Karnataka Rashana Vedike
Kuvempu
ico_adhyaksharalEkhaniyinda3.jpg
kannadiga.jpg
blog.jpg

ಕನ್ನಡಿಗರ ಜೀವನದಿ ಮಹದಾಯಿಗಾಗಿ ಜನಾಂದೋಲನ

ಕ.ರ.ವೇ ಹೋರಾಟಗಳು
ಹುಬ್ಬಳ್ಳಿ, ಧಾರವಾಡ, ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಅತ್ಯಂತ ಅಗತ್ಯವಾಗಿರುವ ಕಳಸ - ಭಂಡೂರ ಯೋಜನೆ ನಾನಾ ಕಾರಣಗಳಿಂದ ವಿಳಂಬವಾಗುತ್ತಿರುವುದಷ್ಟೇ ಅಲ್ಲದೆ ಮತ ಬ್ಯಾಂಕಿನ ರಾಜಕಾರಣಕ್ಕೆ, ನೆರೆ ರಾಜ್ಯಗಳ ಕುಟಿಲತೆಗೆ ಬಲಿಯಾಗುವ ಭೀತಿ ಎದುರಿಸುತ್ತಿದೆ.
ನಮ್ಮ ನಾಡಿನ ಖಾನಾಪುರದಲ್ಲಿ ಹುಟ್ಟುವ ಮಹದಾಯಿ ನದಿಯಲ್ಲಿ ಕರ್ನಾಟಕದ ಪಾಲಿನ ೪೫ ಟಿ‌ಎಂಸಿ ನೀರಿನ ಬಳಕೆಯ ಹಕ್ಕನ್ನು ಬಳಸಿ ಕಳಸ ಭಂಡೂರ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ರೀತ್ಯ ೭.೫೬ ಟಿ‌ಎಂಸಿಯಷ್ಟು ನೀರನ್ನು ಮಲಪ್ರಭಾ ನದಿಗೆ ಸೇರಿಸಲಾಗುತ್ತದೆ. ಈ ಮೂಲಕ ಈಗಾಗಲೆ ಸೊರಗಿರುವ ಮಲಪ್ರಭಾ ನದಿಗೆ ಮತ್ತೆ ಚೈತನ್ಯ ತುಂಬಲಿದ್ದು ಹುಬ್ಬಳ್ಳಿ, ಧಾರವಾಡ ಮೊದಲಾದ ನಗರಗಳಲ್ಲಿ ಬಿಗಡಾಯಿಸಿರುವ ಕುಡಿವ ನೀರಿನ ಸಮಸ್ಯೆ ಪರಿಹಾರವಾಗಲಿದೆ.
ನಮ್ಮ ಪಾಲಿಗೆ ಜೀವದಾಯಿನಿಯಾದ ಈ ಯೋಜನೆಗೆ ಮೊದಲು ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ ನಂತರ ವಾಪಸ್ ಪಡೆದು ದ್ರೋಹ ಮಾಡಿದೆ. ನೆರೆಯ ಗೋವಾ ರಾಜ್ಯವು ಈ ವಿಷಯದಲ್ಲಿ ತಕರಾರು ಎತ್ತಿ ಯೋಜನೆಗೆ ಅಡ್ಡಿ ಮಾಡುತ್ತಿದೆ. ಗಡಿ ವಿಷಯದಲ್ಲಿ ಸೋತಿರುವ ಮಹಾರಾಷ್ಟ್ರ ರಾಜ್ಯವು, ಈ ವಿಷಯದಲ್ಲಿ ಅನಗತ್ಯವಾಗಿ ತಲೆ ಹಾಕಿ ಗೋವಾದ ಬೆಂಬಲಕ್ಕೆ ನಿಂತಿದೆ. ಗೋವಾ ರಾಜ್ಯದ ಜೀವನದಿಯಾದ ಮಹದಾಯಿ(ಮಾಂಡೋವಿ) ಬತ್ತಿಹೋಗುತ್ತದೆ, ಅರಣ್ಯ ಸಂಪತ್ತು, ಜೀವ ಸಂಕುಲ ನಾಶವಾಗುತ್ತದೆ, ಕರ್ನಾಟಕ ರಾಜ್ಯವು ಕುಡಿಯುವ ನೀರಿನ ನೆಪದಲ್ಲಿ ನೀರಾವರಿ ಯೋಜನೆ ಮಾಡುತ್ತಿದೆ ಎಂದು ಸುಳ್ಳು ಆಪಾದನೆ ಮಾಡುತ್ತಾ ಪರಿಸರವಾದದ ಮುಖವಾಡ ತೊಟ್ಟು, ಜನಾಂದೋಲನಗಳನ್ನು ಹುಟ್ಟು ಹಾಕಿ, ನೆರೆಯ ಗೋವಾದ ಜನರನ್ನು ಕನ್ನಡಿಗರ ವಿರುದ್ಧ ತಪ್ಪು ಮಾಹಿತಿ ನೀಡಿ ಎತ್ತಿ ಕಟ್ಟುತ್ತಾ, ನಮ್ಮ ಹಕ್ಕನ್ನು ನಿರಾಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದೆ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಸಮರ ಹೂಡಿದೆ. ಈ ಯೋಜನೆಯನ್ನು ತಡೆಯುವ ಸಲುವಾಗಿಯೇ ಇಡಿ ಗೋವೆಯನ್ನು ನೀರಿನ ಕೊರತೆಯಿರುವ ರಾಜ್ಯವೆಂದು ತನ್ನ ವಿಧಾನ ಸಭೆಯಲ್ಲಿ ಘೋಷಣೆಮಾಡಿರುವುದಲ್ಲದೆ, ಪುಟ್ಟ ರಾಜ್ಯದ ಮೇಲೆ ಕರ್ನಾಟಕದ ದಬ್ಬಾಳಿಕೆ ಮಾಡುತ್ತಿದೆಯೆಂದೂ ಮರುಕ ಗಿಟ್ಟಿಸಲು ಸುಳ್ಳು ಸುಳ್ಳೇ ಪ್ರಚಾರ ಮಾಡುತ್ತಿದೆ.
೨೧೦ ಟಿ‌ಎಂಸಿಯಷ್ಟು ನೀರು ದೊರೆಯುವ ಮಹದಾಯಿಯಿಂದ ೭.೫೬ ಟಿ‌ಎಂಸಿ ನೀರು ಹರಿಸಲು, ಕಳಸ - ಭಂಡೂರಗಳಲ್ಲಿ ನಾವು ತೋಡ ಬೇಕಾಗಿರುವುದು ಕೇವಲ ೪.೬ ಕಿಮೀ ದೂರ ಮಾತ್ರ. ಪುಟ್ಟ ಪುಟ್ಟ ಅಣೆಕಟ್ಟುಗಳ ನಿರ್ಮಾಣ ಮಾತ್ರ. ಇದರಿಂದ ಮಹದಾಯಿ ನದಿ ಬತ್ತಿ ಹೋಗುತ್ತದೆ ಎನ್ನುವುದಾಗಲೀ, ಭಾರೀ ಪ್ರಮಾಣದ ಅರಣ್ಯ ನಾಶ, ಜೀವ ಸಂಕುಲ ನಾಶ ಆಗುತ್ತದೆ ಎನ್ನುವುದು ಸುಳ್ಳು ಆರೋಪಗಳಾಗಿವೆ. ಗೋವಾ ತನ್ನ ನೆಲದಲ್ಲಿ ಇದುವರೆವಿಗೆ ಯಾವುದೇ ಅಣೆಕಟ್ಟೆ ನಿರ್ಮಿಸಿಲ್ಲವೇ? ಆಗ ಅರಣ್ಯ ನಾಶದ ಪರಿಸರ ಕಾಳಜಿ ಇರಲಿಲ್ಲವೇ? ಈಗ ಕುಡಿಯುವ ನೀರಿನ ಹಕ್ಕನ್ನು ನಿರಾಕರಿಸುವುದರ ವಿರುದ್ಧ ನಾವು ಸಿಡಿದೆದ್ದು ನಮ್ಮ ಹಕ್ಕನ್ನು ಹೋರಾಟದ ಮೂಲಕ ಪಡೆಯಬೇಕಾದ ಅನಿವಾರ್ಯತೆಯನ್ನು ಹುಟ್ಟು ಹಾಕಿದ್ದಾರೆ.
ಕನ್ನಡ ತಾಯಿಯ ಧೀರ ಮಕ್ಕಳೇ, ಹೋರಾಟ ನಮಗೆ ಹೊಸದಲ್ಲ. ಮಲ್ಲಮ್ಮ, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ಹಿರಿಯರು ಹೋರಾಟದ ಪರಂಪರೆಯನ್ನೇ ನಮಗಾಗಿ ಉಂಬಳಿ ಬಿಟ್ಟು ನಡೆದಿದ್ದಾರೆ. ನರಗುಂದದ ರೈತಬಂಡಾಯದ ಹೋರಾಟದ ಕೆಚ್ಚು ನಮ್ಮಲ್ಲಿನ್ನೂ ಆರಿಲ್ಲ ಎನ್ನುವುದನ್ನು ನೆನಪು ಮಾಡಿಕೋಡೋಣ, ಬನ್ನಿ. ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಿಗರ ಸ್ವಾಭಿಮಾನದ ಈ ಹೋರಾಟಕ್ಕೆ ಧ್ವನಿಯಾಗಲಿದೆ. ನಮ್ಮ ಬದುಕುವ ಹಕ್ಕಿಗಾಗಿ ಸಂಘಟಿತರಾಗಿ ಹೋರಾಡೋಣ.
ಕನ್ನಡಿಗರ ಹಿತಕ್ಕೆ ಮಾರಕವಾದ ನಿಲುವು ತೆಗೆದುಕೊಳ್ಳದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸೋಣ. ಕಳಸ ಭಂಡೂರ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತಂದು ಬಾಯಾರಿರುವ ನಗರಗಳಿಗೆ ಕುಡಿಯುವ ನೀರು ದೊರಕಿಸಿಕೊಡುವಂತೆ ಒತ್ತಾಯಿಸೋಣ. ಈ ಸಂಬಂಧ ಹುಬ್ಬಳ್ಳಿಯಲ್ಲಿ ಜೂನ್ ೨೨ರಂದು ಏರ್ಪಡಿಸಿರುವ ಬೃಹತ್ ಜಾಥದಲ್ಲಿ ನಾಡಿನ ಎಲ್ಲ ಕನ್ನಡಿಗರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತೇವೆ.

 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ