ಧಾರವಾಡ ಜಿಲ್ಲೆಯ ಜೋಡಿ ಮಹಾನಗರಗಳಾದ ಹುಬ್ಬಳ್ಳಿ ಮತ್ತು ದಾರವಾಡಗಳಲ್ಲಿ ನೀರಿನ ಬವಣೆ ಹಲವಾರು ವರುಷಗಳಿಂದಲೂ ಇದೆ. ಈ ಬವಣೆಯನ್ನು ನೀಗಿಸಲು, ಕರ್ನಾಟಕ ಸರ್ಕಾರ, ಕಳಸ ಬಂಡೂರಿ ಕಾಲುವೆ ಯೋಜನೆಯನ್ನು ಕೈಗೆತ್ತಿಕೊಂಡಿತು. ಈ ಯೋಜನೆಯಡಿ, ಕರ್ನಾಟಕದಲ್ಲಿ ಹುಟ್ಟಿ ಗೋವಾದೆಡೆಗೆ ಹರಿಯುವ ಮಹದಾಯಿ ನದಿಯನ್ನು ಕಾಲುವೆಗಳ ಮೂಲಕ, ಮಲಪ್ರಭ ನದಿಗೆ ಜೋಡಿಸಿ, ೭.೫೬ ಟಿ.ಎಂ.ಸಿಯಷ್ಟು ನೀರನ್ನು ಬಳಸಲು ಉದ್ದೇಶಿಸಲಾಯಿತು. ಈ ಯೋಜನೆಗೆ ಅಡ್ಡಗಾಲು ಹಾಕಲು ಗೋವದ ಸರ್ಕಾರಗಳು ರಾಜಕೀಯ ಮಾಡಿದವು. ಅಂದಿನ ಎನ್.ಡಿ.ಏ ಸರ್ಕಾರ iತ್ ಇಂದಿನ ಯು.ಪಿ.ಏ. ಸರ್ಕಾರಗಳು ಇದಕ್ಕೆ ಪೂರಕವಾಗಿ ನಡೆದು ಕೊಂಡಿತು. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು, ಜೂನ್ ೨೨ ೨೦೦೭ ರಂದು ಹುಬ್ಬಳ್ಳಿ ಜನರಲ್ಲಿ ಜಾಗೃತಿ ಮೂಡಿಸಲು ಬೃಹತ್ ಜಾಗೃತ ಜಾಥವನ್ನು ಹಮ್ಮಿಕೊಂಡಿತು. ಹುಬ್ಬಳ್ಳಿ ಮತ್ತು ಧಾರವಾಡದ ಜೊತೆಗೆ ತಮ್ಮ ಹೋರಾಟದ ನಿಲುವನ್ನು ತೋರಲು, ಬೆಳಗಾವಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಂದ ಜನ ಸಾಗರ ಹರಿದು ಬಂದಿತ್ತು. ಮಧ್ಯಾಹ್ನ ೩ ಘಂಟೆಗೆ, ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ೫೦೦೦ ಸಾವಿರ ಜನರನ್ನೊಳೊಗಂಡ ಜಾಥಕ್ಕೆ ಚಾಲನೆ ಸಿಕ್ಕಿತು. ಈ ಜಾಥವು ಮಳೆಯಲ್ಲಿಯೂ ಸಹ ಕಳಸ ಬಂಡೂರಿ ನಾಲೆಯ ಪರ ಘೋಷಣೆ ಕೂಗುತ್ತ, ಗಾಜಿನ ಮನೆಯಡೆಗೆ ಪಯಣ ಬೆಳೆಸಿತು. ಹುಬ್ಬಳ್ಳಿಯ ಇಂದಿರ ಗಾಜಿನ ಮನೆಗೆ ತಲುಪುವ ಹೊತ್ತಿಗಾಗಲೆ ಸಂಜೆ ೪:೩೦ ಆಗಿತ್ತು. ಅಲ್ಲಿ ಒಂದು ವೇದಿಕೆ ಸಿದ್ಧವಾಗಿತ್ತು. ಆ ವೇದಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಏ.ನಾರಾಯಣ ಗೌಡರು, ಕರ್ನಾಟಕ ಬಾರ್ ಅಸ್ಸೊಸಿಯೇಶನ್‌ನ ಉಪಾಧ್ಯಕ್ಷರಾದ ಎಸ್.ಆರ್.ಪಾಟೀಲ್, ನಾಡೊಜ ಪಾಟೀಲ್ ಪುಟ್ಟಪ್ಪನವರು, ಹುಬ್ಬಳ್ಳಿ ಮೂರುಸಾವಿರಮಠದ ಸ್ವಾಮಿಗಳು, ಇಂದು ಸಂಜೆ ಪತ್ರಿಕೆಯ ಸಂಪಾದಕರಾದ ದಿನೇಶ್ ಮತ್ತು ಕ.ರ.ವೇ.ಯ ಹುಬ್ಬಳ್ಳಿ, ದಾರವಾಡ, ಕೊಪ್ಪಳ, ಬೆಳಗಾವಿ ಮತ್ತು ಗದಗ ಜಿಲ್ಲಾಧ್ಯಕ್ಷರುಗಳು ಅಲಂಕರಿಸಿದ್ದರು. ಕಾರ್ಯಕ್ರಮವನ್ನು ಟಿ.ಏ.ನಾರಾಯಣಗೌಡರು ಹಾಗು ಸ್ವಾಮಿಗಳು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಮೊದಲು ಮಾತನಾಡಿದ ದಿನೇಶ್, ಕಳಸ ಬಂಡೂರಿ ನಾಲ ಯೋಜನೆ ಬಗ್ಗೆ ಕೇಂದ್ರಕ್ಕಿರುವ ದೃಷ್ಟಿಕೋನ ಸರಿಯಿಲ್ಲವೆಂದು ಹೇಳಿದರು. ನಂತರ ಮಾತನಾಡಿದ ಕರ್ನಾಟಕ ಬಾರ್ ಅಸ್ಸೊಸಿಏಶನ್ ನ ಉಪಾಧ್ಯಕ್ಷರಾದ ಎಸ್.ಆರ್. ಪಾಟೀಲ್, ಕ.ರ.ವೇ. ಹೋರಾಟದ ಹಾದಿಯನ್ನು ಪ್ರಶಂಸಿಸುತ್ತ, ಈ ಹೋರಾಟಕ್ಕೆ ನಾqನ ಎಲ್ಲ ವಕೀಲರ ಬೆಂಬಲವನ್ನು ಘೋಷಿಸಿದರು. ನಾಡೊಜ ಪಾಟೀಲ್ ಪುಟ್ಟಪ್ಪನವರು ಮಾತನಾಡಿ, ಕ.ರ.ವೇಯು ಕರ್ನಾಟಕದ ತುದಿಯಿಂದ ತುದಿಂiiವರೆಗೆ ನಡೆಸುತ್ತಿರುವ ಹೋರಾಟದ ಬಗ್ಗೆ ಹಿತನುಡಿದರು. ಹಾಗೆಯೇ ಕಾವೇರಿ ನೀರಿನ ನ್ಯಾಯಕ್ಕಾಗಿ, ದಿಲ್ಲಿಯಲ್ಲಿ ನಡೆಸಿದ ೨೫೦೦೦ ಕನ್ನಡಿಗರ ಜಾಥ ಬಗ್ಗೆ ಪ್ರಶಂಸಿಸಿದರು. ಅದೇ ಮಾದರಿಯಲ್ಲಿ, ಕಳಸ ಬಂಡೂರಿ ನಾಲ ಯೋಜನೆಗೂ ಮಹತ್ವ ನೀಡುತ್ತಿರುವ ಕ.ರ.ವೇಯನ್ನು ಕೊಂಡಾಡಿದರು. ನಂತರ ಗರ್ಜಿಸಿದ ಶ್ರೀ ನಾರಾಯಣ ಗೌಡರು, ಕೇಂದ್ರದ ದ್ವಂದ್ವ ನೀತಿ, ಮತಕ್ಕಾಗಿ ಮಾಡುತ್ತಿರುವ ರಾಜಕಾರಣದ ಬಗ್ಗೆ ಕಿಡಿಕಾರಿದರು. ಕಾವೇರಿ, ಕೃಷ್ಣ ಹಾಗೂ ಈಗ ಮಹದಾಯಿಗಾಗಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಗೋವ (ಅದೇ ಮಾದರಿಯಲ್ಲಿ) ರಾಜ್ಯಗಳನ್ನು ಬೇಡಿಕೊಳ್ಳುವ ಪರಿಸ್ಥಿತಿಯ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತ, ದಿಲ್ಲಿಗೆ ಕರ್ನಾಟಕದಿಂದ ಚುನಾಯಿತರಾದ ೨೮ ರಾಜ್ಯಗಳ ಶಾಸಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭಾರತ ಒಕ್ಕೂಟದ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿರೋದ ವ್ಯಕ್ತಪಡಿಸುತ್ತ, ಕರ್ನಾಟಕಕ್ಕೆ ತಾರತಮ್ಯವೆಸಗುತ್ತಿರುವ ಸೋನಿಯಾ ಗಾಂದಿ ಕ್ಷಮೆ ಯಾಚಿಸುವವರೆಗೂ ಕರ್ನಾಟಕಕ್ಕೆ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಳಸ ಬಂಡೂರಿ ಯೋಜನೆ ಜಾರಿಗ್ವೆ ಬರಲೇಬೇಕೆಂದು ಹಾಗೆ ಬರುವವರೆವಿಗೂ ಹೋರಾಟ ನಡೆಯುತ್ತದೆ ಎಂದು ಘೋಷಿಸಿದರು. ಈ ರೀತಿಯಾಗಿ ಕೆಚ್ಚಿನ ಮಾತುಗಳನ್ನು ಆಡುತ್ತ್ತಾ, ಅಲ್ಲಿ ನೆರೆದಿದ್ದ ಹುಬ್ಬಳ್ಳಿ ಧಾರವಾಡದ ಜನರಲ್ಲಿ ಆತ್ಮ ಬಲವನ್ನು ಮತ್ತು ಚೈತನ್ಯವನ್ನು ತುಂಬಿದರು.
 |