Karnataka Rashana Vedike
Kuvempu
ico_adhyaksharalEkhaniyinda3.jpg
kannadiga.jpg
blog.jpg

ಕರ್ನಾಟಕ ರಕ್ಷಣಾ ವೇದಿಕೆಯ ೬ನೇ ರಾಜ್ಯಮಟ್ಟದ ಸ್ವಾಭಿಮಾನಿ ಕನ್ನಡಿಗರ ಸಮಾವೇಶದಲ್ಲಿ ಮಂಡಿಸಿರುವ ನಿರ್ಣಯಗಳು

ಸಂಘಟನೆ
ಆರನೆಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶವು ನಾಡು-ನುಡಿಗಳ ಏಳಿಗೆಗೆ ಪೂರಕವಾಗುವ ಈ ಕೆಳಕಂಡ ಕೆಲಸಗಳು ಕೂಡಲೇ ಆದ್ಯತೆಯ ಮೇಲೆ ಆಗಬೇಕೆಂದು ಒಕ್ಕೊರಲಿನಿಂದ ನಿರ್ಣಯ ಮಂಡಿಸುತ್ತದೆ.

೧. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಕೇಂದ್ರಸರ್ಕಾರ ಕೂಡಲೇ ಘೋಷಿಸಬೇಕು
೨. ಕನ್ನಡನಾಡಿನ ಗಡಿಭಾಗಗಳ ಭದ್ರತೆಗೆ ತೊಂದರೆಯಾಗದಂತೆ ಕೇಂದ್ರಸರ್ಕಾರ ಮಹಾಜನ್ ವರದಿಯನ್ನು ಕೂಡಲೇ ಜಾರಿಗೆ ತರಬೇಕು
೩. ಅಂತರರಾಷ್ಟ್ರೀಯ ನದಿನೀರು ಹಂಚಿಕೆಯ ಮಾದರಿಯಲ್ಲಿ ಅಂತರರಾಜ್ಯ ನದಿನೀರು ಹಂಚಿಕೆಗೆ ರಾಷ್ಟ್ರೀಯ ಜಲನೀತಿಯನ್ನು ಕೇಂದ್ರಸರ್ಕಾರ ಅತಿ ಶೀಘ್ರದಲ್ಲೇ ರೂಪಿಸಬೇಕು
೪. ಕನ್ನಡನಾಡಿನಲ್ಲಿ ಮತದಾನಕ್ಕೆ ನಿಲ್ಲುವ ರಾಜಕೀಯ ಪಕ್ಷಗಳು ಕನ್ನಡಿಗರಿಗೆ ಮಾತ್ರ ಟಿಕೆಟ್ ಕೊಡಬೇಕು
೫. ಕರ್ನಾಟಕದ ಒಟ್ಟು ಏಳಿಗೆಯನ್ನು ಗುರಿಯಾಗಿಟ್ಟುಕೊಂಡು ಪ್ರಾದೇಶಿಕ ಅಸಮತೋಲನೆಯ ನಿವಾರಣೆಗೆ ಡಾ. ನಂಜುಂಡಪ್ಪ ವರದಿಯನ್ನು ರಾಜ್ಯಸರ್ಕಾರ ಅತಿ ಶೀಘ್ರದಲ್ಲೇ ಜಾರಿಗೆ ತರಬೇಕು
೬. ಕರ್ನಾಟಕಕ್ಕಾಗುತ್ತಿರುವ ತಡೆಯಿಲ್ಲದ ವಲಸೆಗೆ ಕಡಿವಾಣ ಹಾಕಲು ಅಂತರರಾಜ್ಯ ವಲಸೆ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯಸರ್ಕಾರ ಕೇಂದ್ರಸರ್ಕಾರದ ಮೇಲೆ ಒತ್ತಡ ಹಾಕಬೇಕು
೭. ಕರ್ನಾಟಕದ ಪ್ರಮುಖ ನಗರಗಳನ್ನು ಜೋಡಿಸುವ ಹೆದ್ದಾರಿಗಳು, ರೈಲುಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳನ್ನು ಆದ್ಯತೆಯ ಮೇಲೆ ರಾಜ್ಯ ಮತ್ತು ಕೇಂದ್ರಸರ್ಕಾರಗಳು ನಿರ್ಮಿಸಬೇಕು
೮. ಕನ್ನಡನಾಡಿನ ಐತಿಹಾಸಿಕ ಸ್ಮಾರಕಗಳ ಒತ್ತುವರಿಯನ್ನು ನಿಷೇಧಿಸಿ ಅವುಗಳ ಸಂರಕ್ಷಣೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕಾಯ್ದೆಗಳನ್ನು ರೂಪಿಸಬೇಕು
೯. ಕನ್ನಡ ಚಲನಚಿತ್ರಗಳಿಗೆ ಆದ್ಯತೆಯ ಮೇಲೆ ಚಿತ್ರಮಂದಿರಗಳು ದೊರಕುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಲೇ ಏರ್ಪಾಡು ಮಾಡಬೇಕು
೧೦. ರಾಜ್ಯಸರ್ಕಾರವು ಕನ್ನಡದ ಉದ್ದಿಮೆದಾರರಿಗೆ ಪ್ರೋತ್ಸಾಹ ಕೊಟ್ಟು ಹೆಚ್ಚಿನ ಉದ್ಯಮಶೀಲತೆಗೆ ಉತ್ತೇಜನ ನೀಡಬೇಕು
೧೧. ವಲಸಿಗರು ಹಾಗೂ ಪರಭಾಷಾ ಸಂಘಟನೆಗಳ ಮೇಲೆ ರಾಜ್ಯಸರ್ಕಾರ ತೀವ್ರ ನಿಗಾ ಇಡಬೇಕು; ಮಹಾರಾಷ್ಟ್ರ ಏಕೀಕರಣ ಸಮಿತಿ, ಕೊಂಕಣಿ ಏಕೀಕರಣ ಮಂಚ್ ನಂತಹ ನಾಡವಿರೋಧಿ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು
೧೨. ಬೆಂಗಳೂರಿನ ಹೊಸ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಇಡಬೇಕೆಂದು ರಾಜ್ಯಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು
೧೩. ಕನ್ನಡದ ಮಕ್ಕಳ ಮೇಲೆ ಹಿಂದಿ-ಹೇರಿಕೆಯ ಸಾಧನವಾಗಿರುವ ತ್ರಿಭಾಷಾ ಸೂತ್ರವನ್ನು ರದ್ದುಪಡಿಸಿ ಕನ್ನಡ ಮತ್ತು ಇಂಗ್ಲೀಷುಗಳನ್ನೊಳಗೊಂಡ ದ್ವಿಭಾಷಾ ಸೂತ್ರವನ್ನು ರಾಜ್ಯಸರ್ಕಾರ ಜಾರಿಗೆ ತರಬೇಕು; ರಾಜ್ಯದ ಇಲ್ಲವೇ ಕೇಂದ್ರದ ಪಠ್ಯಕ್ರಮ ಎಂಬ ತಾರತಮ್ಯವಿಲ್ಲದೆ ಕರ್ನಾಟಕದಲ್ಲಿ ಕಲಿಯುವ ಎಲ್ಲಾ ಶಾಲಾ ವಿದ್ಯಾರ್ಥಿಗಳೂ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕೆಂಬ ಕಾಯ್ದೆಯನ್ನು ರಾಜ್ಯಸರ್ಕಾರ ಹೊರಡಿಸಬೇಕು
೧೪. ನಮ್ಮ ನಾಡಿನಲ್ಲಿ ದೊರೆಯುವ ಖನಿಜಗಳು, ಅದಿರುಗಳೂ ಸೇರಿದಂತೆ ಯಾವುದೇ ನೈಸರ್ಗಿಕ ಸಂಪನ್ಮೂಲವನ್ನು ಹೊರಗೆ ಸಾಗಿಸಿದರೆ ಅದರ ರಾಜಧನ (ರಾಯಲ್ಟಿ) ಕರ್ನಾಟಕಕ್ಕೆ ಬರಬೇಕು. ಕರ್ನಾಟಕಕ್ಕೆ ರಾಜಧನವಿಲ್ಲದೆ ನಡೆಯುವ ಗಣಿಗಾರಿಕೆಯನ್ನು ರಾಜ್ಯಸರ್ಕಾರ ನಿಷೇಧಿಸಬೇಕು
೧೫. ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕಸೇವೆಯನ್ನು ಪಡೆಯುವುದು ಕನ್ನಡಿಗನ ಹಕ್ಕು, ಕೊಡುವುದು ಉದ್ಯಮಿಗಳ ಕರ್ತವ್ಯ. ಅದನ್ನು ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾಯ್ದೆಯನ್ನು ರಾಜ್ಯಸರ್ಕಾರ ಹೊರಡಿಸಬೇಕು
೧೬. ಕನ್ನಡವನ್ನು ಆಡಳಿತ ಭಾಷೆಯಾಗಿ ರಾಜ್ಯ ಮತ್ತು ಕೇಂದ್ರಸರ್ಕಾರಗಳೆರಡೂ ಎಲ್ಲಾ ಹಂತಗಳಲ್ಲೂ ಅನುಷ್ಠಾನ ಮಾಡಬೇಕು; ಕನ್ನಡ ನಾಡಿನಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಐ.ಪಿ.ಎಸ್. ಮತ್ತು ಐ.ಎ.ಎಸ್. ಅಧಿಕಾರಿಗಳು ಕಡ್ಡಾಯವಾಗಿ ಕನ್ನಡದಲ್ಲೇ ಆಡಳಿತ ನಡೆಸಬೇಕೆಂಬ ಸುತ್ತೋಲೆಯನ್ನು ರಾಜ್ಯಸರ್ಕಾರ ಹೊರಡಿಸಬೇಕು
೧೭. ಕನ್ನಡಿಗರ ಉದ್ಯೋಗದ ಹಕ್ಕನ್ನು ಕಾಪಾಡುವ ಸಲುವಾಗಿ ಸರೋಜಿನಿ ಮಹಿಷಿ ವರದಿಯ ಆಧಾರದ ಮೇಲೆ ಸೂಕ್ತ ಕಾಯ್ದೆಯನ್ನು ರಾಜ್ಯಸರ್ಕಾರ ಜಾರಿಗೊಳಿಸಬೇಕು
೧೮. ನೆನೆಗುದಿಗೆ ಬಿದ್ದಿರುವ ರಾಜ್ಯದ ಕೃಷ್ಣಾ ಕಣಿವೆಯ ೧೩ ಭಾರಿ, ೧೩ ಮಧ್ಯಮ ಗಾತ್ರದ ಯೋಜನೆಗಳನ್ನೂ, ಕಾವೇರಿ ಕಣಿವೆಯ ೧೩ ಭಾರಿ ಮತ್ತು ೯ ಮಧ್ಯಮ ಗಾತ್ರದ ಯೋಜನೆಗಳನ್ನೂ, ಗೋದಾವರಿ ಕಣಿವೆಯ ೧ ಭಾರಿ, ೧ ಮಧ್ಯಮ ಗಾತ್ರದ ಯೋಜನೆಗಳನ್ನೂ, ಕಳಸಾ ಭಂಡೂರ, ಕೃಷ್ಣಾ ಮೇಲ್ದಂಡೆ, ಬೆಣ್ಣೆತೊರಾ, ಭೀಮಾ ಎಡದಂಡೆ, ತುಂಗಾ ಮೇಲ್ದಂಡೆ, ಹಿಪ್ಪರಗಿ, ಮಲಪ್ರಭಾ, ಘಟಪ್ರಭಾ, ಭದ್ರಾ ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳನ್ನು ರಾಜ್ಯಸರ್ಕಾರ ತ್ವರಿತವಾಗಿ ಪೂರ್ಣಗೊಳಿಸಬೇಕು
೧೯. ಕನ್ನಡನಾಡಿನ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮತ್ತು ಅಧ್ಯಯನ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಸಿಂಹಪಾಲನ್ನು ಸರ್ಕಾರ ಘೋಷಿಸಬೇಕು
೨೦. ಸಂಕಷ್ಟದಲ್ಲಿರುವ ಕನ್ನಡನಾಡಿನ ಎಲ್ಲಾ ರೈತ, ಕಾರ್ಮಿಕ, ನೇಕಾರ ಕುಟುಂಬಗಳಿಗೆ ಸೂಕ್ತವಾದ ಪರಿಹಾರವನ್ನು ಸಕಾಲದಲ್ಲಿ ರಾಜ್ಯಸರ್ಕಾರ ಒದಗಿಸಬೇಕು
೨೧. ನಾಡಿನ ಜಾನಪದ, ಯಕ್ಷಗಾನ ಮತ್ತು ರಂಗಭೂಮಿಯ ಉಳಿವು ಮತ್ತು ಏಳಿಗೆಗಾಗಿ ಸಂಬಂಧಿಸಿದ ಅಕಾಡಮಿಗಳನ್ನು ಬಲಪಡಿಸಬೇಕು, ರಾಜ್ಯದ ಬಜೆಟ್ಟಿನಲ್ಲಿ ಯಥೇಚ್ಛವಾದ ಅನುದಾನವನ್ನು ಘೋಷಿಸಬೇಕು
೨೨. ಮಹಿಳೆಯರ ಸಬಲೀಕರಣಕ್ಕೆ ಪೂರಕವಾದ ಸ್ತ್ರೀಶಕ್ತಿ ಯೋಜನೆಗಳನ್ನು ಅನುದಾನಗಳ ಮೂಲಕ ಬಲಪಡಿಸಬೇಕು
೨೩. ರಾಜಧಾನಿ ಬೆಂಗಳೂರು, ಮಂಗಳೂರು,ಬೆಳಗಾವಿ ಸೇರಿದಂತೆ ರಾಜ್ಯದ ಇನ್ನಿತರ ನಗರಗಳ ಹೆಸರುಗಳನ್ನು ಮೂಲ ಕನ್ನಡ ಪದದಲ್ಲೇ ಬಳಕೆ ಮಾಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು
೨೪. ಸಂವಿಧಾನಬದ್ಧವಾಗಿ ಕನ್ನಡ ಭಾಷೆಯಷ್ಟೇ ಅರ್ಹತೆ ಇರುವ ಹಿಂದಿಯನ್ನು ಕೇಂದ್ರ ಸರ್ಕಾರ ಒತಾಯಪೂರ್ವಕವಾಗಿ ರಾಜ್ಯದ ಪಠ್ಯಕ್ರಮದಲ್ಲಿ ಅಳವಡಿಸುವುದರ ಜೊತೆಗೆ ರಾಜ್ಯದಲ್ಲಿರುವ ತನ್ನ ಅಧೀನ ಕಛೇರಿಗಳಲ್ಲಿ ಕನ್ನಡ ಬಳಕೆ ಮಾಡದೆ ಹಿಂದಿ ಭಾಷೆಗೆ ಮಾನ್ಯತೆ ನೀಡುತ್ತಿರುವುದನ್ನು ನಿಲ್ಲಿಸಬೇಕು ಹಾಗೂ ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಕಛೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಗೆ ಆದೇಶಿಸಬೇಕು.
೨೫. ಕೇಂದ್ರ ಸರ್ಕಾರಿ ಸ್ವಾಮ್ಯದ ರೈಲ್ವೆ ಇಲಾಖೆಯಲ್ಲಿ ರಾಜ್ಯದ ಕನ್ನಡಿಗರಿಗೆ ಕಡ್ಡಾಯವಾಗಿ ಕೆಳಸ್ತರದ ಹುದ್ದೆಯಿಂದ ಹಿಡಿದು ಮೇಲ್ಪಂಕ್ತಿಯ ಹುದ್ದೆಗಳವರೆಗೆ ನೀಡಬೇಕು.
೨೬. ರಾಜ್ಯದ ನೀರಾವರಿ ಯೋಜನೆ ಹಾಗೂ ಗಡಿವಿಚಾರಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಸದಾಕಾಲ ಕಾಲುಕೆರೆದು ಜಗಳ ಮಾಡುತ್ತಿರುವ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಕೇಂದ್ರಸರ್ಕಾರ ಮಣಿಯದೆ ರಾಜ್ಯದ ಹಿತಾಸಕ್ತಿ ಕಾಪಾಡಬೇಕು
೨೭. ರಾಜ್ಯಸರ್ಕಾರ ಪಡಿತರ ಚೀಟಿ ಹಾಗು ಕೊಳಚೆನಿರ್ಮೂಲನ ಮಂಡಳಿಯ ವತಿಯಿಂದ ನೀಡುವ ನಿವೇಶನಗಳನ್ನು ಕನ್ನಡಿಗರಿಗೆ ಮಾತ್ರ ನೀಡಬೇಕು
 

ಸಂಘಟನೆ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ