ಭಾರತ ಆಂಗ್ಲರಿಂದ ಬಿಡುಗಡೆಗೊಂಡ ದಿನದಿಂದಲೂ ಕನ್ನಡಿಗರ ಮೇಲೆ ಹೊಸ ರೀತಿಯ ದಬ್ಬಾಳಿಕೆ ಹಿಂದಿಯ ರೂಪದಲ್ಲಿ ಪ್ರಾರಂಭವಾಯಿತು. ಈ ಹೇರಿಕೆ ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿಸುವ ವಿಫಲ ಯತ್ನದ ನಡುವೆಯೂ ಹೊಸ ಹೊಸ ರೂಪದಲ್ಲಿ ಸಿಹಿ ಲೇಪನದೊಂದಿಗೆ ಚಾಲ್ತಿಯಲ್ಲಿದೆ. ಹಿಂದಿಯನ್ನು ದೇಶಭಕ್ತಿಯ ಜೊತೆಯಲ್ಲಿ ತಳುಕು ಹಾಕುತ್ತಾ ಹಿಂದಿ ಹೇರಿಕೆಯ ವಿರೋಧ ರಾಷ್ಟ್ರದ್ರೋಹದ, ಪ್ರತ್ಯೇಕತಾವಾದದ ಪ್ರಯತ್ನವೆಂಬುದಾಗಿ ಬಿಂಬಿಸಲಾಗುತ್ತಿದೆ. ಕನ್ನಡದ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಪಠ್ಯಪುಸ್ತಕಗಳ ಮೂಲಕ, ಹಿಂದಿಯನ್ನು ರಾಷ್ಟ್ರಭಾಷೆಯೆಂಬುದಾಗಿ ಬೋಧಿಸುತ್ತಾ ನಿರಂತರವಾಗಿ, ವ್ಯವಸ್ಥಿತವಾಗಿ ಹಿಂದಿಯ ಗುಲಾಮಗಿರಿಗೆ ನಾಳಿನ ಕನ್ನಡಿಗ ಜನಾಂಗದ ಮನಸನ್ನು ಸಿದ್ಧಪಡಿಸಲಾಗುತ್ತಿದೆ. ತಿಳಿದೋ ತಿಳಿಯದೆಯೋ ಕನ್ನಡ ನಾಡಿನ ಸರ್ಕಾರಗಳು ಇದಕ್ಕೆ ಪೂರಕವಾಗಿ ತ್ರಿಭಾಷಾ ಸೂತ್ರದ ಶೂಲಕ್ಕೆ ನಮ್ಮ ಮಕ್ಕಳನ್ನು ದೂಡುತ್ತಿವೆ. ಕೇಂದ್ರ ಸರ್ಕಾರ ಹಿಂದಿ ಪ್ರಚಾರಕ್ಕಾಗಿ ಹೆಚ್ಚಿನ ಸಂಪನ್ಮೂಲವನ್ನು ಮೀಸಲಾಗಿಡುತ್ತಾ, ಉಳಿದ ಭಾಷೆಗಳ ಬಗ್ಗೆ ಸ್ಪಷ್ಟವಾದ ನಿರ್ಲಕ್ಷ್ಯ ತೋರುತ್ತಿದೆ. ಹಿಂದಿ ಹೇರಿಕೆಗೆ ಕಾನೂನುಗಳನ್ನು ರೂಪಿಸುತ್ತಾ ಬಂದಿದೆ. ಇದಕ್ಕೆ ಕಲಶವಿಟ್ಟಂತೆ ಹಿಂದಿಭಾಷಿಕರು ಕನ್ನಡ ನಾಡಿಗೆ ವಲಸೆ ಬಂದು ಮನೋರಂಜನಾ ಮಾಧ್ಯಮಗಳ ಮೂಲಕ ಮತ್ತು ಕನ್ನಡ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯದೇ ಇರುವ ಮೂಲಕ ಹಿಂದಿ ಹೇರಿಕೆಯನ್ನು ಮತ್ತಷ್ಟು ತೀವ್ರಗೊಳಿಸಲು ಕಾರಣವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯು ಕನ್ನಡದ ಸಾರ್ವಭೌಮತ್ವಕ್ಕೆ ತೀವ್ರವಾದ ಹಾನಿ ಮಾಡುವುದಲ್ಲದೆ, ನಾಡ ಸಂಸ್ಕೃತಿ, ಪರಂಪರೆ ಅಷ್ಟೇ ಏಕೆ . . . ಇಡೀ ಕನ್ನಡ ಕುಲದ ಅಸ್ತಿತ್ವಕ್ಕೇ ಮಾರಕವಾಗಲಿದೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ರಕ್ಷಣೆ ಮತ್ತು ಏಳಿಗೆಗೆ ಕಟಿಬದ್ಧವಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯು ಈ ದಿಸೆಯಲ್ಲಿ ಕನ್ನಡ ಕುಲವನ್ನು ಎಚ್ಚರಗೊಳಿಸಲು, ಬರಲಿರುವ ವಿಪತ್ತನ್ನು ಎದುರಿಸಲು ಕನ್ನಡಿಗನನ್ನು ಸಿದ್ಧಗೊಳಿಸಲು, ಕನ್ನಡಿಗನ ಮೇಲಿನ ಹಿಂದಿ ಹೇರಿಕೆಯನ್ನು ನಿಲ್ಲಿಸಲು . . . ಹೋರಾಟ ಆರಂಭಿಸಿದೆ. ಪ್ರತಿ ವರ್ಷ ಸೆಪ್ಟೆಂಬರ್ ೧೪ರಂದು ದೇಶದ ಎಲ್ಲೆಡೆ ಹಿಂದಿ ದಿವಸವನ್ನು ಆಚರಿಸಲಾಗುತ್ತದೆ. ಆ ತಿಂಗಳಲ್ಲಿ ಹಿಂದಿ ಸಪ್ತಾಹ, ಹಿಂದಿ ಪಕ್ಷಗಳನ್ನೂ ಸರ್ಕಾರಿ ಪ್ರಾಯೋಜಕತ್ವದೊಂದಿಗೆ ಆಚರಿಸಲಾಗುತ್ತದೆ. ಕರ್ನಾಟಕ ರಕ್ಷಣಾ ವೇದಿಕೆಯು ಸೆಪ್ಟೆಂಬರ್ ೧೪ನ್ನು ಹಿಂದಿ ಹೇರಿಕೆ ವಿರೋಧಿ ದಿನವನ್ನಾಗಿ ಈ ವರ್ಷದಿಂದ ಆಚರಿಸತೊಡಗಿದೆ. ಈ ಬಾರಿ ಸೆಪ್ಟೆಂಬರ್ ೧೦ರಂದು ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಹಿಂದಿ ಹೇರಿಕೆ ಬಗ್ಗೆ ವಿಚಾರ ಸಂಕಿರಣವೊಂದನ್ನು ಏರ್ಪಡಿಸಲಾಗಿತ್ತು. ಅಂದು ನಾಡಿನ ಹಿರಿಯ ಕನ್ನಡ ಪರ ಚಿಂತಕರಾದ ಶ್ರೀ ರಾಜಕುಮಾರ್ ಮತ್ತು ಡಾ.ಅಶೋಕ್ ದೊಡ್ಡಮೇಟಿಯವರಿಂದ ಈ ಬಗ್ಗೆ ಅನೇಕ ವಿಚಾರಗಳು ಮಂಡಿಸಲ್ಪಟ್ಟವು. ಭಾರತದ ಒಕ್ಕೂಟ ವ್ಯವಸ್ಥೆ, ಇಲ್ಲಿ ಭಾಷಾವಾರು ಪ್ರಾಂತ್ಯಗಳ ಅನಿವಾರ್ಯತೆ, ಸಂವಿಧಾನದ ದೃಷ್ಟಿಯಲ್ಲಿ ಭಾರತೀಯ ಭಾಷೆಗಳು, ಹಿಂದಿಯ ಸಾರ್ವಭೌಮತ್ವ ಸ್ಥಾಪನೆಯ ಪ್ರಯತ್ನಗಳು, ಹಿಂದಿ ಹೇರಿಕೆಯ ನಾನಾ ರೂಪಗಳು, ಹಿಂದಿ ಹೇರಿಕೆಯಿಂದ ಆಗಬಹುದಾದ ಅನಾಹುತಗಳು . . . ಇವೆಲ್ಲದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಅಂದು ಅಲ್ಲಿ ಮನವರಿಕೆ ಮಾಡಿಕೊಡಲಾಯಿತು. ಸೆಪ್ಟೆಂಬರ್ ೧೪ರ ಬೆಳಿಗ್ಗೆಯಿಂದಲೇ ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೇಂದ್ರ ಸರ್ಕಾರದ ಕಛೇರಿಗಳ ಮುಂದೆ ಪ್ರತಿಭಟನೆಯಲ್ಲಿ ತೊಡಗಿದರು. ಬೆಂಗಳೂರಿನ ಕೇಂದ್ರಿಯ ಸದನದ ಮುಂದೆ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ.ನಾರಾಯಣಗೌಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಅಲ್ಲಿನ ಆಡಳಿತ ಮುಖ್ಯಸ್ಥರು ಕೇಂದ್ರೀಯ ಸದನದ ಕಚೇರಿಗಳಲ್ಲಿ ಕನ್ನಡದ ಅನುಷ್ಠಾನದ ಭರವಸೆ ನೀಡಿದರು. ಅಂದು ಸರ್ಕಾರಿ ಸಾಮ್ಯದ ಆಕಾಶವಾಣಿ, ತನ್ನ ಕಾರ್ಯಕ್ರಮಗಳನ್ನು ಹಿಂದಿಯ ಪ್ರಚಾರಕ್ಕೇ ಮೀಸಲಾಗಿಟ್ಟಿತ್ತು. ಬೆಳಗ್ಗೆಯಿಂದಲೂ ಹಿಂದಿ ರಾಷ್ಟ್ರಭಾಷೆ, ಹಿಂದಿ ಕಲಿಯಿರಿ ಎನ್ನುವ ಸಂದೇಶವನ್ನು ಪ್ರಸಾರ ಮಾಡತೊಡಗಿತ್ತು. ಮಧ್ಯಾಹ್ನದ ವೇಳೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಕಟ್ಟಾಳುಗಳು ಆಕಾಶವಾಣಿಯ ಮುಂದೆ ಪ್ರತಿಭಟನೆ ಆರಂಭಿಸಿದರು. ಆಕಾಶವಾಣಿಯ ಕೆಲ ಸಿಬ್ಬಂದಿಗಳು ಇವರೊಂದಿಗೆ ಅನುಚಿತವಾಗಿ ವರ್ತಿಸಿ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತನ್ನಾಡಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಆಕಾಶವಾಣಿಯ ಒಳ ಆವರಣ ಪ್ರವೇಶಿಸಿ ಅಲ್ಲಿನ ಕೆಲ ಸಲಕರಣೆಗಳನ್ನು ಧ್ವಂಸಗೊಳಿಸಿದರು. ಕನ್ನಡ ಹೋರಾಟಗಾರರನ್ನು ಸದೆಬಡಿಯುವ ಏಕೈಕ ಕಾರ್ಯಕ್ರಮ ಹೊಂದಿರುವ ಆ ವ್ಯಾಪ್ತಿಯ ಆರಕ್ಷಕ ಅಧಿಕಾರಿ ಇದೇ ಸಮಯ ಸಾಧಿಸಿ ಪ್ರತಿಭಟನಾಕಾರರಲ್ಲಿ ಹದಿನೆಂಟು ಜನರನ್ನು ಬಂಧಿಸಿದರು. ಕನ್ನಡ ಪರ ಹೋರಾಟದಲ್ಲಿ ಸೆರೆವಾಸ ಮತ್ತು ಬೂಟಿನೇಟು ಸಾಮಾನ್ಯವೇ ಎಂದು ಎದೆಯುಬ್ಬಿಸಿ ಬಂಧನಕ್ಕೆ ಒಳಗಾದ ಆ ಕನ್ನಡವೀರರು ಶ್ರೀಯುತರುಗಳಾದ ದಾ.ಕೃ. ದೇವರಾಜ್, ದಾ.ಪಿ.ಆಂಜನಪ್ಪ, ಬಸವರಾಜ್ ಪಡುಕೋಟಿ, ವೀರೇಶ್ ಹಂಚಿನಾಳ, ಹರೀಶ, ಲಕ್ಷ್ಮೀಪತಿ, ವಿನಯ ಕುಮಾರ್, ಸುರೇಂದ್ರ, ವಿಜಯಕುಮಾರ್, ಶಾಂತಕುಮಾರ್, ಶಿವಕುಮಾರ್, ನರೇಂದ್ರ್ ಬಾಬು, ಆನಂದ್, ಹರೀಶ್ ಕುಮಾರ್, ಗಣೇಶ, ಪ್ರಕಾಶ, ಅಶೋಕ್ ಕುಮಾರ್ ಮತ್ತು ನಾಗರಾಜ್. ಕುತ್ಸಿತ ಬುದ್ಧಿಯ ಆ ಅಧಿಕಾರಿ ಅವರನ್ನೆಲ್ಲಾ ಪ್ರತಿಭಟನೆಯ ಕಾರಣ ಬಂಧಿಸಿದ್ದರೂ ಡಕಾಯಿತಿ ನಡೆಸಿದರು ಎಂದು ಸುಳ್ಳು ಮೊಕದ್ದಮೆ ಹೂಡಿದರು. ಡಕಾಯಿತಿ ಮೊಕದ್ದಮೆ ನ್ಯಾಯಾಲಯದ ದೃಷ್ಟಿಯಲ್ಲಿ ತೀವ್ರ ಸ್ವರೂಪದ ಅಪರಾಧವಾದ್ದರಿಂದ ಈ ಹೋರಾಟಗಾರರೆಲ್ಲರನ್ನೂ ಅನಿರ್ದಿಷ್ಟ ಅವಧಿಯ ಸೆರೆವಾಸಕ್ಕೆ ದೂಡಲಾಯಿತು.  ಹದಿನೈದು ದಿನಗಳ ಸೆರೆವಾಸದ ನಂತರ ಬಹುದೊಡ್ಡ ಮೊತ್ತದ ಅಡಮಾನದೊಂದಿಗೆ ಶರತ್ತುಬದ್ಧ ಜಾಮೀನು ದೊರೆತು ಈ ಹೆಮ್ಮೆಯ ಕನ್ನಡ ಪುತ್ರರು ಬಿಡುಗಡೆಯಾದರು. ಆದರೆ ಈ ಹದಿನೈದು ದಿನಗಳಲ್ಲಿ ಅನುಭವಿಸಿದ ಸೆರೆವಾಸದ ಶಿಕ್ಷೆ, ಅವರ ಬಂಧುಗಳು ಅನುಭವಿಸಿದ ಮಾನಸಿಕ ಯಾತನೆಗಳು ನಿಜಕ್ಕೂ ವರ್ಣಿಸಲಸದಳ. ಕನ್ನಡ ಪರವಾದ ಧ್ವನಿ ಇಂತಹ ಸುಳ್ಳು ಮೊಕದ್ದಮೆಗಳ ಅಲೆಗಳನ್ನು ಹೆಬ್ಬಂಡೆಯಂತೆ ತಡೆಗಟ್ಟುವುದು ನಿಶ್ಚಿತ. ಕರ್ನಾಟಕ ರಕ್ಷಣಾ ವೇದಿಕೆ ಇಂತಹ ಅಗ್ಗದ ತಂತ್ರಗಳಿಗೆ ಹಿಂದೆಯೂ ತಲೆಬಾಗಿಲ್ಲ. ಮುಂದೆಯೂ ಬಾಗದು. ಇಂತಹ ಸುಳ್ಳು ಮೊಕದ್ದಮೆಗಳನ್ನು ಹೂಡಿದಾಗೆಲ್ಲಾ ನಮ್ಮ ಬದ್ಧತೆ ಮತ್ತಷ್ಟು ಗಟ್ಟಿಯಾಗುತ್ತಲೇ ಇರುತ್ತದೆ. ಕನ್ನಡಕ್ಕೆ ಕೈ ಎತ್ತು: ನಿನ್ನ ಕೈ ಕಲ್ಪವೃಕ್ಷವಾಗುತ್ತದೆ . . . . ಕನ್ನಡಕ್ಕೆ ಕೊರಳೆತ್ತು: ನಿನ್ನ ಕಂಠ ಪಾಂಚಜನ್ಯವಾಗುತ್ತದೆ. . . ಎಂಬ ಕವಿನುಡಿ ನಮಗೆ ಪ್ರೇರಣೆಯಾದರೆ, ಭಾರತ ಜನನಿಯ ತನುಜಾತೆ, ಈ ನಮ್ಮ ಕರ್ನಾಟಕ ಮಾತೆ ಎಂಬುದು ನಮ್ಮ ನಂಬಿಕೆಯಾಗಿದೆ. ಕನ್ನಡ ನಾಡಿನ ಬಗ್ಗೆ ನಾವು ಹೊಂದಿರುವ ಈ ಪ್ರೇಮ, ಭಾರತ ಮಾತೆಯ ಏಳಿಗೆಗೆ ಪೂರಕವೇ ಆಗಿದೆ. ಅನೇಕತೆಯಲ್ಲಿ ಏಕತೆ ಎಂಬ ಸಂವಿಧಾನದ ಆಶಯಕ್ಕೆ ಬದ್ಧವೂ ಆಗಿದೆ. ನಾಡಿನ ಎಲ್ಲ ಕನ್ನಡ ಬಾಂಧವರೂ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಪರ ಹೋರಾಟದಲ್ಲಿ ಎಲ್ಲ ರೀತಿಯಿಂದಲೂ ಸಹಯೋಗ ನೀಡುವ ಮೂಲಕ ಕೈಜೋಡಿಸಬೇಕೆಂದು ಈ ಮೂಲಕ ಕೋರುತ್ತೇವೆ. ಹಿಂದಿ ಹೇರಿಕೆಯ ವಿರುದ್ಧ ಇಂದು ನಡೆದ ಪ್ರತಿಭಟನೆ ಆರಂಭ ಮಾತ್ರ. ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವ ಪುನರ್ ಸ್ಥಾಪನೆಯಾಗುವವರೆಗೂ ಇದು ನಿರಂತರ. |