ಸ್ವತಂತ್ರ ಬಂದ ದಿನದಿಂದಲೂ ಒಂದು ದೇಶ ಒಂದು ಭಾಷೆಯೆಂಬ ಸೂತ್ರದ ಅಡಿಯಲ್ಲಿ ಹಿಂದಿಯನ್ನು ಕನ್ನಡಿಗರ ಮೇಲೆ ಹೇರಲಾಗಿದೆ. ಇದು ನಮ್ಮ ದೇಶದ ಸಂವಿಧಾನ ಎತ್ತಿ ಹಿಡಿದಿರುವ " ಅನೇಕತೆಯಲ್ಲಿ ಏಕತೆ" ಗೆ ಮಾರಕವಾಗಿದೆ. ಹಿಂದಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕನ್ನಡ ನಾಡಿನಲ್ಲಿ " ಹಿಂದಿ ಸಪ್ತಾಹ" ಗಳನ್ನು ನಡೆಸುತ್ತಾ ಬಂದಿದೆ. "ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ" ಎಂಬುದನ್ನು ತಿಳಿದಿರದ ಕೇಂದ್ರ ಸರಕಾರದ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ವರ್ಷದಂತೆ ಈ ವರ್ಷವೂ ಸಹ ರಾಜ್ಯಾದ್ಯಂತ ಹಿಂದಿ ಸಪ್ತಾಹದ ವಿರುದ್ದ ಪ್ರತಿಭಟನೆ ನಡೆಸುವ ಮೂಲಕ " ಕರ್ನಾಟಕದಲ್ಲಿ ಕನ್ನಡವೇ ಸಾರ್ವಬೌಮ ಭಾಷೆ" ಎಂಬುದನ್ನು ಕೇಂದ್ರ ಸರಕಾರಕ್ಕೆ ತಿಳಿಸಿ ಕೊಟ್ಟಿದೆ. ಇದರಲ್ಲಿ ಮುಖ್ಯವಾಗಿ ಕೇಂದ್ರ ಸರಕಾರದ ಪ್ರಾತಿನಿಧಿತ ಕೋರಮಂಗಲದ ಕೇಂದ್ರೀಯ ಸದನದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ವತಿಯಿಂದ ನಡೆಸುತ್ತಿದ್ದ ಹಿಂದಿ ಸಪ್ತಾಹಕ್ಕೆ ಕರವೇಯ ನೂರಾರು ಕಾರ್ಯಕರ್ತರು ದಿಡೀರನೆ ಕಾರ್ಯಕ್ರಮಕ್ಕೆ ನುಗ್ಗಿ ಕಾರ್ಯಕ್ರಮ ಸ್ಥಗಿತಗೊಳಿಸುವ ಮೂಲಕ ಕೇಂದ್ರ ಸರಕಾರಕ್ಕೆ ಹಿಂದಿ ಹೇರಿಕೆಯನ್ನು ನಿಲ್ಲಿಸುವಂತೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ಮೂಲಕ ಎಚ್ಚರಿಕೆಯನ್ನು ಕೊಟ್ಟಿತು. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಅಂಚೆ ಕಛೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಡೆಸುವ ಹಿಂದಿ ಸಪ್ತಾಹವನ್ನು ಏಕಕಾಲಕ್ಕೆ ತಡೆಯುವಲ್ಲಿ ಕರವೇ ಕಾರ್ಯಕರ್ತರು ಯಶಸ್ವಿಯಾದರು. ಅದರಲ್ಲಿ ಮುಖ್ಯವಾಗಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಕೆನರಾ ಬ್ಯಾಂಕ್ ನಲ್ಲಿ ನಡೆಯುತ್ತಿದ್ದ ಹಿಂದಿ ಸಪ್ತಾಹವನ್ನು ಕರವೇ ಕಾರ್ಯಕರ್ತರು ರದ್ದುಪಡಿಸುವಂತೆ ಮಾಡಿದರು. |