Karnataka Rashana Vedike
Kuvempu
ico_adhyaksharalEkhaniyinda3.jpg
blog.jpg
Sangatane.jpg

ಕನ್ನಡ ವಿರೋಧಿ ಎಫ್.ಎಂ. ವಾಹಿನಿಗಳಿಗೆ ಬಿಸಿ ಮುಟ್ಟಿಸಿದ್ದು

ಕ.ರ.ವೇ ಹೋರಾಟಗಳು

ತಂತ್ರಜ್ಞಾನದ ಹೊಸ ಹೊಸ ಅವಿಷ್ಕಾರಗಳು ನಮ್ಮ ಬದುಕಿನಲ್ಲಿ ಹೊಸ ಹೊಸ ಬೆಳವಣಿಗೆಗೆ, ಬದಲಾವಣೆಗಳಿಗೆ ಕಾರಣವಾಗುತ್ತಿವೆ. ದೂರದರ್ಶನದ ದಾಂಗುಡಿಯಲ್ಲಿ ಮರೆಯಾಗಿದ್ದ ರೇಡಿಯೋಗಳಿಗೆ ಹೊಸ ಉಸಿರು ತಂದುಕೊಟ್ಟದ್ದು ಎಫ್.ಎಂ ವಾಹಿನಿಗಳು. ಕೇಂದ್ರ ಸರ್ಕಾರ ಖಾಸಗಿಯವರಿಗೂ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದೊಂದು ಕ್ರಾಂತಿಕಾರಿ ಬೆಳವಣಿಗೆ. ಈ ದಿಸೆಯಲ್ಲೇ ಬೆಂಗಳೂರಿನಲ್ಲಿ ಹಲವಾರು ಎಫ್.ಎಮ್‌ಗಳು ಕಾರ್ಯಾರಂಭ ಮಾಡಲಿವೆ ಎನ್ನುವ ಸುದ್ದಿ, ಕನ್ನಡಿಗರಲ್ಲಿ ಹುಮ್ಮಸ್ಸು ತಂದರೆ, ಕನ್ನಡ ಚಿತ್ರೋದ್ಯಮ ಹಾಗೂ ಆಡಿಯೋ ಕ್ಷೇತ್ರಗಳು ಪುನಶ್ಚೇತನದ ನಿರೀಕ್ಷೆಯಿಂದ ಬೀಗಿದವು.

ಮೊದಲಿಗೆ ರೇಡಿಯೋ ಸಿಟಿ ಕಾರ್ಯಾರಂಭ ಮಾಡಿತು. ಇದು ಕನ್ನಡದ ಸಂಗೀತಕ್ಕೆ ತೀವ್ರವಾದ ಅಸಡ್ಡೆ ತೋರಿಸಿತು. ತನ್ನ ಕಾರ್ಯಕ್ರಮಗಳಲ್ಲಿ ಶೇಕಡಾ ೧೦ಕ್ಕೂ ಕಡಿಮೆ ಪ್ರಮಾಣದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹಾಕತೊಡಗಿತು. ಇದರಿಂದ ಭ್ರಮನಿರಸನಗೊಂಡ ಕೇಳುಗ ತನ್ನ ಬೇಡಿಕೆಯನ್ನು ಸಲ್ಲಿಸಿದರೆ, ಅದರೆಡೆಗೆ ತುಂಬು ನಿರ್ಲಕ್ಷ್ಯ ತೋರಿತು ರೇಡಿಯೋ ಸಿಟಿ.

ಕಳೆದ ಏಪ್ರಿಲ್ ನಂತರ ಬೆಂಗಳೂರಿಗೆ ಮತ್ತಷ್ಟು ವಾಹಿನಿಗಳು ಬರಲಿವೆ ಎಂಬ ಸುದ್ದಿ ಸಂತೋಷವನ್ನೂ ಆತಂಕವನ್ನೂ ಕನ್ನಡಿಗರಲ್ಲಿ ಹುಟ್ಟುಹಾಕಿದವು. ಇದೇ ಸಮಯಕ್ಕೆ ಆರಂಭವಾದ ರೇಡಿಯೋ ಮಿರ್ಚಿ ಕನ್ನಡಿಗರ ನೋವಿನ ಮೇಲೆ ಮತ್ತೆ ಬರೆ ಎಳೆಯಿತು. ಇದರಲ್ಲಿ 'ನಿಮ್ಮ ಇಷ್ಟದ ಹಿಂದಿ ಹಾಡುಗಳಿಗಾಗಿ ಕನ್ನಡದಲ್ಲಿಯೇ ಬೇಡಿಕೆ ಸಲ್ಲಿಸಬಹುದು' ಎನ್ನುವ ಔದಾರ್ಯ ತೋರಲಾಯಿತು. ಈ ವಾಹಿನಿಯ ನಿರೂಪಕರಿಂದ ಸಾರ್ವತ್ರಿಕವಾಗಿ ಕನ್ನಡ ಭಾಷೆ ಕೀಳು ಎನ್ನುವಂತಹ ನಿರೂಪಣೆ ಆರಂಭವಾಯಿತು. ಸ್ಲೀವ್ ಲೆಸ್ ಸರಸ ಎನ್ನುವ ಕಾರ್ಯಕ್ರಮ ಶೀರ್ಷಿಕೆಯ ಉದಾಹರಣೆ ಇದಕ್ಕೆ ಸಾಕು.

ಆರಂಭವಾದ ಎರಡು ಖಾಸಗಿ ಎಫ್.ಎಂ ಗಳಲ್ಲಿ ಹೀಗೆ ಕನ್ನಡದ ಅವಗಣನೆಯಾಗುತ್ತಿರುವ ಆತಂಕ ಕನ್ನಡಿಗನಲ್ಲಿ ಮನೆ ಮಾಡಿರುವಾಗಲೇ ಸರ್ಕಾರಿ ಸ್ವಾಮ್ಯದ ಆಕಾಶವಾಣಿಯ ಎಫ್.ಎಂ ನಲ್ಲಿ ಪರಭಾಷಾ ಕಾರ್ಯಕ್ರಮಗಳ ಪಾಲು ಹೆಚ್ಚತೊಡಗಿತು. ತನ್ನ ಕಾರ್ಯಕ್ರಮಗಳಿಗೆ ಚಲ್ತೆ ಚಲ್ತೆ ಎನ್ನುವಂತಹ ಪರಭಾಷಿಕ ಹೆಸರುಗಳನ್ನು ಇಡುವ ಮೂಲಕ ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು, ಬೆಂಗಳೂರು ಕನ್ನಡಿಗರದ್ದಲ್ಲ ಎನ್ನುವಂತಹ ಅಭಿಪ್ರಾಯಗಳನ್ನು ಸಾರ್ವತ್ರಿಕಗೊಳಿಸುವ ಯತ್ನಗಳು ನಡೆದವು.

ಕೆಲವೇ ದಿನಗಳಲ್ಲಿ ಮತ್ತಷ್ಟು ಎಫ್.ಎಂ ಗಳು ಪ್ರಾರಂಭವಾಗಲಿವೆ ಎನ್ನುವ ಸುದ್ದಿ ಕೇಳಿ ಈಗ ಕನ್ನಡಿಗ ಬೆಚ್ಚಿ ಬೀಳುವಂತಾಯಿತು. ಈ ಸನ್ನಿವೇಶದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಂಗ ಪ್ರವೇಶ ಮಾಡುವುದು ಅನಿವಾರ್ಯವಾಯಿತು.

radiomirchi1.JPG
ಮೇ ತಿಂಗಳ ೧೩ರಂದು ರೇಡಿಯೋ ಸಿಟಿಯ ಕಛೇರಿಗೆ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣ ಗೌಡರ ನೇತೃತ್ವದಲ್ಲಿ ನಿಯೋಗವೊಂದು ತೆರಳಿತು. ಆ ಸಂಸ್ಥೆಯ ಅಧಿಕಾರಿಗಳಿಗೆ ಸ್ಪಷ್ಟವಾದ ಸಂದೇಶ ನೀಡಲಾಯಿತು. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವುದಾದರೆ ಕನ್ನಡ ಕಾರ್ಯಕ್ರಮಗಳಾನ್ನು ಪ್ರಸಾರ ಮಾಡಿ, ಇಲ್ಲವೇ ಇಲ್ಲಿಂದ ತೊಲಗಿ ಎನ್ನಲಾಯಿತು. ಆ ಸಮಯದಲ್ಲಿ ಒಂದು ತಿಂಗಳ ಗಡುವನ್ನು ರೇಡಿಯೋ ಸಿಟಿ ಕೇಳಿತು. ರೇಡಿಯೋ ಮಿರ್ಚಿಯ ಕಛೇರಿಗೆ ಜುಲೈ ತಿಂಗಳ ೭ರಂದು ಭೇಟಿ ನೀಡಲಾಯಿತು. ಅಂದು ರೇಡಿಯೋ ಮಿರ್ಚಿಯ ಕಛೇರಿಯ ಮುಂದೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೇಡಿಯೋ ಮಿರ್ಚಿ ಸಂಸ್ಥೆಯವರೂ ಕೂಡ ಭರವಸೆ ನೀಡಿದರು.
ರೇಡಿಯೋ ಸಿಟಿ ತನ್ನ ಭರವಸೆಯನ್ನು ಬಹುಶಃ ಮರೆಯಿತೇನೋ . . ಆದರೆ ರಕ್ಷಣಾ ವೇದಿಕೆ ಮರೆಯಲಿಲ್ಲ. ಗರುಡಾಮಾಲ್ ಸಂಕೀರ್ಣದಲ್ಲಿ ಜುಲೈ ೩ರಂದು ಸಂಜೆ ತನ್ನ ಐದನೇ ವಾರ್ಷಿಕೋತ್ಸವದ ಸಮಾರಂಭವನ್ನು ರೇಡಿಯೋ ಸಿಟಿ ಹಮ್ಮಿಕೊಂಡಿತ್ತು. ಇಡೀ ಕಾರ್ಯಕ್ರಮದಲ್ಲಿ ಒಂದು ಕನ್ನಡ ಪದ ಕೇಳಲಿಲ್ಲ. ಒಂದು ಕನ್ನಡ ಹಾಡು ಕೇಳಲಿಲ್ಲ. ಇಡೀ ಸಮಾರಂಭವನ್ನು ಹಿಂದಿ ಹಾಡುಗಳಿಗೆ, ಇಂಗ್ಲಿಷ್ ಮಾತುಗಳಿಗೆ ಅರ್ಪಣೆ ಮಾಡಿದಂತಿತ್ತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಾಡಿನ ಭಾಷೆ ಬಳಸಬೇಕೆನ್ನುವ ನಾಗರೀಕತೆ ಇಲ್ಲದ ರೇಡಿಯೋ ಸಿಟಿಯ ಕಾರ್ಯಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆಯ ಮೂಲಕ ಅರ್ಧಕ್ಕೆ ಮಂಗಳ ಹಾಡಿದರು.

ಪರಭಾಷಾ ಹಾಡುಗಳ ಪ್ರಸಾರಕ್ಕೆ ತಾನೂ ಕಂಕಣ ಕಟ್ಟಿಕೊಂಡಿದ್ದ ಆಕಾಶವಾಣಿಯ ಎದುರು ಸೆಪ್ಟೆಂಬರ್ ೧೪ರಂದು ಉಗ್ರ ಪ್ರತಿಭಟನೆ ನಡೆಯಿತು. ಕನ್ನಡದ ನೆಲದಲ್ಲಿ ಕನ್ನಡ ವಿರೋಧಿಯಾದ, ಕನ್ನಡಕ್ಕೆ ಮಾರಕವಾದ ಯಾವ ಸಂಸ್ಥೆಗೂ ವಿನಾಯಿತಿ ನೀಡುವ ಪರಿಪಾಠವಿಲ್ಲವೆಂಬುದನ್ನು ವೇದಿಕೆ ಸಾರಿತು.

ಲಹರಿ ಸಂಸ್ಥೆಯ ವೇಲು ಅವರು ಕರ್ನಾಟಕ ರಕ್ಷಣಾ ವೇದಿಕೆ ಎಫ್.ಎಂ ವಿಷಯವಾಗಿ ಕನ್ನಡಿಗರಲ್ಲಿ, ವಿಶೇಷವಾಗಿ ತಮ್ಮಲ್ಲಿ ಜಾಗೃತಿ ಮೂಡಿಸಿದೆಯೆಂದು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಇದಾದ ನಂತರ ಮಿಡ್ ಡೇ ಸಂಸ್ಥೆಯ ರೇಡಿಯೋ ಒನ್ ಕಾರ್ಯಾರಂಭ ಮಾಡಿತು. ಇದರಲ್ಲಿ ಪ್ರಾರಂಭದಲ್ಲಿ ಸರಿಸುಮಾರು ೨೫% ಪ್ರತಿಶತ ಕನ್ನಡ ಹಾಡುಗಳ ಪ್ರಸಾರ ಆರಂಭವಾಯಿತು. ದಿನ ಕಳೆದಂತೆ ಈ ಪ್ರಮಾಣ ಹೆಚ್ಚಾಗುತ್ತಲಿದ್ದು ಈಗ ಶೇ.೪೫%ರಷ್ಟಾಗಿದೆ. ರಿಲಯನ್ಸ್ ಸಂಸ್ಥೆ, ಬಿಗ್ ಎಫ್.ಎಂ ಪ್ರಾರಂಭವಾಯಿತು ಮತ್ತು ಇದರಲ್ಲಿ ಕನ್ನಡಕ್ಕೆ ಶೇ. ೮೫ರಷ್ಟು ಸ್ಥಾನ ದೊರೆಯಿತು. ಸನ್ ನೆಟ್‌ವರ್ಕ್‌ನ ಎಸ್.ಎಫ್.ಎಮ್ ಎನ್ನುವ ಖಾಸಗಿ ವಾಹಿನಿ ಆರಂಭವಾಗುತ್ತಲೇ ತನ್ನದು ೨೪ ತಾಸುಗಳ ಕನ್ನಡ ವಾಹಿನಿ ಎಂದು ಘೋಷಿಸಿಕೊಂಡಿತು.

ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವಲ್ಲಿ, ಖಾಸಗಿ ವಾಹಿನಿಗಳಲ್ಲಿ ಕನ್ನಡದ ಪ್ರಸಾರದ ಪ್ರಮಾಣ ಗಣನೀಯವಾಗಿ ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಈ ಹೋರಾಟದಿಂದ ಆದ ಪರಿಣಾಮಗಳೇನು? ಮೊದಲಿಗೆ, ಬೆಂಗಳೂರಿನಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಬೇಡಿಕೆಯಿಲ್ಲ ಎಂದು ಘೋಷಿಸಿಕೊಂಡು ಬರುತ್ತಿದ್ದ ಜನಕ್ಕೆ ಬಹುಶಃ ಬೆಂಗಳೂರಿನಲ್ಲಿ ಕನ್ನಡ ವಾಹಿನಿಗಳು ಯಶಸ್ವಿಯಾಗುತ್ತಿರುವುದು ಕಾಣಲಾರಂಭಿಸಿದೆ. ಇದನ್ನು ನಾವು ರೇಡಿಯೋ ಒನ್ ಕಾರ್ಯಕ್ರಮಗಳಲ್ಲಿ ಗುರುತಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯವಾಗಿ ಬಲವಂತದ ಪ್ರಸಾರದ ಕಾರಣ ಕೇಳಿ ಬರುತ್ತಿದ್ದ ಹಿಂದಿ ಹಾಡುಗಳ ಜಾಗದಲ್ಲಿ ಕನ್ನಡದ ಗೀತೆಗಳು ಮೊಳಗುತ್ತಿವೆ. ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ವಾಹಿನಿಗಳನ್ನೇ ಹಾಕಿ ಎಂದು ಕನ್ನಡಿಗರು ಒತ್ತಾಯ ಮಾಡಲು ಆಯ್ಕೆಯ ಅವಕಾಶಗಳಿವೆ. ಕನ್ನಡಿಗನಲ್ಲಿ ಎಫ್.ಎಂ ಎಂದ ಕೂಡಲೆ ಅದರಲ್ಲಿ ಕನ್ನಡ ಕಾರ್ಯಕ್ರಮವೆಷ್ಟು ಪ್ರಸಾರವಾಗುತ್ತಿದೆ ಎಂದು ಪರೀಕ್ಷೆಮಾಡುವಷ್ಟು ಜಾಗೃತಿ ಉಂಟಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರು ವಲಸಿಗರದ್ದಲ್ಲ, ಕನ್ನಡಿಗರದ್ದು ಎನ್ನುವ ಮನವರಿಕೆ ಪರಭಾಷಿಕರಿಗೆ ಬಹಳಷ್ಟು ಮಟ್ಟಿಗೆ ಉಂಟಾಗಿದೆ.
ಮುಂದಿನ ದಿನಗಳಲ್ಲಿ ಇನ್ನೂ ಮೊಂಡು ಹಿಡಿದು ಕುಳಿತಿರುವ ರೇಡಿಯೋ ಸಿಟಿ ಹಾಗೂ ರೇಡಿಯೋ ಮಿರ್ಚಿಗಳಲ್ಲೂ ಪರಿವರ್ತನೆಯನ್ನು ತರಬೇಕಾದ ಹೊಣೆಗಾರಿಕೆ ಎಲ್ಲ ಕನ್ನಡಿಗರದ್ದು. ಈ ದಿಸೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ . . . ಗುರಿ ಸಾಧಿಸುವ ತನಕ ವಿರಮಿಸದು.

 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ