Karnataka Rashana Vedike
Kuvempu
ico_adhyaksharalEkhaniyinda3.jpg
kvrblog.jpg
Sangatane.jpg

ಕಾವೇರಿ ರಥಯಾತ್ರೆ

ಕ.ರ.ವೇ ಹೋರಾಟಗಳು

೧ ನೆ ದಿನ:೨೭-೦೩-೨೦೦೭ ರ ರಥಯಾತ್ರೆ ವರದಿ

ಕ.ರ.ವೇ ಯ ಕೆಚ್ಚೆದೆಯ ಹೋರಾಟಗಾರರು ಇಂದು ಬೆಳಗ್ಗೆ ತಲಕಾವೇರಿಯಿಂದ ಕಾವೇರಿ ರಥಯಾತ್ರೆಯನ್ನು ರಾಜ್ಯಾಧ್ಯಕ್ಷ ರಾದ ಶ್ರೀ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ಬ್ರಹ್ಮಗಿರಿಯ ತಪ್ಪಲಿನ ತಂಪನೆಯ ವಾತಾವರಣದ ತಲಕಾವೇರಿಯಲ್ಲಿ ಅಗಸ್ಥೇಶ್ವರನಿಗೆ ಮತ್ತು ತಾಯಿ ಕಾವೇರಿಗೆ ಪೂಜೆ ಸಲ್ಲಿಸಿ, ಕ್ರಾಂತಿ ಗೀತೆಗಳನ್ನು ಹಾಡಿದ ನಂತರ ಯಾತ್ರೆಯನ್ನು ಉಧ್ಘಾಟಿಸಿ ಶ್ರೀ ಟಿ.ಎ. ನಾರಾಯಣ ಗೌಡರು " ಈ ಯಾತ್ರೆ ನಾಡಿನ ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಹಾದು ಕನ್ನಡಿಗರನ್ನು ಒಗ್ಗೂಡಿಸಿ ಮುಂದಿನ ಹೋರಾಟಕ್ಕೆ ಅಣಿವುಮಾಡಲಿದೆ. ಮೈಸೂರು, ಮಂಡ್ಯಗಳಲ್ಲಿ ಪ್ರತಿಭಟನಾ ಸಭೆಗಳನ್ನು ನಡೆಸಿ ಈ ಯಾತ್ರೆಯು ಬೆಂಗಳೂರಿನ ಮಲ್ಲೇಶ್ವರದ ಆಟದ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆಯಾಗಿ ಕೊನೆಗೊಳ್ಳಲಿದೆ. ಮೇ ತಿಂಗಳ ೪ನೇ ತಾರೀಖಿನಂದು ದೆಹಲಿಯಲ್ಲಿ ೧ ಲಕ್ಷ ಕನ್ನಡಿಗರ ಅತಿ ದೊಡ್ಡ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಓಕ್ಕೂಟದ ವ್ಯವಸ್ಥೆಯಲ್ಲಿ ಒಂದು ರಾಜ್ಯದ ಪರವಾಗಿ ತಾರತಮ್ಯದ ತೀರ್ಪು ನೀಡುವುದು ನಮ್ಮ ಅಸ್ತಿತ್ವಕ್ಕೆ ಬೆಲೆ ಇಲ್ಲವೆಂಬ ಸಂದೇಶ ಸಾರುವಂತಿದೆ. ಇದು ಕನ್ನಡಿಗರು ಮುಂದಿನ ದಿನಗಳಲ್ಲಿ ಒಕ್ಕೂಟದ ವ್ಯವಸ್ಥೆಯನ್ನು ಧಿಕ್ಕರಿಸುವ ಪರಿಸ್ಥಿತಿ ಗೆ ಕಾರಣವಾದೀತು" ಎಂದು ನುಡಿದರು. ವರ್ಣರಂಜಿತವಾದ ರಥದಲ್ಲಿ ತಾಯಿ ಕಾವೇರಿಯ ಚಿತ್ರ ಕಣ್ಣು ಸೆಳೆಯುವಂತಿದ್ದು ಈ ರಥ ತಾನು ಸಾಗುತ್ತಿರುವ ದಾರಿಯ ಇಕ್ಕೆಲಗಳ ಜನಸ್ತೊಮವನ್ನು ಸೆಳೆಯುತ್ತಿದೆ. ಭಾಗಮಂಡಲ, ಮಡಿಕೇರಿಗಳಲ್ಲಿ ಈ ಯಾತ್ರೆಗೆ ಅಕ್ಕರೆಯ ಸ್ವಾಗತಗಳು, ಹಾರೈಕೆಗಳು ಸಿಕ್ಕಿದವು. ಕುಶಾಲನಗರ, ಪಿರಿಯಾಪಟ್ಟಣಗಳಲ್ಲಿ ಊರಬಾಗಿಲಿಗೆ ನಿಂತ ಕನ್ನಡಿಗರ ಪಡೆ ಕಾವೇರಿ ರಥವನ್ನು ಬರಮಾಡಿಕೊಂಡರು. ಹುಣಸೂರು ಮತ್ತು ಕೃಷ್ಣರಾಜನಗರ ಪ್ರವೇಶಕ್ಕೂ ಮೊದಲೆ ಕಾದುನಿಂತ ಜನಸಾಗರ ಸಾಂಪ್ರದಾಯಿಕ ಡೊಳ್ಳುಕುಣಿತ, ಕಳಶ ಹೊತ್ತ ಮಾತೆಯರ ಮೂಲಕ ಇದಿರುಗೊಂಡರು. ಹೆದ್ದಾರಿಯುದ್ದಕ್ಕೂ ರಥಯಾತ್ರೆಯಲ್ಲಿ ಸಾಲು ಸಾಲು ವಾಹನಗಳು ಸಾಗುತ್ತಿದ್ದು ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ಸಂಜೆ ಮೈಸೂರಿನ ಕೃಷ್ಣರಾಜವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಿತು. ರಾತ್ರಿ ೧೦ ರ ಸರಿ ಸುಮಾರಿಗೆ ಭಾರಿ ಮೆರವಣಿಗೆಯೊಂದಿಗೆ ಮೈಸೂರು ಪ್ರವೇಶಿಸಿತು. ಕಾವೇರಿ ಚಳುವಳಿ ಆರಂಭವಾದಗಲಿಂದ ಧರಣಿ ಸತ್ಯಾಗ್ರಹಗಳಿಗೆ ತಾಣವಾಗಿರುವ ಕೃ. ರಾ. ವೃತ್ತದಲ್ಲಿ ಸರಿರಾತ್ರಿಯಲ್ಲೂ ಸಹ ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ ನಾರಾಯಣಗೌಡರು ಸ್ಪೂರ್ತಿದಾಯಕ ಮಾತುಗಳನ್ನಾಡಿದರು."ಕನ್ನಡಿಗರ ಶಾಂತಿಯುತ ಪ್ರತಿಭಟನೆಯನ್ನು ಕನ್ನಡಿಗರ ದೌರ್ಬಲ್ಯವೆಂದು ಭಾವಿಸಿ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಮೌನವಾಗಿದೆ. ಈ ನಿಟ್ಟಿನಲ್ಲಿ ಹೋರಟಕ್ಕೆ ತೀವ್ರಸ್ವರೂಪ ನೀಡಲು ಕ.ರ.ವೇ ನಿರ್ಧರಿಸಿ ಈ ರಥಯಾತ್ರೆ ಮೂಲಕ ಎಲ್ಲ ಕನ್ನಡಿಗರನ್ನು ಜಾಗೃತಗೊಳಿಸುತ್ತ ಮುಂದಿನ ಹೋರಟಕ್ಕೆ ಅಣಿಮಾಡಲಾಗುತ್ತಿದೆ. ೨೯ರಂದು ಮಂಡ್ಯದಲ್ಲಿ ೩೧ರಂದು ಬೆಂಗಳೂರಿನಲ್ಲಿ ಭಾರಿ ಪ್ರತಿಭಟನ ಸಭೆ ನಡೆಯಲಿದ್ದು ಹೋರಟದ ಮುಂದಿನ ರೂಪುರೇಶಗಳನ್ನು ಘೋಷಿಸಲಾಗುತ್ತದೆ.ಂಅಯ್ ೪ರಂದು ದೆಹಲಿಯಲ್ಲಿ ಲಕ್ಷಕ್ಕೂ ಹೆಚ್ಚಿನ ಕನ್ನಡಿಗರು ಪ್ರತಿಭಟನೆ ನಡೆಸಲಿದ್ದಾರೆ. ನೀವುಗಳೆಲ್ಲಾ ಎಲ್ಲ ರೈಲುಗಳಲ್ಲಿ ಟಿಕೆಟ್ ರಹಿತವಾಗಿ ದೆಹಲಿಗೆ ಬನ್ನಿ" ಎಂದು ಕರೆಯಿತ್ತರು.ನಾಳೆ (ದಿನಾಂಕ: ೨೮/೦೩/೨೦೦೭ ಬುಧವಾರ) ರಥಯಾತ್ರೆಯು ಚಾಮರಾಜನಗರ ಜಿಲ್ಲೆ ಪ್ರವೇಶಿಸಲಿದೆ.

೨ ನೆ ದಿನ:೨೮-೦೩-೨೦೦೭ ರ ರಥಯಾತ್ರೆ ವರದಿ

೨೮-೦೩-೨೦೦೭ ರ ಬೆಳಗ್ಗೆ ರಥಯಾತ್ರೆಯು ಗಡಿ ಜಿಲ್ಲೆಯಾದ ಚಾಮರಾಜನಗರ ಕಡೆಗೆ ಸಾಗಿತ್ತು. ಅಲ್ಲಿ ಜಾನಪದ ಕಲಾ ತಂಡಗಳಿಂದ ಭವ್ಯಸ್ವಾಗತ ನೀಡಿದರು ಮತ್ತು ರಥಯಾತ್ರೆ ಯನ್ನು ಮೆರವಣಿಗೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ದು ನಗರದ ಭುವನೇಶ್ವರಿ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು. ಮುಂದೆ ರಥಯಾತ್ರೆ ಕೊಳ್ಳೆಗಾಲಕ್ಕೆ ಸಾಗಿತ್ತು. ಅಲ್ಲಿಯೂ ಸಹ ಭಾರಿ ಉತ್ಸಾಹದಿಂದ ಸ್ವಾಗತಕೋರಿದರು. ಅಲ್ಲಿ ಸೇರಿದ್ದ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಪರಭಾಷಿಕರು ತಮ್ಮ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದನ್ನು ಬಿಟ್ಟು ಮುಖ್ಯವಾಹಿನಿ ಗೆ ಬರಬೇಕು ಮತ್ತು ಇಲ್ಲಿಯ ಜನಪ್ರತಿನಿಧಿಗಳು ಕನ್ನಡಿಗರಾಗಿ, ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುವವರಾಗಿರಬೇಕು ಎಂದು ತಿಳಿಸಿದರು. ಅಲ್ಲಿಂದ ರಥಯಾತ್ರೆ ಮಳವಳ್ಳಿಗೆ ಸಾಗಿತು. ಅಲ್ಲಿಯೂ ಜಾನಪದ ತಂಡಗಳೊಂದಿಗೆ ಸ್ವಾಗತ ನೀಡಿದರು. ಅಲ್ಲಿನ ಸಭೆಯಲ್ಲಿ ಕಾವೇರಿಗಾಗಿ ಕ.ರ.ವೇ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ದವೆಂದು ಘೋಷಿಸಿದ ಶ್ರೀ. ಟಿ.ಎ ನಾರಾಯಣಗೌಡರು ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಸಿಗದಿದ್ದಲ್ಲಿ ಅದರಿಂದ ಹೊರಬರಬೇಕಾದಿತೆಂದು ಹೇಳಿ, ನಮ್ಮ ಸಂಸದರ ಮನಸ್ಥಿತಿಯನ್ನು ಖಂಡಿಸಿ ಎಲ್ಲ ಸಂಸದರು ಮೇ ೪ರ ಒಳಗೆ ರಾಜೀನಾಮೆ ಕೊಟ್ಟು ಪ್ರತಿಭಟನೆಯಲ್ಲಿ ಕೈಜೋಡಿಸಬೇಕೆಂದು ಆಗ್ರಹಿಸಿದರು. ಮುಂದೆ ರಥಯಾತ್ರೆ ಶ್ರೀರಂಗಪಟ್ಟಣದ ಕಡೆ ಸಾಗಿತು.

೩ ನೇ ದಿನ: ೨೯-೦೩-೨೦೦೭ ರ ರಥಯಾತ್ರೆ ವರದಿ

ಮೂರನೇ ದಿನ ಶ್ರೀರಂಗಪಟ್ಟಣದಿಂದ ಹೊರಟ ರಥಯಾತ್ರೆ ಶ್ರೀರಂಗಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು. ನಂತರ ರಥಯಾತ್ರೆ ಪಾಂಡವಪುರದ ಕಡೆಗೆ ಹೊರಟಿತು. ಪಾಂಡವಪುರ ತಲುಪುತ್ತಿದ್ದಂತೆ ಪಾಂಡವಪುರ ತಾಲ್ಲೂಕಿನ ಸಾವಿರಾರು ಕಾರ್ಯಕರ್ತರು ಜಾನಪದ ತಂಡಗಳಿಂದ ಸ್ವಾಗತಿಸಿದರು. ರಥಯಾತ್ರೆ ಮೆರವಣಿಗೆಯಲ್ಲಿ ಪಾಂಡವಪುರ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಪಾಂಡವಪುರ ಜನರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಸರಿಯಾಗಿ ಕೆಲಸ ಮಾಡದ ಜನ ನಾಯಕರನ್ನು ಪ್ರಶ್ನಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಕನ್ನಡ ನಾಡಿನ ಏಳಿಗೆಯ ಚಿಂತನೆಯಿರುವ ನಾಯಕರನ್ನೆ ಆಯ್ಕೆ ಮಾಡಬೇಕೆಂದು ತಿಳಿಸಿದರು ನಂತರ ರಥಯಾತ್ರೆ ಮಂಡ್ಯದೆಡೆಗೆ ಪಯಣ ಬೆಳೆಸಿತು.

ಮಂಡ್ಯದಲ್ಲಿಯೂ ಸಹ ಜಿಲ್ಲೆಯ ಸಾವಿರಾರು ಜನ ಭವ್ಯ ಸ್ವಾಗತ ಕೋರಿದರು. ನಂತರ ಸಿಲ್ವರ್ ಜೂಬ್ಲಿ ಪಾರ್ಕ ನಲ್ಲಿ ದೊಡ್ಡ ಸಭೆಗೆ ಆಗಮಿಸಿದ್ದ ಪಾಟೀಲ್ ಪುಟ್ಟಪ್ಪ ನವರು ವಿಧಾನ ಸಭಾ ಸದಸ್ಯರು ಮತ್ತು ಲೋಕಸಭ ಸದಸ್ಯರು ಸಂವಿದಾನಿಕ ಬಿಕ್ಕಟ್ಟನ್ನು ಸೃಷ್ಥಿ ಮಾಡಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಅದು ಸಾಧ್ಯವಾಗದಿದ್ದಲ್ಲಿ ರಾಜೀನಾಮೆ ಕೊಡಬೇಕೆಂದು ತಿಳಿಸಿದರು. ನಂತರ ಮಾತನಾಡಿದ ನಾರಾಯಣಗೌಡರು ವಿಧಾನ ಸಭಾ ಮತ್ತು ಲೋಕಸಭಾ ಸದಸ್ಯರು ಮೇ ೪ ರ ಒಳಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಆಗದಿದ್ದಲ್ಲಿ ರಾಜೀನಾಮೆ ಕೊಡಬೇಕು ಇಲ್ಲದಿದ್ದಲ್ಲಿ ರಾಜ್ಯದ ಜನರೇ ಕರವೇ ಕಾರ್ಯಕರ್ತರು ವಿಜಯ ಮೋರೆ ಗೆ ಮಸಿ ಬಳಿದ ಹಾಗೆ ತಮಗೆಲ್ಲ ಮಸಿ ಬಳಿಯುತ್ತಾರೆ ಎಂದು ರಾಜ್ಯದ ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದರು. ಮಂಡ್ಯದಿಂದ ರಥಯಾತ್ರೆ ಮದ್ದೂರಿನ ಕಡೆಗೆ ಸಾಗಿತು. ಮದ್ದೂರಿನಲ್ಲಿಯೂ ಸಹ ರಥಯಾತ್ರೆ ಗೆ ಭವ್ಯ ಸ್ವಾಗತ ದೊರೆಯಿತು. ಮತ್ತು ರಥಯಾತ್ರೆಯನ್ನು ಮದ್ದೂರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೊಂಡೊಯ್ಯಲಾಯಿತು ನಂತರ ಗುರುಭವನದಲ್ಲಿ ಮದ್ದೂರು ಜನರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರು ಈ ಭಾರಿ ರಾಜ್ಯದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಕಾವೇರಿ ಚಳುವಳಿಗೆ ಪಾಲ್ಗೊಳ್ಳುತ್ತಿರುವುದಕ್ಕೆ ಶ್ಲಾಘಿಸಿದರು.

೪ ನೇ ದಿನ: ೩೦-೦೩-೨೦೦೭ ರ ರಥಯಾತ್ರೆ ವರದಿ

ನಾಲ್ಕನೇ ದಿನ ಮದ್ದೂರಿನಿಂದ ಹೊರಟ ರಥಯಾತ್ರೆ ಚೆನ್ನಪಟ್ಟಣದ ಕಡೆಗೆ ಪಯಣ ಬೆಳೆಸಿತು. ದಾರಿಯಲ್ಲಿ ಇರುವ ಹಳ್ಳಿ ಹಳ್ಳಿಗಳಲ್ಲಿ ಜನರು ರಥಯಾತ್ರೆಯನ್ನು ಸ್ವಾಗತಿಸಿದರು. ಚೆನ್ನಪಟ್ಟಣವನ್ನು ಪ್ರವೇಶಿಸಿದ ರಥಯಾತ್ರೆಗೆ ಜನರು ಉತ್ಸಾಹದಿಂದ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ಚೆನ್ನಪಟ್ಟಣ ತಾಲ್ಲೂಕಿನ ಜನರು ಎಲ್ಲಾ ಭೇದಗಳನ್ನು ಮರೆತು ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕಾಗಿ ಹೋರಾಡುವಂತೆ ತಿಳಿಸಿದರು. ಮುಂದೆ ರಥಯಾತ್ರೆ ಬಿಡದಿ ಕಡೆಗೆ ಪ್ರಯಾಣ ಬೆಳೆಸಿತು. ಬಿಡದಿಯಲ್ಲಿ ಪಟಾಕಿಗಳನ್ನು ಸಿಡಿಸುವ ಮೂಲಕ ರಥಯಾತ್ರೆಯನ್ನು ಬರಮಾಡಿಕೊಂಡರು. ನಂತರ ರಥಯಾತ್ರೆ ಕೆಂಗೇರಿ ಕಡೆಗೆ ಪ್ರಯಾಣ ಬೆಳೆಸಿತು. ಮಾರ್ಗ ಮಧ್ಯದ ಹೆಜ್ಜಾಲದಲ್ಲಿ ಗ್ರಾಮಸ್ಥರು ಸ್ವಾಗತಿಸಿದರು ಈ ಸಂದಭ೯ದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ಹೆಜ್ಜಾಲ ಗ್ರಾಮಸ್ಥರನ್ನು ಬೆಂಗಳೂರಿನ ಸಭೆ ಮತ್ತು ದೆಹೆಲಿಯಲ್ಲಿ ಏಪ್ರಿಲ್ ೪ ರಂದು ನಡೆಯುವ ಪ್ರತಿಭಟನೆಗೆ ಆಹ್ವಾನಿಸಿದರು. ಅಲ್ಲಿಂದ ರಥಯಾತ್ರೆ ಕೆಂಗೇರಿಗೆ ಸಾಗಿತು.

೫ ನೇ ದಿನ: ೩೧-೦೩-೨೦೦೭ ರ ರಥಯಾತ್ರೆ ವರದಿ

ಐದನೇ ದಿನ ರಥಯಾತ್ರೆಯನ್ನು ಕೆಂಗೇರಿಯಿಂದ ಪಟಾಕಿಗಳನ್ನು ಸಿಡಿಸುವ ಮೂಲಕ ಬೀಳ್ಕೊಡಲಾಯಿತು ದಾರಿಯುದ್ದಕ್ಕು ಜನರು ರಥಯಾತ್ರೆಯನ್ನು ಸ್ವಾಗತಿಸಿದರು. ರಾಜರಾಜೇಶ್ವರಿನಗರದಲ್ಲಿ ಸುಮಾರು ೮೦೦ ಕ್ಕೂ ಹೆಚ್ಚು ಆಟೋ ಚಾಲಕರು ರಥಯಾತ್ರೆಯನ್ನು ಬರಮಾಡಿಕೊಂಡರು. ಬಿ.ಹೆಚ್.ಇ.ಎಲ್ ವೃತ್ತದಿಂದ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದ ಕರವೇ ಕಾರ್ಯಕರ್ತರೊಂದಿಗೆ ವಿಜಯನಗರ ರಾಜಾಜಿನಗರ ಮೂಲಕ ಸುಮಾರು ೧೦ ಸಾವಿರಕ್ಕು ಹೆಚ್ಚು ಜನರೊಂದಿಗೆ ಮಲ್ಲೇಶ್ವರ ಆಟದ ಮೈದಾನದಲ್ಲಿ ೫ ದಿನದ ರಥಯಾತ್ರೆಯನ್ನು ಮುಕ್ತಾಯಗೊಳಿಸಲಾಯಿತು. ಅಲ್ಲಿ ನೆರೆದಿದ್ದ ಅಸಂಖ್ಯಾತ ಜನರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರು ೫೪ ದಿನ ಗಳ ಶಾಂತಿಯುತ ಪ್ರತಿಭಟನೆಗೆ ಸ್ಪಂದಿಸದ ಕೇಂದ್ರ ಸರಕಾರಕ್ಕೆ ಇನ್ನು ಮುಂದೆ ಬಿಸಿಮುಟ್ಟಿಸುವ ಕೆಲಸ ಮಾಡಬೇಕಿದೆ ಹಾಗೆಯೇ ಕಾವೇರಿ ತೀಪು೯ ರಾಜ್ಯಕ್ಕೆ ಮರಣ ಶಾಸನವಾದರೂ ಇದರ ಬಗ್ಗೆ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳದ ನಮ್ಮ ರಾಜ್ಯದ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದಾದರು ತಮ್ಮ ನಿಲುವನ್ನು ಪ್ರಕಟಿಸದಿದ್ದರೆ ರಾಜ್ಯದ ಜನತೆಯೆ ಇವರಿಗೆ ಪಾಠ ಕಲಿಸುವುದಾಗಿ ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆಯ ಈ ರಥಯಾತ್ರೆಗೆ ಬೆಂಬಲ ಸೂಚಿಸಿದ ಕನ್ನಡ ಕುಲಕೋಟಿಗೆ ಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸಿದರು.









 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ