲ್ಪನೆಯಾಗಿದ್ದ ಜಾನಪದ ಸಂಭ್ರಮವನ್ನು ನೆರೆದಿದ್ದ ಸಾವಿರಾರು ಕನ್ನಡಿಗರ ಮುಂದೆ ಅನಾವರಣ ಮಾಡುವ ಸಮಯ ಸುಮಾರು ೯ ರ ವೇಳೆಗೆ ಆರಂಭವಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಜಾನಪದ ಕಲಾವಿದರು ಜಾನಪದ ಹಾಡು, ಕುಣಿತ ಮತ್ತು ಗುಂಪು ಗಾಯನದ ಮೂಲಕ ನೆರೆದಿದ್ದ ಎಲ್ಲ ಕನ್ನಡಿಗರನ್ನೂ ರಂಜಿಸಿದರು ಮತ್ತು ನಮ್ಮ ನಿಜವಾದ ಜಾನಪದ ಸೊಗಡನ್ನು ಎಲ್ಲರ ಮುಂದೆ ಅನಾವರಣಗೊಳಿಸಿದರು. ಸಮಾವೇಶದ ಎರಡನೇ ದಿನ : ೨೦೧೧ ನೇ ಜೂನ್ ೨೩, ಗುರುವಾರ ಸಮಾವೇಶದ ಎರಡನೇ ದಿನ, ಮೊದಲ ದಿನಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಭಿಮಾನಿ ಕನ್ನಡಿಗರ ಜನಸಾಗರ ಹರಿದುಬಂದಿತ್ತು. ಇಡೀ ಸಭಾಂಗಣದ ಮೂಲೆಮೂಲೆಗಳಲ್ಲೂ ಸೀಟುಗಳು ಭರ್ತಿಯಾಗಿದ್ದವು. ಬೆಳಿಗ್ಗೆ, ಸುಮಾರು ೧೦ ಗಂಟೆಗೆ ಮತ್ತೊಮ್ಮೆ ಸೊಗಸಾದ ಜಾನಪದ ಗೀತೆಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಾಡಗೀತೆಯ ನಂತರ ಸುಮಾರು ೧೧ ಗಂಟೆಗೆ ಉದ್ಘಾಟನೆಯಾದ ಕಾರ್ಯಕ್ರಮವನ್ನು ಮುನ್ನಡೆಸುತ್ತಾ, ಕರವೇ ನಲ್ನುಡಿಯ ಪ್ರಧಾನ ಸಂಪಾದಕರಾದ ಶ್ರೀ ದಿನೇಶ್ ರವರು ಕರವೇ ನಡೆಸುತ್ತಿರುವ ಹೋರಾಟಗಳಲ್ಲಿ ಕನ್ನಡಿಗರ ಏಳಿಗೆಯ ದೃಷ್ಟಿಯಿಂದ ಅತಿ ಪ್ರಮುಖ ವಿಷಯವಾದ "ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಪಾತ್ರ ಮತ್ತು ಮಹತ್ವ"ದ ಬಗ್ಗೆ ಪ್ರಸ್ತಾಪಿಸುತ್ತಾ, ಕರ್ನಾಟಕದ ನೀರಾವರಿ ಸಮಸ್ಯೆಗಳು, ರಾಜಕಾರಣದ ಸ್ಥಿತಿ, ಕನ್ನಡ ಚಿತ್ರರಂಗದ ಮುಂದಿನ ಹಾದಿ, ಕರ್ನಾಟಕದಲ್ಲಿನ ರೈತ ಮತ್ತು ದಲಿತ ಚಳುವಳಿಗಳು ಮತ್ತು ಕರ್ನಾಟಕದ ಮಾಧ್ಯಮ ರಂಗದಲ್ಲಾಗಿರುವ ಬದಲಾವಣೆಗಳು, ಮುಂತಾದ ಗಂಭೀರ ವಿಷಯಗಳ ಕುರಿತ ವಿಚಾರಗೋಷ್ಠಿಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಚಾರಗೋಷ್ಠಿಯಲ್ಲಿ ಮೊದಲಿಗರಾಗಿ ಮಾತಾಡಿದ ಶ್ರೀ ಹೆಚ್. ಕೆ. ಪಾಟೀಲ್ ಅವರು ಕರ್ನಾಟಕದಲ್ಲಿ ಉತ್ಪತ್ತಿಯಾಗುವ ನೀರಿನ ಪ್ರಮಾಣ ಎಷ್ಟು, ಅದರಲ್ಲಿ ಸರಿಯಾಗಿ ಬಳಕೆಯಾಗುವ ನೀರು ಎಷ್ಟು, ಕೃಷಿಯೋಗ್ಯ ಭೂಮಿ ಎಷ್ಟು, ಅದಕ್ಕೆ ಬೇಕಾದ ನೀರಿನ ಪ್ರಮಾಣ ಎಷ್ಟು.. ಇತ್ಯಾದಿ ಮುಖ್ಯವಾದ ಅಂಕಿಅಂಶಗಳನ್ನು ನೀಡುತ್ತಾ, ಕರ್ನಾಟದ ನದಿ ನೀರಿನ ವ್ಯಾಜ್ಯಗಳು, ಇತರೆ ರಾಜ್ಯಗಳ ಮತ್ತು ಕೇಂದ್ರಸರ್ಕಾರದ ತಾರತಮ್ಯ ನೀತಿಯಿಂದ ನಮಗಾಗಿರುವ ಅನ್ಯಾಯಗಳು, ಕೃಷ್ಣಾ ಮತ್ತು ಕಾವೇರಿ ನೀರಿನ ತೀರ್ಪಿನಲ್ಲಿ ನಮಗಾದ, ಆಗುತ್ತಿರುವ ಅನ್ಯಾಯಗಳು, ಕರ್ನಾಟಕದ ನೀರಾವರಿ ರಂಗದಲ್ಲಿನ ಸಮಸ್ಯೆಗಳು, ಸವಾಲುಗಳು, ಒಣಬೇಸಾಯದ ಒಕ್ಕಲುತನದ ಸಮಸ್ಯೆಗಳು - ಈ ಎಲ್ಲ ವಿಚಾರಗಳ ಬಗ್ಗೆ ವಿವರವಾಗಿ ವಿಷಯ ಮಂಡಿಸಿದರು. ಹಾಗೆಯೇ, ನದಿ ನೀರಿನ ವಿವಾದಗಳನ್ನು ಬಗೆಹರಿಸುವತ್ತ ಸರ್ಕಾರಕ್ಕಿರಬೇಕಾದ ಜವಾಬ್ದಾರಿಯ ಬಗ್ಗೆ ತಿಳಿಸುತ್ತಾ, ಪ್ರಸ್ತುತ ನೀರಾವರಿ ವಿಧಾನಗಳಿಂದ ಆಗುತ್ತಿರುವ ನೀರಿನ ಸೋರಿಕೆಯನ್ನು ತಡೆದು, ರಾಜ್ಯದಲ್ಲಿ "ತುಂತುರು ನೀರಾವರಿ ಯೋಜನೆಗಳನ್ನು" ಜಾರಿಗೊಳಿಸಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಮಾಜಿ ವಿಧಾನಸಭಾಪತಿಗಳಾದ ಶ್ರೀ ಬಿ.ಎಲ್. ಶಂಕರ್ ಅವರು ಕರ್ನಾಟಕದ ರಾಜಕಾರಣ ದಾರಿತಪ್ಪಿದ್ದೆಲ್ಲಿ ಎಂಬ ವಿಚಾರವಾಗಿ ವಿಷಯ ಮಂಡಿಸಿದರು. ಈ ವಿಚಾರವಾಗಿ ತಾವು ಗಮನಿಸಿದ್ದನ್ನು ಹಂಚಿಕೊಳ್ಳುತ್ತಾ, ಏಕೀಕರಣದ ಸಂದರ್ಭದಲ್ಲಿ ಪ್ರಮುಖ ಸುಮುದಾಯಗಳ ತಿಕ್ಕಾಟ ಆರಂಭವಾಗಿ, ಸಮುದಾಯಗಳ ಅಸ್ತಿತ್ವ, ರಾಜಕೀಯ ಭವಿಷ್ಯದ ಬಗೆಗಿನ ಅನುಮಾನಗಳಿಂದ ರಾಜ್ಯ ರಾಜಕಾರಣ ದಾರಿತಪ್ಪಿಲಾರಂಭಿಸಿತು ಎಂದು ತಿಳಿಸಿದರು. ೮೦ರ ದಶಕದಲ್ಲಿ ಆರಂಭವಾದ ಚಳುವಳಿಗಳಾದ ರೈತ ಚಳುವಳಿ ಮತ್ತು ದಲಿತ ಚಳುವಳಿಗಳ ನೇತಾರರು ಒಂದೇ ವೇದಿಕೆಯಲ್ಲಿ ಹೋರಾಡದೆ, ರಾಜಕೀಯವಾಗಿ ಬೇರೆಬೇರೆ ದಿಕ್ಕುಗಳಾಗಿ ಚದುರಿದ್ದು ನಿಧಾನವಾಗಿ ಜಾತಿ-ಒಳಜಾತಿಗಳ ತಿಕ್ಕಾಟಕ್ಕೆ, ಬಂಡವಾಳವಿಲ್ಲದ ವ್ಯಾಪಾರ ಮಾಡುವುದಕ್ಕೆ ಎಡೆಮಾಡಿಕೊಟ್ಟಂತಾಯಿತು ಎಂದು ಅಭಿಪ್ರಾಯಪಟ್ಟರು.
ರೈತ ಚಳುವಳಿಯ ಬಗ್ಗೆ ಹಾಗೂ ದಲಿತ ಸಂಘರ್ಷ ಚಳುವಳಿಯ ಬಗ್ಗೆ ಮಾತಾಡಿದ ಶ್ರೀ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ವೆಂಕಟಸ್ವಾಮಿಯವರು ಆಯಾ ಚಳುವಳಿಗಳ ಹಿನ್ನೆಲೆ, ಇಂದಿನ ರಾಜಕೀಯ ಸಮಸ್ಯೆಗಳು ಮತ್ತು ಕರವೇ ಹೋರಾಟಕ್ಕೆ ರಾಜಕೀಯ ಶಕ್ತಿ ತುಂಬುವಲ್ಲಿ ತಮ್ಮ ಬೆಂಬಲ, ಇತ್ಯಾದಿ ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿದರು. ಕರ್ನಾಟಕದ ಮಾಧ್ಯಮರಂಗದಲ್ಲಾದ ಬದಲಾವಣೆಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಆ ರಂಗದಲ್ಲಿ ತಮ್ಮ ಅನುಭವದ ಆಧಾರದ ಮೇಲೆ ಇಂದು ಕಾಣುತ್ತಿರುವ ಸಮಸ್ಯೆಗಳು, ಕನ್ನಡ ಕನ್ನಡಿಗ ಮತ್ತು ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ತೋರುವ ಧೋರಣೆ, ಕರವೇ ಹೋರಾಟಕ್ಕೆ ಮಾಧ್ಯಮ ರಂಗದಿಂದ ಸಿಗಬೇಕಾದ ಬೆಂಬಲ ದೊರೆತಿದೆಯೆ, ಇಲ್ಲವೆ ಎಂಬ ಹತ್ತು ಹಲವಾರು ವಿಚಾರಗಳ ಬಗ್ಗೆ ವಿವರವಾಗಿ ವಿಷಯ ಮಂಡಿಸಿದರು. ಕನ್ನಡಿಗರ ಏಳಿಗೆಯಲ್ಲಿ, ಸಾಮಾಜಿಕ ಬದಲಾವಣೆಗಳಲ್ಲಿ ವಚನಕಾರರು ಸಲ್ಲಿಸಿದ ಸೇವೆಯನ್ನು ನೆನೆಯುತ್ತಾ, ಸರಳ ಕನ್ನಡ ಭಾಷೆಯಲ್ಲಿ ಕನ್ನಡಿಗರ ದಿನನಿತ್ಯದ ವ್ಯವಹಾರ ನಡೆಯುವಂತಾಬೇಕು ಮತ್ತು ಕನ್ನಡ ನೂರಕ್ಕೆ ನೂರು ಆಡಳಿತ ಭಾಷೆಯಾಗಿ, ಕರ್ನಾಟಕದ ಮಾರುಕಟ್ಟೆ ಭಾಷೆಯಾಗಬೇಕು ಮತ್ತು ಆ ನಿಟ್ಟಿನಲ್ಲಿ ಕರವೇ ಪಾತ್ರ ಬಲು ದೊಡ್ಡದು ಎಂದು ಅಭಿಪ್ರಾಯಪಟ್ಟರು. ಸಮಾವೇಶದ ಮುಕ್ತಾಯ: ದಶಮಾನೋತ್ಸವದ ಕೊನೆಯ ಭಾಗವಾದ ಸಮಾರೋಪ ಸಮಾರಂಭಕ್ಕೆ ನಾಡಿನ ಪ್ರಮುಖ ಗಣ್ಯರು ಮತ್ತು ರಾಜಕೀಯ ಮುಖಂಡರು ಆಗಮಿಸಿದ್ದರು. ರೈಲ್ವೆ ಸಚಿವರಾದ ಮುನಿಯಪ್ಪನವರು ಮಾತಾಡುತ್ತಾ ಕರವೇಯ ದಿಟ್ಟ ಹೋರಾಟಗಳು ರೈಲ್ವೆ ಡಿ-ಗ್ರೂಪ್ ಪರೀಕ್ಷೆಯನ್ನು ಪ್ರಾಂತೀಯ ಭಾಷೆಯಲ್ಲಿ ಬರೆಯುವ ಅವಕಾಶವನ್ನು ಸ್ಥಳೀಯರಿಗೆ ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿದವು ಎಂದು ತಿಳಿಸಿದರು. ಕರವೇ ಎಲ್ಲ ಹೋರಾಟಗಳಿಗೂ ತಮ್ಮ ಬೆಂಬಲವಿರುತ್ತದೆ ಮತ್ತು ಇಲಾಖೆಯ ಪರಿಧಿಯಲ್ಲಿ ಬರುವ ಕರವೇ ಕಾರ್ಯಕರ್ತರ ಮೇಲಿನ ಕೇಸುಗಳನ್ನು ಕೈಬಿಡಿಸಲು ಕೇಂದ್ರದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ಹೊರನಾಡಿನಿಂದ ಕರ್ನಾಟಕಕ್ಕೆ ಬಂದು ನೆಲೆಸಿರುವ, ಕನ್ನಡ ಕಲಿಯುವುದನ್ನು ತಮ್ಮ ಕರ್ತವ್ಯವೆಂದು ಭಾವಿಸಿರುವ, ಕನ್ನಡ ಸಿನಿಮಾ ರಂಗದಲ್ಲಿ ಕನ್ನಡಿಗರ ಮನಗೆದ್ದಿರುವ ಪೂಜಾಗಾಂಧಿಯವರು ತಮ್ಮ ಇಡೀ ಭಾಷಣವನ್ನು ಕನ್ನಡಲ್ಲೇ ಮಾಡಿದರು. ತಮ್ಮ ಮಾತುಗಳಲ್ಲಿ ಪರಭಾಷಿಕರು ಇಲ್ಲಿ ಬಂದಾಗ, ಇಲ್ಲಿನ ನೆಲ ಜಲದ ಲಾಭ ಪಡೆದುಕೊಂಡಾಗ, ಇಲ್ಲಿನ ಸಂಸ್ಕೃತಿಯೊಡನೆ ಬೆರೆತು, ಕನ್ನಡಿಗರಾಗಿ ಬಾಳಬೇಕಾದುದು ಒಂದು ಜವಾಬ್ದಾರಿಯ ವಿಷಯ ಎಂದು ಅತ್ಯಂತ ಕಾಳಜಿಯಿಂದ ಕನ್ನಡಿಗರ ಮೇಲಿನ ತಮ್ಮ ಪ್ರೀತಿ ವ್ಯಕ್ತ ಪಡಿಸಿದರು. ಕನ್ನಡದ ಹಿರಿಯ ಲೇಖಕರು, ಕನ್ನಡಪರ ಹೋರಾಟಗಾರರೂ ಆದ ಡಾ. ದೇ. ಜವರೇಗೌಡರು ಮಾತಾಡುತ್ತಾ, ಕನ್ನಡದಲ್ಲಿ ಓದಿದವರಿಗೆ ಆದ್ಯತೆ ಮೇಲೆ ಕೆಲಸಗಳು ಸಿಗಬೇಕು, ಮತ್ತು ಇಂಗ್ಲಿಶ್ ಮಾಧ್ಯಮದ ಶಾಲೆಗಳಿಗೆ ಟ್ಯಾಕ್ಸ್ ವಿಧಿಸಬೇಕು ಎಂದು ಅಭಿಪ್ರಾಯ ಪಡುತ್ತಾ, ಇತ್ತೀಚೆಗೆ ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳ ಬಗ್ಗೆ ಘೋಷಣೆ ಮಾಡಿದ್ದನ್ನು ತೀವ್ರವಾಗಿ ಟೀಕಿಸಿದರು. ಸಮಾರಂಭದ ಕೊನೆಯ ಹೊತ್ತಿನಲ್ಲಿ ಮಾತಾಡಿದ ಶ್ರೀ ಡಿ.ಕೆ. ಶಿವಕುಮಾರ್ ಮತ್ತು ಶ್ರೀ ಸಿದ್ಧರಾಮಯ್ಯನವರು ಕರ್ನಾಟಕದ ರಕ್ಷಣೆ ಮತ್ತು ಬೆಳವಣಿಗೆಗೆ ಕರವೇ ಅಂತಹ ಸಂಘಟನೆಯ ಅವಶ್ಯಕತೆ, ಕರವೇ ಮಾಡಿರುವ ಸಾಧನೆಗಳ ಬಗ್ಗೆ, ಮತ್ತು ಕರವೇ ಎಲ್ಲ ಹೋರಾಟಕ್ಕೂ ತಮ್ಮ ಬೆಂಬಲದ ಬಗ್ಗೆ ಒತ್ತಿ ಹೇಳಿದರು. ಹಾಗೆಯೇ, ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಮಾನ್ಯ ಸಚಿವಾರಾದ ಅಶೋಕ್ ಅವರಲ್ಲಿ ಕನ್ನಡಕ್ಕಾಗಿ ಹೋರಾಡುತ್ತಾ ಹಲವು ಕೇಸುಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿರುವ ಕರವೇ ಕಾರ್ಯಕರ್ತರ ಮತ್ತು ನಾರಾಯಣಗೌಡರ ಮೇಲಿರುವ ಕೇಸುಗಳನ್ನು ಕೂಡಲೆ ಖುಲಾಸೆ ಮಾಡಬೇಕೆಂದು ಆಗ್ರಹಿಸಿದರು. ಸಿದ್ಧರಾಮಯ್ಯನವರು ತಾವು ಹಿಂದೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದಾಗ ಕನ್ನಡದ ವಾತಾವರಣ ನಿರ್ಮಿಸಲು ಕೈಗೊಂಡಿದ್ದ ಕ್ರಮಗಳನ್ನು ನೆನೆಸಿಕೊಳ್ಳುತ್ತಾ, ಇಂದು ಆಡಳಿತದಲ್ಲಿ, ಕಲಿಕಾ ಮಾಧ್ಯಮದಲ್ಲಿ ಸಂಪೂರ್ಣ ಕನ್ನಡದ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ತಿಳಿಸಿದರು. ಎಲ್ಲ ಗಣ್ಯರ ಭಾಷಣಗಳ ನಂತರ, ಇಡೀ ಕರವೇ ದಶಮಾನೋತ್ಸವದ ಅತಿಮುಖ್ಯ ಭಾಗವಾಗಿ, ನೆರೆದಿದ್ದ ಸಾವಿರಾರು ಕನ್ನಡಿಗರು, ಮಾಧ್ಯಮ ಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರ ಸಮ್ಮುಖದಲ್ಲಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಏಳಿಗೆಯ ಬಗ್ಗೆ ಬಲು ಮುಖ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಮತ್ತು ಕರವೇ ಮುಂದಿನ ಹೆಜ್ಜೆಯಾಗಿ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೆ ತರಲು ನಿರಂತರ ಹೋರಾಟ ಮಾಡುಲಾಗುವುದು ಎಂದು ನೆರೆದಿದ್ದ ಜನರೊಡನೆ ಕರವೇ ಕಾರ್ಯಕರ್ತರಾದ ಜಯದೇವ ಪ್ರಸನ್ನರವರು ತಿಳಿಸಿದರು. ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳು ಕೆಳಗಿನಂತಿವೆ: ೧. ಕೇಂದ್ರಸರ್ಕಾರದ, ರಾಜ್ಯಸರ್ಕಾರದ ಮತ್ತು ಖಾಸಗಿ ವಲಯದ ಎಲ್ಲಾ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಮತ್ತು ಇನ್ನಿತರ ಪೂರಕ ವರದಿಗಳಿಗೆ ರಾಜ್ಯಸರ್ಕಾರವು ಕೂಡಲೇ ಕಾಯ್ದೆಯ ಸ್ವರೂಪ ನೀಡಿ ಅದರ ಜಾರಿಗೆ ಮುಂದಾಗಬೇಕು. ನೆರೆಯ ಮಹಾರಾಷ್ಟ್ರ, ಒರಿಸ್ಸಾಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನಿಗದಿಪಡಿಸಿ ಕಾಯ್ದೆ ಮಾಡಿದಂತೆ ಕರ್ನಾಟಕದಲ್ಲೂ ಕಾಯ್ದೆ ಜಾರಿಯಾಗಬೇಕು. ೨. ನೆರೆರಾಜ್ಯಗಳು ನಮ್ಮ ನೆಲವನ್ನು ಕಬಳಿಸುತ್ತಾ ಆಗಿಂದಾಗ್ಗೆ ಎತ್ತುತ್ತಿರುವ ಗಡಿ ತಂಟೆಗಳಿಗೆ ಕೊನೆ ಹಾಡಲು ಕೂಡಲೇ ಮಹಾಜನ್ ವರದಿಯನ್ನು ಕೇಂದ್ರಸರ್ಕಾರ ಜಾರಿ ಮಾಡಬೇಕು. ಆ ಮೂಲಕ ಕರ್ನಾಟಕಕ್ಕೆ ನ್ಯಾಯವಾಗಿ ಸೇರಬೇಕಾದ ಕಾಸರಗೋಡು, ಸೊಲ್ಲಾಪುರ ಜಿಲ್ಲೆಗಳು ಕರ್ನಾಟಕಕ್ಕೆ ಸೇರಿಕೊಳ್ಳಬೇಕು. ೩. ಕರ್ನಾಟಕದಲ್ಲಿ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಆದ್ಯತೆಯ ಮೇರೆಗೆ ಪೂರೈಸಬೇಕು. ಕೃಷ್ಣಾ ಕಾವೇರಿ ಗೋದಾವರಿ ಮಹದಾಯಿ ಮೊದಲಾದ ನದಿ ಪಾತ್ರಗಳಲ್ಲಿನ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಮುಗಿಸಬೇಕು ಮತ್ತು ನಾಡಿನ ಜನರಿಗೆ ಇವುಗಳಿಂದ ಅನುಕೂಲ ಆಗಬೇಕು. ಯೋಜನೆಯ ಹಣದ ಸದ್ಬಳಕೆ,ಭ್ರಷ್ಟಾಚಾರಕ್ಕೆ ನಿಯಂತ್ರಣಗಳನ್ನು ಕೈಗೊಳ್ಳಲು ಬೇಕಾದ ವ್ಯವಸ್ಥೆಗಳನ್ನು ರೂಪಿಸಬೇಕು. ೪. ಅಂತರರಾಜ್ಯ ನದಿ ತಂಟೆ ಬೇಗನೆ ಬಗೆಹರಿಯಬೇಕು. ಕೃಷ್ಣಾ, ಕಾವೇರಿ, ಮಹದಾಯಿ ಮೊದಲಾದ ನದಿಗಳ ನೀರು ಹಂಚಿಕೆಯನ್ನು ನ್ಯಾಯಾಧಿಕರಣದ ಮೂಲಕ ಮಾಡಿದರೂ, ಪರಿಣಾಮಕಾರಿಯಾದ ರಾಷ್ಟ್ರೀಯ ಜಲನೀತಿಯೊಂದು ಇಲ್ಲದ ಕಾರಣದಿಂದ ಕರ್ನಾಟಕಕ್ಕೆ ಎಂದಿಗೂ ಸಂಪೂರ್ಣವಾಗಿ ನ್ಯಾಯ ಸಿಕ್ಕಿಲ್ಲ. ಹಾಗಾಗಿ, ಕೂಡಲೇ ರಾಷ್ಟ್ರೀಯ ಜಲನೀತಿಯೊಂದನ್ನು ರೂಪಿಸಿ ಅದರ ಆಧಾರದ ಮೇಲೆ ಅಂತರ ರಾಜ್ಯ ನದಿನೀರು ಹಂಚಿಕೆ ವಿವಾದಗಳನ್ನು ವೈಜ್ಞಾನಿಕ ನೆಲೆಯಲ್ಲಿ ಬಗೆಹರಿಸಬೇಕು. ಈಗಾಗಲೇ ನೀಡಲಾಗಿರುವ ಕಾವೇರಿ, ಕೃಷ್ಣಾ ಐತೀರ್ಪುಗಳನ್ನು ರಾಜ್ಯಪತ್ರದಲ್ಲಿ ಪ್ರಕಟಿಸದೆ ಅಧಿಕೃತವಾಗಿ ತಡೆಹಿಡಿದು ಎಲ್ಲಾ ನದಿನೀರು ಹಂಚಿಕೆಯನ್ನೂ ರಾಷ್ಟ್ರೀಯ ಜಲನೀತಿಯ ಅನ್ವಯವೇ ತೀರ್ಮಾನಿಸಬೇಕು. ನದಿ ನೀರನ್ನು ಕೇಂದ್ರದ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಿ ನದಿಗಳನ್ನು ರಾಷ್ಟ್ರೀಕರಿಸುವ ಯಾವುದೇ ದುಸ್ಸಾಹಸಕ್ಕೆ ಕೇಂದ್ರಸರ್ಕಾರ ಮುಂದಾಗಬಾರದು. ೫. ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಮದ್ದಾದ ಡಾ. ನಂಜುಂಡಪ್ಪ ವರದಿ ಜಾರಿಗೆ ಬರಲಿ. ಕರ್ನಾಟಕದಲ್ಲಿ ಮುಂದುವರೆದ ಪ್ರದೇಶಗಳು ಇರುವಂತೆಯೇ ನಿರ್ಲಕ್ಷ್ಯಕ್ಕೆ ಒಳಗಾದ, ಇನ್ನೂ ಏಳಿಗೆ ಹೊಂದಬೇಕಾದ ಅನೇಕ ಪ್ರದೇಶಗಳಿವೆ. ಇವುಗಳ ಬಗ್ಗೆ ಸಮಗ್ರವಾದ ಒಂದು ವರದಿಯನ್ನು ಆಳವಾದ ಅಧ್ಯಯನದ ಬಳಿಕ ಡಾ. ನಂಜುಂಡಪ್ಪನವರು ಸಲ್ಲಿಸಿರುತ್ತಾರೆ. ಕರ್ನಾಟಕದ ಪ್ರತಿಯೊಂದು ಪ್ರದೇಶಗಳಲ್ಲಿನ ತಾಲೂಕುವಾರು ಮಾಹಿತಿಯನ್ನು ಈ ವರದಿ ಒಳಗೊಂಡಿದ್ದು ಕರ್ನಾಟಕ ಸರ್ಕಾರವು ಪ್ರಾದೇಶಿಕ ಅಸಮಾನತೆಯನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಸೂಕ್ತ ಯೋಜನೆಗಳನ್ನು ರೂಪಿಸಿ ತ್ವರಿತವಾಗಿ ಜಾರಿಮಾಡಬೇಕು. ೬. ಕನ್ನಡಿಗರ ಮೇಲೆ ನಿರಂತವಾಗಿ ನಡೆಯುತ್ತಿರುವ ಹಿಂದೀ ಹೇರಿಕೆ ಕೊನೆಯಾಗಬೇಕು. ಭಾರತಸರ್ಕಾರ ಹೇರಿರುವ ತ್ರಿಭಾಷಾ ಸೂತ್ರವನ್ನು ರಾಜ್ಯಸರ್ಕಾರ ಕೈಬಿಡಬೇಕು. ಕರ್ನಾಟಕದ ಮಕ್ಕಳ ಕಲಿಕೆಯಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವ, ಇಲ್ಲಿನ ಜನರು ಕೇಂದ್ರಸರ್ಕಾರಿ ನೌಕರಿಗೆ/ ಉದ್ದಿಮೆಗೆ ಕೆಲಸಕ್ಕೆ ಸೇರಬೇಕಾದರೆ ಹಿಂದೀ ಕಲಿತಿರಬೇಕೆಂಬ ಕಟ್ಟಳೆಯನ್ನು ತೆಗೆದುಹಾಕಬೇಕು.
೭. ಕನ್ನಡ ನುಡಿಯನ್ನು ಕರ್ನಾಟಕದ ಆಡಳಿತ ಭಾಷೆಯಾಗಿ ಸಂಪೂರ್ಣವಾಗಿ ಜಾರಿಮಾಡಬೇಕು. ಕೇಂದ್ರಸರ್ಕಾರಿ ಕಛೇರಿಗಳೂ ಸೇರಿದಂತೆ ಇಲ್ಲಿನ ಎಲ್ಲವೂ ಕನ್ನಡದಲ್ಲಿ ಆಡಳಿತ ನಡೆಸುವುದು ಕಡ್ಡಾಯವಾಗಬೇಕು. ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ನೀಡಲು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವೆನ್ನುವ ಕಾಯ್ದೆಯನ್ನು ರೂಪಿಸಬೇಕು.
|