ಕನ್ನಡ ನಾಡಿನ ಇತಿಹಾಸದ ಪುಟಗಳಲ್ಲಿ, ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ಮಹತ್ವದ ವರ್ಷ ೨೦೦೫. ಕ್ಷತ್ರಿಯತ್ವವನ್ನು ಮರೆತೇ ಹೋಗಿದ್ದ ಕನ್ನಡಿಗರಲ್ಲಿ ಜಾಗೃತಿಯ ಕಿಡಿ ಹಚ್ಚಿ ಕನ್ನಡ ಪರ ಹೋರಾಟಕ್ಕೆ ಹೊಸ ತಿರುವು ದೊರೆತದ್ದು ಇದೇ ವರ್ಷದಲ್ಲಿ. ಏಕೀಕರಣವಾದ ದಿನದಿಂದಲೂ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಜನ ಕನ್ನಡಿಗರ ಮೇಲೆ ನಡೆಸಿದ ಪುಂಡಾಟಿಕೆಗಳಿಗೆ ಮಿತಿಯೇ ಇಲ್ಲವಾಗಿತ್ತು. ಕನ್ನಡ ರಾಜ್ಯೋತ್ಸವದಂದು ಬಂದ್ ಮಾಡುವುದು, ರಾಜ್ಯೋತ್ಸವ ಮೆರವಣಿಗೆ ಮೇಲೆ ದಾಳಿ ನಡೆಸಿ ಕಲ್ಲು ತೂರುವುದನ್ನು ನಡೆಸಿಕೊಂಡೇ ಬಂದಿರುವ ಎಂ.ಇ.ಎಸ್. ನ ಪುಂಡರು, ಗಡಿ ಊರುಗಳಾದ ನಿಪ್ಪಾಣಿ, ಖಾನಾಪುರಗಳಲ್ಲಿ ಕನ್ನಡಿಗರ ಅಂಗಡಿ ಮುಂಗಟ್ಟುಗಳಿಗೆ ಬೆಂಕಿಹಚ್ಚಿ ನೇರ ದಾಳಿ ಮಾಡಿದ ಇತಿಹಾಸ ಹೊಂದಿದ್ದಾರೆ. ನೀರು ಸರಬರಾಜು ಕೊಳವೆಗೆ ಹಾನಿ ಮಾಡಿ ತಮ್ಮ ಹೋರಾಟ ಜನವಿರೋಧಿಯೆಂದು ಸಾಬೀತು ಮಾಡುತ್ತಿರುವ ಎಂ.ಇ.ಎಸ್, ಕನ್ನಡಿಗನ ಸಹನ ಶೀಲತೆಯನ್ನೇ ದೌರ್ಬಲ್ಯವೆಂದು ಪರಿಗಣಿಸಿತ್ತು. ತಾನು ಮಹಾನಗರ ಪಾಲಿಕೆಗೆ ಪ್ರತೀಬಾರಿ ಆಯ್ಕೆಯಾದಾಗಲೂ ಮಾಡುತ್ತಿದ್ದ ಮೊದಲ ಕೆಲಸ - ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಣಯ ತೆಗೆದುಕೊಳ್ಳುತ್ತಾ ಇದ್ದದ್ದು. ಇಂತಹ ನಿರ್ಣಯ ಕೈಗೊಂಡಾಗಲೆಲ್ಲಾ ಬೆಳಗಾವಿಯ ಕನ್ನಡಿಗರು ಆತಂಕ ಮತ್ತು ಆಕ್ರೋಶಗಳಿಗೆ ತುತ್ತಾದರೂ ಪ್ರತಿಭಟಿಸಲು ನಾಡಿನ ಇತರೆ ಕನ್ನಡ ಸೋದರರತ್ತ ಆಶಾದೃಷ್ಟಿ ಬೀರುತ್ತಿದ್ದರು. ಕನ್ನಡಿಗರ ಪ್ರತಿಭಟನೆ ಮರಾಠಿ ಗೂಂಡಾಗಳ ಅಬ್ಬರದ ಎದುರು ಕ್ಷೀಣವಾಗಿ ಮರೆಯಾಗಿಬಿಡುತ್ತಿತ್ತೆಂದು ಬೆಳಗಾವಿ ಕನ್ನಡಿಗರೇ ಹೇಳುತ್ತಾರೆ. 
ಇಂತಹ ಸನ್ನಿವೇಶದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವೀರ ಸೈನಿಕರು, ಬೆಂಗಳೂರಿಗೆ ಭೇಟಿ ನೀಡಿದ್ದ ಅಂದಿನ ಬೆಳಗಾವಿಯ ಕನ್ನಡ ವಿರೋಧಿ ಮೇಯರ್ ವಿಜಯ್ ಮೋರೆಯ ಮುಖಕ್ಕೆ ಶಾಸಕರ ಭವನದಲ್ಲಿಯೇ ಮಸಿ ಬಳಿದು ನಾಡಿನಾದ್ಯಂತ ಸಂಚಲನವುಂಟು ಮಾಡಿದರು. ಅಂದಿನ ಮುಖ್ಯಮಂತ್ರಿಗಳಾದ ಶ್ರೀ.ಧರಂಸಿಂಗ್‌ರವರು ಕನ್ನಡ ವಿರೋಧಿ ಮಹಾನಗರ ಪಾಲಿಕೆಯನ್ನು ವಜಾಗೊಳಿಸಿತು. ಇದು ತಮಗೆ ಎದುರೇ ಇಲ್ಲವೆಂದು ಬೀಗುತ್ತಿದ್ದ ಎಂ.ಇ.ಎಸ್. ನ ಮಂದಿಗೆ ಮರ್ಮಾಘಾತವುಂಟು ಮಾಡಿತು. ಇದಕ್ಕಿಂತ ಮುಖ್ಯವಾಗಿ ಬೆಳಗಾವಿಯ ಕನ್ನಡ ಬಂಧುಗಳಲ್ಲಿ ಇಡೀ ಕನ್ನಡ ನಾಡು ನಿಮ್ಮ ಜೊತೆಗಿದೆ ಎಂಬ ಆತ್ಮವಿಶ್ವಾಸದ ಸಂದೇಶ ಸಾರಿತು. ಬೆಳಗಾವಿಯ ಕನ್ನಡ ಹೋರಾಟಗಾರರೆಲ್ಲ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಧ್ವಜದಡಿಯಲ್ಲಿ ಸಂಘಟಿತರಾದರು. ಬೆಳಗಾವಿಯ ಕನ್ನಡಿಗರಿಗೆ ನಾಡಿನ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಯಿತು. ಈ ಬೆಂಬಲವೇ ನಂತರದ ದಿನಗಳಲ್ಲಿ ಬೆಳಗಾವಿಯಲ್ಲಿ ಕನ್ನಡ ಪರವಾದ ನಾನಾ ಹೋರಾಟಗಳು ನಡೆಯಲು ಪ್ರೇರಣೆಯಾಯಿತು. ಮುಖ್ಯಮಂತ್ರಿಗಳಾಗಿ ಶ್ರೀ.ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಏಪ್ರಿಲ್ ೧, ೨೦೦೬ರಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಳಗಾವಿಯಲ್ಲಿ ಅಮರಣಾಂತ ಉಪವಾಸ ಕೈಗೊಂಡರು. ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ, ಐ.ಟಿ, ಬಿ.ಟಿ ಪಾರ್ಕ್ ಸ್ಥಾಪನೆ, ವಿಶ್ವಕನ್ನಡ ಸಮ್ಮೇಳನಗಳನ್ನು ನಡೆಸಲು ಒತ್ತಾಯಿಸುವುದೂ ಸೇರಿದಂತೆ ಒಟ್ಟು ಹತ್ತು ಹಲವು ಬೇಡಿಕೆಗಳನ್ನು ಕಾರ್ಯಗತಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತ್ತು. ಏಪ್ರಿಲ್ ೭ರವರೆಗೆ ನಡೆದ ಈ ಸತ್ಯಾಗ್ರಹ ಚಳವಳಿಕಾರರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿಗಳು ಅಂದು ನೀಡಿದ್ದ ಆಶ್ವಾಸನೆ ಇಂದು ಕಾರ್ಯರೂಪಕ್ಕೆ ಬರುತ್ತಿರುವುದು ನಾಡಿನ ಎಲ್ಲ ಕನ್ನಡಿಗರಲ್ಲೂ ಹೊಸ ಚೈತನ್ಯ ತರುತ್ತಿದೆ. ಜೊತೆಗೆ ಬೆಳಗಾವಿಯಿಂದ ಎರಡು ಸಾವಿರಕ್ಕೂ ಹೆಚ್ಚಿನ ವೇದಿಕೆಯ ಕಾರ್ಯಕರ್ತರು ಬೆಂಗಳೂರಿಗೆ ಬಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಆ ಎಲ್ಲ ಹೋರಾಟಗಳು ಇಂದು ಪ್ರತಿಫಲ ನೀಡಿವೆ. ಬೆಳಗಾವಿಯಲ್ಲಿ ವಿಧಾನ ಸಭಾ ಅಧಿವೇಶನ ನಡೆದಿದೆ. ಐ.ಟಿ, ಬಿ.ಟಿ ಪಾರ್ಕಿನ ಶಂಕುಸ್ಥಾಪನೆ ನೆರವೇರಿದೆ. ವಿಶ್ವಕನ್ನಡ ಸಮ್ಮೇಳನ ನಡೆಯಲಿದೆ. ಈ ಎಲ್ಲ ಕನಸುಗಳು ಸಾಕಾರಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಲಿವೆ. ಬೆಳಗಾವಿಯಲ್ಲಿ ಇದೇ ಸೆಪ್ಟೆಂಬರ್ ಅಂತ್ಯದಲ್ಲಿ ನಡೆದ 'ವಿಧಾನ ಸಭಾ ಅಧಿವೇಶನ'ಗಳು ಬೆಳಗಾವಿಯ ಮತ್ತು ಉತ್ತರ ಕರ್ನಾಟಕದ ಎಲ್ಲ ಕನ್ನಡಿಗರಲ್ಲಿ, ವಿಶೇಷವಾಗಿ ಗಡಿನಾಡ ಕನ್ನಡಿಗರಲ್ಲಿ ಆತ್ಮಸ್ಥೈರ್ಯ ತುಂಬಿರುವುದು ಸತ್ಯ. ಜೊತೆ ಜೊತೆಗೆ ಕನ್ನಡ ವಿರೋಧಿಗಳಲ್ಲಿ ನಡುಕ ಹುಟ್ಟು ಹಾಕಿರುವುದೂ ಸ್ಪಷ್ಟ. ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲು ಉದ್ದೇಶಿಸಿದ್ದ ಪ್ರಮಾಣ ಪತ್ರವನ್ನು, ಮಹಾರಾಷ್ಟ್ರ ಮತ್ತು ಮರಾಠಿ ಭಾಷಿಕ ಕೇಂದ್ರ ಸಚಿವರ ಒತ್ತಡಕ್ಕೆ ಮಣಿದು ಬದಲಾಯಿಸಲು ತೀರ್ಮಾನಿಸಿದ್ದು, ಕೇಂದ್ರ ಸರ್ಕಾರ ತನ್ನ ನಿಷ್ಪಕ್ಷಪಾತ ನಿಲುವಿನಿಂದ ಹಿಂದೆ ಸರಿಯುವುದೆಂಬ ಆತಂಕ ಮೂಡಿಸಿರುವ ಈ ಸಂದರ್ಭದಲ್ಲಿ ನಾಡಿನ ಕನ್ನಡ ಪರ ಸಂಘಟನೆಗಳು ಅಕ್ಟೋಬರ್ ೪ರಂದು ಕರೆ ನೀಡಿದ್ದ ಕರ್ನಾಟಕ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಚನ್ನಪಟ್ಟಣ, ಕೋಲಾರ, ತುಮಕೂರು, ಬಳ್ಳಾರಿ, ಹಾವೇರಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಎಲ್ಲೆಡೆ ರೈಲು ತಡೆ ಚಳವಳಿ ಮತ್ತು ಜಾಗೃತಿ ಜಾಥಗಳನ್ನು ನಡೆಸಿತು. ರಾಜ್ಯದ ಹೆಚ್ಚಿನ ಸ್ಥಳಗಳಲ್ಲಿ ಬಂದ್ ಯಶಸ್ವಿಯಾಗಲು ಕರ್ನಾಟಕ ರಕ್ಷಣಾ ವೇದಿಕೆಯೊಂದೇ ಕಾರಣವಾಯಿತು. ಬೆಳಗಾವಿಯಲ್ಲಿ ಸಾವಿರಾರು ಸಂಖ್ಯೆಯ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಜೀವ್ ತೋಪಣ್ಣವರ್ ಅವರ ನೇತೃತ್ವದಲ್ಲಿ ನಡೆಸಿದ ಅಭೂತಪೂರ್ವ ಜಾಥ ಕನ್ನಡಿಗರ ಪೌರುಷಕ್ಕೆ ಎಂ.ಇ.ಎಸ್. ಎಸೆದ ಸವಾಲಿಗೆ ದಿಟ್ಟ ಉತ್ತರವಾಗಿತ್ತು. ಪುಂಡು ಮರಾಠಿಗರ ಕಲ್ಲು ತೂರಾಟಕ್ಕೆ, ಪೊಲೀಸರ ಬೆತ್ತದ ಏಟಿಗೆ ಬಗ್ಗದ ಕಾರ್ಯಕರ್ತರು ಕನ್ನಡದ ಬಾವುಟಗಳನ್ನು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಬೆಳಗಾವಿಯಲ್ಲಿ ಕನ್ನಡದ ಸಾರ್ವಭೌಮತ್ವ ಸಾರಿದರು. ಬಹುಶಃ ಎಂ.ಇ.ಎಸ್. ನ ಮಂದಿ ಕನಸಿನಲ್ಲೂ ನೆನೆಸಿರದ ಪ್ರತಿರೋಧವನ್ನು ಅಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಒಡ್ಡುವ ಮೂಲಕ ಕನ್ನಡಿಗರ ಸ್ವಾಭಿಮಾನ ಜಾಗೃತಿಗೊಳಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಕನ್ನಡಿಗರು ಸಂಘಟಿತರಾದರೆ ನಾವು ಮತ್ತಷ್ಟು ಸಾಧಿಸಬಹುದು. ಕನ್ನಡದ ಗಡಿ ಕಾಯುವುದರ ಜೊತೆಯಲ್ಲಿ ನುಡಿ ಕಾಯಬಹುದು. ಸಮೃದ್ಧವಾದ ಸ್ವಾಭಿಮಾನದ ಗೂಡಾದ ಹೆಮ್ಮೆಯ ಕನ್ನಡ ನಾಡು ಕಟ್ಟುವ ಕೈಂಕರ್ಯದಲ್ಲೂ ಯಶ ಸಾಧಿಸಬಹುದು. |