Karnataka Rashana Vedike
Kuvempu
ico_adhyaksharalEkhaniyinda3.jpg
kvrblog.jpg
Sangatane.jpg

ಎ.ಪಿ.ಎಮ್.ಸಿ ಚುನಾವಣೆಯಲ್ಲಿ ಎಮ್.ಇ.ಎಸ್ ಪುಂಡರನ್ನು ಬೆಂಬಲಿಸಿದ ಶಾಸಕ ಸುರೇಶ್ ಅಂಗಡಿ ವಿರುದ್ಧ ಉಗ್ರ ಹೋರಾಟ

ಕ.ರ.ವೇ ಹೋರಾಟಗಳು
ಬೆಳಗಾವಿ ವ್ಯಾಪ್ತಿಯಲ್ಲಿ ಕೆಲತಿಂಗಳ ಹಿಂದೆ ನಡೆಯ ಬೇಕಾಗಿದ್ದ ಎ.ಪಿ.ಎಂ.ಸಿ ಚುನಾವಣೆಯನ್ನು, ಚುನಾವಣಾ ಅಧಿಕಾರಿಗಳಾಗಿದ್ದ ಪಿ.ವೈ.ಪಟಗುಂಡಿ ಅವರ ಮೇಲೆ ಎಂ.ಇ.ಎಸ್‌ನ ಪುಂಡರು ಹಲ್ಲೆ ಮಾಡಿದಾಗಲೇ, ಹಾಗೆ ಹಲ್ಲೆ ಮಾಡಿದ ಕಾರಣದಿಂದಾಗಿ ಚುನಾವಣೆ ಮುಂದೂಡಿದಾಗಲೇ ಇಂತಹ ಒಂದು ಹುನ್ನಾರದ ವಾಸನೆ ಬಡಿಯುತ್ತಿತ್ತು.
ನಿನ್ನೆ ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆಯಾದರು. ಒಟ್ಟು ೧೭ ಸದಸ್ಯ ಬಲದ ಈ ಚುನಾವಣೆಯಲ್ಲಿ ಎಮ್.ಇ.ಎಸ್‌ಗೆ ಇದ್ದದ್ದು ೮ ಸ್ಥಾನಗಳ ಬಲ. ಉಳಿದದ್ದೆಲ್ಲ ಇದ್ದದ್ದು ಕನ್ನಡಿಗರ ಕೈಯ್ಯಲ್ಲೇ. ಆದರೆ ಬೆಳಗಾವಿಯ ಭಾರತೀಯ ಜನತಾ ಪಕ್ಷದ ಇಬ್ಬರು ಸದಸ್ಯರು ಬೆಂಬಲ ನೀಡಿ ಮತದಾನ ಮಾಡಿದ್ದರಿಂದಾಗಿ ಸುಲಭವಾಗಿ ಈ ಸ್ಥಾನಗಳು ಕನ್ನಡಿಗರ ಕೈ ತಪ್ಪಿ ಹೋಯಿತು. ಹಿಂದೆ ಸರ್ಕಾರ ನೇಮಕಾತಿ ಮಾಡುವಾಗಲೂ ಎಮ್.ಇ.ಎಸ್ ಸದಸ್ಯರನ್ನು ನೇಮಕ ಮಾಡಿದಾಗ ಕರ್ನಾಟಕ ರಕ್ಷಣಾ ವೇದಿಕೆಯ ತೀವ್ರ ಪ್ರತಿಭಟನೆಯ ಕಾರಣದಿಂದಾಗಿ ಹಿಂಪಡೆಯಲಾಗಿತ್ತು. ಈಗ ರಾಜಕೀಯ ಲೆಕ್ಕಾಚಾರಗಳು ನಾಡ ಹಿತವನ್ನು ಕಡೆಗಣಿಸಿ ಮೆರೆದಾಡಿತು.
ಕನ್ನಡಿಗರ ಹಿತಾಸಕ್ತಿಯ ಬಗ್ಗೆ ಈ ಮಟ್ಟದ ನಿರ್ಲಕ್ಷ್ಯ ನಮ್ಮ ರಾಜಕೀಯ ಪಕ್ಷಗಳಿಗೆ ಏಕೆ? ರಾಷ್ಟ್ರೀಯ ಪಕ್ಷಗಳೆಂದರೆ ದೇಶಹಿತದ ಹೆಸರಲ್ಲಿ ಕರ್ನಾಟಕದ, ಕನ್ನಡಿಗರ ಹಿತವನ್ನು ಬಲಿಕೊಡುವುದು ಮಾತ್ರವೇ? ಈಗ ನಿಜವಾದ ನಾಡದ್ರೋಹ ಮಾಡಿದವರು ಯಾರು? ಕನ್ನಡಿಗರ ಮತ ಪಡೆದು ಆಯ್ಕೆಯಾದ ಸಂಸದ ತೆರೆಮರೆಯಲ್ಲಿ ಇಂತಹ ದ್ರೋಹದ ಕೆಲಸ ಮಾಡಿರುವುದನ್ನು ಸಹಿಸಲು ಸಾಧ್ಯವೇ? ನಾಡು ನುಡಿಯ ರಕ್ಷಣೆಯ ವಿಷಯದಲ್ಲಿ ಯಾವ ರಾಜಿಗೂ ಸಿದ್ಧವಿಲ್ಲದ ಕರ್ನಾಟಕ ರಕ್ಷಣಾ ವೇದಿಕೆ, ಇಂತಹ ಬೆಳವಣಿಗೆಗಳನ್ನು ಮೊದಲಿನಿಂದಲೂ ಗಮನಿಸುತ್ತಾ ಕನ್ನಡಿಗರ ಅಹವಾಲನ್ನು ಜನಪ್ರತಿನಿಧಿಗಳ ಮುಂದೆ ಅನೇಕ ಪ್ರತಿಭಟನೆಗಳು, ಮನವಿಗಳ ಮೂಲಕ ಇಡುತ್ತಿದ್ದರೂ ಇದನ್ನು ಲೆಕ್ಕಿಸದೆ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹೀಗೆ ಒಬ್ಬ ಜನಪ್ರತಿನಿಧಿ, ಒಂದು ರಾಜಕೀಯ ಪಕ್ಷ ನಡೆದು ಕೊಳ್ಳುವುದು . . . ಬೇಲಿಯೇ ಎದ್ದು ಹೊಲ ಮೆಯ್ದ ಹಾಗಲ್ಲವೇ? ಈ ಹಿನ್ನೆಲೆಯಲ್ಲಿ ನಾಡ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಎಂದಿಗೂ ಹಿಂದೆಗೆಯದ ಕರ್ನಾಟಕ ರಕ್ಷಣಾ ವೇದಿಕೆಯ ಕಲಿಗಳು ನಿನ್ನೆ ರಾತ್ರಿ, ಬೆಳಗಾವಿಯ ಸಂಸದ ಶ್ರೀ. ಸುರೇಶ್ ಅಂಗಡಿಯವರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸದರು ಸ್ಥಳದಲ್ಲಿ ಇಲ್ಲದಿದ್ದರೂ ಕನ್ನಡಪರ ಹೋರಾಟಗಾರರ ಮೇಲೆ ಕೊಲೆಯತ್ನದ ಸುಳ್ಳು ಮೊಕದ್ದಮೆಯನ್ನು ದಾಖಲಿಸಲಾಗಿದೆ.
ನಾಡು ನುಡಿಯ ರಕ್ಷಣೆಗಾಗಿ ಕಟಿಬದ್ಧವಾಗಿರುವ ಕರ್ನಾಟಕ ರಕ್ಷಣಾ ವೇದಿಕೆ ಇಂತಹ ಸುಳ್ಳು ಮೊಕದ್ದಮೆಗಳಿಗಾಗಲೀ, ಪೊಲೀಸರ ಬೂಟು ಲಾಟಿಗಳಿಗಾಗಲೀ, ಜೈಲು ಶಿಕ್ಷೆಗಾಗಲೀ ಬೆದರುವುದಿಲ್ಲ. ನಾಡದ್ರೋಹಿಗಳಿಗೆ ಇಂದಾಗಿರುವುದು ಬರಿಯ ಎಚ್ಚರಿಕೆ ನೀಡುವ ಕೆಲಸ ಮಾತ್ರ. ನಾಡವಿರೋಧಿ ಕೃತ್ಯಕ್ಕೆ ತೊಡಗುವ ಯಾವುದೇ ವ್ಯಕ್ತಿ, ಶಕ್ತಿ, ಸಂಘಟನೆ, ರಾಜಕೀಯ ಪಕ್ಷಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಪ್ರತಿಭಟನೆ ಕೈಗೊಳ್ಳುತ್ತಲೇ ಇರುತ್ತದೆ.

 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ