ಇತ್ತೀಚಿಗೆ ರೇಲ್ವೆಯಲ್ಲಿ ಖಾಲಿಯಿದ್ದ ೪೭೦೧ ‘ಡಿ’ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಹಿಂದಿ ಭಾಷಿಕರನ್ನು ತುಂಬುವ ಹುನ್ನಾರ ನಡೆಸುತ್ತಿದ್ದುದ್ದನ್ನು ವಿರೋಧಿಸಿ ನಾಡಿನಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯು ನಡೆಸುತ್ತಿದ್ದ ಹೋರಾಟದಿಂದ ಕಂಗೆಟ್ಟು ರೇಲ್ವೆ ಇಲಾಖೆ ನೇಮಕಾತಿಯನ್ನು ಮುಂದೂಡುವ ಕುತಂತ್ರ ನಡೆಸಿತು. ಚಳವಳಿ ತಣ್ಣಗಾದ ಮೇಲೆ ಮತ್ತೆ ನೇಮಕಾತಿಯನ್ನು ಮುಂದುವರೆಸುವ ಇರಾದೆ ಇಲಾಖೆಗೆ ಇದ್ದದ್ದು ಮನವರಿಕೆಯಾದ್ದರಿಂದ, ಕರ್ನಾಟಕ ರಕ್ಷಣಾ ವೇದಿಕೆ ಹೋರಾಟವನ್ನು ಮುಂದುವರೆಸಿತು. ಮೊನ್ನೆ ರೇಲ್ವೆ ಸಚಿವರಾದ ಶ್ರೀ ಲಾಲೂ ಪ್ರಸಾದ್ ಯಾದವರು ಕನ್ನಡ ನಾಡಿಗೆ ಭೇಟಿ ಕೊಟ್ಟಿದ್ದಾಗ ಪತ್ರಕರ್ತರು ಈ ನೇಮಕಾತಿ ಪ್ರಕ್ರಿಯೆ ಬಗ್ಗೆ ಸಚಿವರ ಪ್ರತಿಕ್ರಿಯೆ ಕೇಳಿದಾಗ ಕನ್ನಡಿಗರನ್ನು ಉದ್ದೇಶಿಸಿ ಕೊಳಕು ಜನ ಎಂದು ನಿಂದಿಸಿದರು. ಇದು ಸ್ಪಷ್ಟವಾಗಿ ಜನಾಂಗೀಯ ನಿಂದನೆಯಾಗಿದೆ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವರು ಆದ ತಪ್ಪಿಗೆ ಕನ್ನಡಿಗರ ಕ್ಷಮೆ ಕೇಳದೆ, ಇಲಾಖೆಯ ಅಧಿಕಾರಿಗಳಿಂದ ಹಾಗೆ ಅಂದೇ ಇಲ್ಲ ಎಂದು ತಿಪ್ಪೆ ಸಾರಿಸಲು ಯತ್ನಿಸಿದರು. ಕನ್ನಡಿಗರ ಸ್ವಾಭಿಮಾನಕ್ಕೆ ಕೊಳ್ಳಿ ಇಟ್ಟ ಇಂತಹ ಹೇಳಿಕೆಯನ್ನು ಯಾವ ಕಾರಣಕ್ಕೂ ಸಹಿಸುವುದು ಸಾಧ್ಯವೇ ಇಲ್ಲ. ಈ ತಪ್ಪಿಗಾಗಿ ಅವರು ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವೇ ಕೇಂದ್ರ ಸಂಪುಟದಿಂದ ಅವರನ್ನು ವಜಾ ಮಾಡಬೇಕು.
ಈ ಸಲುವಾಗಿ ನಡೆಸಲಾಗುತ್ತಿರುವ ಹೋರಾಟಗಳನ್ನು ಖಂಡಿಸಿ ನಾನಾ ರಾಜಕೀಯ ಮುಖಂಡರುಗಳು, ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡುತ್ತಿರುವುದರ ಬಗ್ಗೆ ಸಂಘಟನೆಯ ಸ್ಪಷ್ಟನೆ ಹೀಗಿದೆ. ಕನ್ನಡ ಪರ ಹೋರಾಟಗಾರರನ್ನು ಭಯೋತ್ಪಾದಕರೆಂದು ಬಣ್ಣಿಸುವುದಾಗಲೀ, ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದನ್ನಾಗಲಿ ನಾವು ತೀವ್ರವಾಗಿ ಖಂಡಿಸುತ್ತೇವೆ. ನಾಡಿನಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗಳು ಕುಸಿದು ಹೋಗಿರುವಂತೆ ಭಾಸವಾಗಿದೆ ಎಂದೂ ಪೊಲೀಸ್ ಇಲಾಖೆ ಭಾವಿಸಿರುವುದಾಗಿ ವರದಿಯಾಗಿವೆ. ನಿಜವಾದ ಸಮಸ್ಯೆಯ ಮೂಲವೆಲ್ಲಿದೆ ಅದನ್ನು ಬಗೆಹರಿಸದೆ ಕನ್ನಡಿಗರ ಈ ಹೋರಾಟವನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆ ಮುಂದಾದರೆ ಅದು ಸಮಸ್ಯೆಯನ್ನು ಬಗೆಹರಿಸುವ ಬದಲು ಮತ್ತಷ್ಟು ಬಿಗಡಾಯಿಸೀತು ಅಷ್ಟೆ.
ಕನ್ನಡಿಗರ ಮೇಲಾಗುತ್ತಿರುವ ಈ ದೌರ್ಜನ್ಯ ಇಂದಿನದ್ದಲ್ಲ. ಸ್ವತಂತ್ರ ಬಂದಾಗಿನಿಂದಲೂ ಕನ್ನಡ ಕರ್ನಾಟಕಗಳ ಬಗ್ಗೆ ಕೇಂದ್ರ ಸರ್ಕಾರಗಳು ತೋರುತ್ತಿರುವ ತಾರತಮ್ಯದ ಧೋರಣೆ ಇಂದಿಗೂ ಮುಂದುವರೆದಿದೆ. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶಗಳನ್ನು ಅಂದಿನಿಂದಲೂ ನಿರಾಕರಿಸಲಾಗುತ್ತಿದೆ ಮತ್ತು ಅದಕ್ಕೆ ಹಿಂದಿ ಹೇರಿಕೆಯ ಅಸ್ತ್ರವನ್ನು ಬಳಸಲಾಗುತ್ತಿದೆ. ೬೦ ವರ್ಷಗಳಿಂದ ನಿರಂತರವಾಗಿ ನಡೆಸಲಾಗುತ್ತಿರುವ ಹಿಂದಿ ಹೇರಿಕೆಗೆ ಕೊನೆಯಿಲ್ಲವಾಗಿದೆ. ನಮ್ಮ ನಾಡಿನಲ್ಲಿ ಆರಂಭಿಸಲಾದ ಸಾರ್ವಜನಿಕ ವಲಯದ ಉದ್ದಿಮೆಗಳಾದ ಬಿ.ಇ.ಎಲ್, ಐ.ಟಿ.ಐ. ಎಚ್.ಏ.ಎಲ್ ಮುಂತಾದವುಗಳಲ್ಲಿನ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ ಅನ್ಯಾಯ, ಇದರಿಂದಾದ ವಲಸೆ ಸಮಸ್ಯೆಗಳು, ಅದು ಕನ್ನಡಿಗರ ಬದುಕು, ಸಂಸ್ಕೃತಿಗಳ ಮೇಲೆ ಬೀರಿರುವ ಪರಿಣಾಮಗಳನ್ನು ಬಲ್ಲೆವಷ್ಟೆ. ಕೇಂದ್ರ ಸರ್ಕಾರದ ಯಾವುದೇ ಸಂಸ್ಥೆಗಳಲ್ಲಿ ನೋಡಿದರೂ ಕನ್ನಡಿಗ ಅಲ್ಪಸಂಖ್ಯಾತ. ನಮ್ಮ ನಾಡಿನ ಇಲಾಖೆಗಳು, ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರವೆನ್ನುತ್ತಾ ಕನ್ನಡದ ಜೊತೆಗೆ ಹಿಂದಿ, ಇಂಗ್ಲಿಷ್ ಜಾರಿಗೆ ತಂದವರು ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಕನ್ನಡಕ್ಕೇ ಜಾಗವಿಲ್ಲದಂತೆ ಮಾಡಿದರು. ಯಾವ ಸ್ವಾತಂತ್ರ ದೊರೆಯುವುದರಿಂದ ತನ್ನ ಗುಲಾಮಗಿರಿ ಕಳೆಯುವುದು ಎಂದು ಕನ್ನಡಿಗ ಭಾವಿಸಿದ್ದನೋ ಅದು ಹುಸಿಯಾಗಿ ಹೊಸದಾದ ಹಿಂದಿ ಗುಲಾಮಗಿರಿಗೆ ಇಂದು ಕನ್ನಡನಾಡು ಬಲಿಯಾಗಬೇಕಾಗಿದೆ. ಇದೀಗ ಕೇಂದ್ರ ಸರ್ಕಾರಿ ಉದ್ಯೋಗ ಬೇಕೆಂದರೆ, ಅದು ಕನ್ನಡ ನಾಡಿನಲ್ಲೇ ಮಾಡುವ ಕೆಲಸವಾಗಿದ್ದರೂ, ನಿಮ್ಮ ಅರ್ಜಿಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿಯೇ ಬರೆಯಿರಿ, ಇಲ್ಲದಿದ್ದರೆ ಅರ್ಜಿಯನ್ನು ಕಸದಬುಟ್ಟಿಗೆ ಎಸೆಯಲಾಗುತ್ತದೆ ಎಂಬ ನಿಯಮ ಹೇರುವ ಹಂತಕ್ಕೆ ಪರಿಸ್ಥಿತಿ ಬಂದು ತಲುಪಿದೆ. ನಮ್ಮ ನಾಡಿನಲ್ಲಿಯೇ ನಮ್ಮ ಬದುಕುವ ಹಕ್ಕನ್ನು ಕಸಿಯುವುದರ ವಿರುದ್ಧ ಹೋರಾಡುವ ಪರಿಸ್ಥಿತಿ ನಮಗೆದುರಾಗಿದೆ. ನಮ್ಮ ಹಕ್ಕುಗಳಿಗಾಗಿ ನಾವು ದನಿ ಎತ್ತಲೇಬೇಕಾಗಿದೆ. ಕನ್ನಡ ನಾಡಿನಲ್ಲಿ ತಲೆಯೆತ್ತುವ ಯಾವುದೆ ಇಲಾಖೆ, ಸಂಸ್ಥೆಯು ನಮ್ಮ ಜನಕ್ಕೆ ಉದ್ಯೋಗ ಕೊಡಲು ನಿರಾಕರಿಸುವುದಾದರೆ ಅಂತಹ ವ್ಯವಸ್ಥೆಯ ವಿರುದ್ಧ ದನಿ ಎತ್ತುವುದು ನಮ್ಮ ಹಕ್ಕು.
ಯಾವ ಒಕ್ಕೂಟ ವ್ಯವಸ್ಥೆ ಎಲ್ಲರನ್ನೂ ಸಮಾನವಾಗಿ ಕಾಣಬೇಕೋ ಅದು ಹಿಂದಿ ಭಾಷಿಕರಿಗೆ ಸಲ್ಲದ ಅನುಕೂಲ ಮಾಡಿಕೊಡುತ್ತಿರುವದನ್ನು ಹೇಗೆ ಸಹಿಸಲಾದೀತು? ಈ ದೇಶದ ಸಂವಿಧಾನ, ಆಡಳಿತ, ಕಾಯ್ದೆ, ಕಾನೂನುಗಳಿರುವುದು ಎಲ್ಲ ಜನರ ಹಿತ ಕಾಯಲೆಂದು. ಆದರೆ ಅವುಗಳೆಲ್ಲಾ ಒಂದು ಭಾಷಿಕ ಸಮುದಾಯಕ್ಕೆ ಪೂರಕವಾಗುವಂತೆ ಇದ್ದು ಅದನ್ನು ಪಾಲಿಸುವುದರಿಂದ ನಮ್ಮ ಜನರಿಗೆ ಕೆಡುಕಾಗುವುದಾದರೆ ಅಂತಹ ವ್ಯವಸ್ಥೆಯನ್ನು ಬದಲಿಸುವುದೇ ಸರಿಯಾದ ದಾರಿಯಾಗಿದೆ. ಯಾವ ಒಕ್ಕೂಟ ವ್ಯವಸ್ಥೆ, ಒಂದು ಭಾಷೆಯನ್ನು ಉಳಿದೆಲ್ಲ ಭಾಷೆಗಳಿಗಿಂತ ಮೇಲಾಗಿ ಪರಿಗಣಿಸುತ್ತದೆಯೋ ಅದರಲ್ಲಿ ಉಳಿದ ಭಾಷೆಗಳ, ಭಾಷಿಕರ ಬದುಕಿಗೆ ಹಾಗೂ ಏಳಿಗೆಗೆ ಯಾವ ಭದ್ರತೆ ಮತ್ತು ಭರವಸೆಗಳು ಸಿಗಲು ಸಾಧ್ಯ? ಹೀಗಾಗಿ ನಮ್ಮ ನಾಡು, ನುಡಿ, ನಾಡಿಗರ ಅಸ್ತಿತ್ವ ಮತ್ತು ಏಳಿಗೆಗಳಿಗೆ ಧಕ್ಕೆ ಬಂದೊದಗಿರುವಾಗ ನಮ್ಮ ಹಕ್ಕುಗಳಿಗಾಗಿ ನಾವು ಪ್ರತಿಭಟನೆ ಮಾಡುವುದು ಸಹಜವೂ ಸೂಕ್ತವೂ ಆದುದಾಗಿದೆ.
ಯಾವ ಸಂಸದರು ನಮ್ಮಿಂದ ಆರಿಸಿ ಹೋಗಿ ನಮ್ಮ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಬೇಕಾಗಿದೆಯೋ, ಅಂತಹವರುಗಳು ನಮ್ಮ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ನಾಚಿಕೆ ಬಿಟ್ಟು ಸುಮ್ಮನಿರುವುದು ನಮ್ಮ ನಾಡಿನ ದೌರ್ಭಾಗ್ಯವಾಗಿದೆ. ರಾಜ್ಯಕ್ಕೆ ಅನ್ಯಾಯವಾದಾಗಲೆಲ್ಲಾ ಇವರುಗಳು ಒಂದಾಗಿ ಹೋರಾಡಿ ನ್ಯಾಯ ಒದಗಿಸಿಕೊಟ್ಟಿದ್ದರೆ ಇಂದು ಕನ್ನಡಿಗ ಬೀದಿಗಿಳಿಯುವ ಪರಿಸ್ಥಿತಿಯೇ ಹುಟ್ಟುತ್ತಿರಲಿಲ್ಲ. ಕೃಷ್ಣಾ ನೆರೆಯ ಪರಿಹಾರ ವಿತರಣೆ, ಕೃಷ್ಣಾ ನೀರಾವರಿ, ಕಾವೇರಿ ನದಿ ನೀರು ಹಂಚಿಕೆ, ಮಹದಾಯಿ ಯೋಜನೆ, ಬೆಳಗಾವಿ ಕಾಸರಗೋಡು ಗಡಿ ಸಮಸ್ಯೆಗಳು, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿಕೆ, ಪ್ರತಿ ಮುಂಗಡಪತ್ರದಲ್ಲಿ ಕನ್ನಡನಾಡಿಗೆ ಹಂಚಿಕೆಯಾಗುವ ಯೋಜನೆಗಳು... ಯಾವುದರ ಬಗ್ಗೆಯೂ ನಾಡಿಗರ ಆಶಯಗಳಿಗೆ ಸ್ಪಂದಿಸದ ಸಂಸದರ ನಿರ್ವಿಣ್ಣತೆಯಿಂದ
ರೋಸಿದ ಕನ್ನಡಿಗ ಬೀದಿಗಿಳಿದಿದ್ದಾನೆ. ನಾಡಿನ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಬಗೆಹರಿಸುವುದರಲ್ಲಿ ಎಡವಿರುವುದರಿಂದ ಕನ್ನಡಿಗ ಎದ್ದಿದ್ದಾನೆ. ನಮ್ಮ ಸಂಸದರು ನಮ್ಮ ಸಮಸ್ಯೆಗಳನ್ನು ಬಗೆಹರಿಸಲು, ನಮಗಾದ ಅಪಮಾನಗಳನ್ನು ಇಲ್ಲವಾಗಿಸಲು ಮುಂದಾಗಲಿ. ಆಗ ಹೋರಾಟದ ಅಗತ್ಯವಾದರೂ ಎಲ್ಲಿರುತ್ತದೆ?
ಪೊಲೀಸ್ ಅಧಿಕಾರಿಗಳು ಹೋರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ ಎನ್ನುವ ಮೂಲಕ ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಬಂಧಿತರ ವಿರುದ್ಧ ನಾಚಿಕೆಯಿಲ್ಲದೆ ಡಕಾಯಿತಿಯಂತಹ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲು ಹೇಸದ ಇವರು ಇನ್ಯಾವ ಕಠಿಣ ಕ್ರಮದ ಬೆದರಿಕೆ ಹಾಕುತ್ತಿದ್ದಾರೆ?
ಇದಕ್ಕೆ ಮುನ್ನ ಈಗ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವವರು ಯಾರು? ಯಾರಿಂದ ಕಾನೂನು ಭಂಗವಾಗಿದೆ ಎಂಬುದನ್ನು ಅರಿತು ಕ್ರಮ ತೆಗೆದುಕೊಳ್ಳಲಿ. ಕೇಂದ್ರ ಸಚಿವರಾದರೇನು? ಯಾರಾದರೇನು? ಕನ್ನಡಿಗರನ್ನು ಕೊಳಕು ಜನರೆಂದು ದೂಷಿಸುವುದು ಜನಾಂಗ ನಿಂದನೆಯಲ್ಲವೇ? ಇದು ಅನಗತ್ಯವಾಗಿ ಪ್ರಚೋದನೆ ನೀಡುವ ಅಪರಾಧವಾಗುವುದಿಲ್ಲವೇ? ಹೀಗೆ ತಮ್ಮ ಬೇಜವಾಬ್ದಾರಿಯುತ ಹೇಳಿಕೆಯಿಂದ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ಲಾಲೂ ಪ್ರಸಾದ್ ಯಾದವ್ ಅವರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವುದೋ ಅಥವಾ ಇಂಥ ಉದ್ಧಟತನವನ್ನು ಪ್ರತಿಭಟಿಸಿ ಕ್ಷಮಾಯಾಚನೆಗೆ ಒತ್ತಾಯಿಸಿ ಹೋರಾಡುತ್ತಿರುವುದರಿಂದ ಧಕ್ಕೆಯೋ? ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ, ಕನ್ನಡಿಗರನ್ನು ಜನಾಂಗೀಯ ನಿಂದನೆ ಮಾಡುತ್ತಿರುವ ವ್ಯಕ್ತಿಯೊಬ್ಬರು ಕೇಂದ್ರ ಸಚಿವರಾಗಿರುವಾಗ ‘ರೇಲ್ವೆಯಲ್ಲಿ ಕನ್ನಡಿಗರ ಉದ್ಯೋಗದ ನ್ಯಾಯಯುತವಾದ ಹಕ್ಕನ್ನು ಕಸಿಯಲಾಗುವುದು ಖಚಿತ’ ಎನ್ನುವ ಭಯವನ್ನು ಕನ್ನಡಿಗರ ಮನದಲ್ಲಿ ಹುಟ್ಟು ಹಾಕಿರುವ ಸಚಿವರ ನಡವಳಿಕೆ ಭಯೋತ್ಪಾದನೆಯ ಕ್ರಮವಲ್ಲವೇ?
ನಮ್ಮ ನಾಡಿನ ರಾಜಕೀಯ ಪಕ್ಷಗಳು, ಜನ ಪ್ರತಿನಿಧಿಗಳು ನಡೆದುಕೊಳ್ಳುತ್ತಿರುವ ಬಗೆಯನ್ನು ನೋಡಿದರೆ ಯಾವ ಕನ್ನಡಿಗನ ರಕ್ತ ಕುದಿಯದು? ಜಾತ್ಯಾತೀತ ಜನತಾ ದಳದವರು ಒಮ್ಮೆ ಲಾಲೂವನ್ನು ಬಯ್ದು, ಮತ್ತೊಮ್ಮೆ ಅವರನ್ನು ದೆಹಲಿಯಲ್ಲಿ ಭೆಟ್ಟಿಯಾಗಿ ಮರುಕ್ಷಣವೇ ಸಚಿವರು ಅಂಥಾ ಹೇಳಿಕೆಯನ್ನೇ ನೀಡಿಲ್ಲ ಎಂದರೆ, ಭಾರತೀಯ ಜನತಾ ಪಕ್ಷದವರು ಲಾಲೂ ಅವರ ಹೇಳಿಕೆಗೆ ಸಂಬಂಧವೇ ಇರದಂತೆ ಅಧಿಕಾರದ ಗದ್ದುಗೆಯೇರಲು ಚುನಾವಣೆ ಬೇಗ ನಡೆಸಿ ಎನ್ನುವ ಜನಾಕ್ರೋಶ ಯಾತ್ರೆಯಲ್ಲಿ ವ್ಯಸ್ತರಾಗಿದ್ದಾರೆ. ಕಾಂಗ್ರೆಸ್ ಎಂಬ ಲಾಲೂ ಸಹವರ್ತಿಗಳು ಹೇಳಿಕೆ ಕೊಡಲೇಬೇಕೆಂಬ ಅನಿವಾರ್ಯತೆಗೆ ಸಿಲುಕಿ, ಚಿವುಟಿದರೆ ಎಲ್ಲಿ ಸರ್ಕಾರವೇ ಬಿದ್ದು ಹೋಗುತ್ತದೋ ಎಂಬ ಅಳುಕಿನಿಂದ ಮಾತನ್ನಾಡುತ್ತಿದ್ದಾರೆ. ಇನ್ನಾರು ಕನ್ನಡಿಗರ ಪರವಾಗಿ ದನಿಯೆತ್ತುವವರು? ಇನ್ನಾರು ನಮ್ಮ ಅಪಮಾನವನ್ನು ಅಳಿಸುವವರು? ಎಂಬ ಆಕ್ರೋಶದಿಂದಾಗಿ ಇಂದು ಕನ್ನಡಿಗ ಬೀದಿಗಿಳಿದಿದ್ದಾನೆ. ಕನ್ನಡಿಗರ ಸಹನಶೀಲತೆಯನ್ನು ಮತ್ತೆಷ್ಟು ದುರುಪಯೋಗ ಪಡಿಸಿಕೊಳ್ಳುವುದನ್ನು ಕನ್ನಡಿಗರು ಸಹಿಸಬೇಕು? ಇನ್ನೆಂತೆಹ ಅಪಮಾನವನ್ನು ಸಹಿಸಬೇಕು? ಇನ್ನೆಷ್ಟು ವಲಸಿಗರಿಗೆ ರತ್ನಗಂಬಳಿ ಹಾಕಿ ನಮ್ಮ ಮಕ್ಕಳ ಕೆಲಸವನ್ನು ಒಪ್ಪಿಸಬೇಕು? ಇನ್ನೆಷ್ಟು?
ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡಿಗರ ಸ್ವಾಭಿಮಾನದ ಈ ಹೋರಾಟದಲ್ಲಿ ಯಾವ ಬೆದರಿಕೆಗೂ ಅಳುಕದೆ ಮುನ್ನುಗ್ಗಲಿದೆ. ಕಾನೂನು ಭಂಗವೂ ಚಳವಳಿಯ ಭಾಗವೇ ಆಗಿದೆ. ಉಗ್ರ ಸ್ವರೂಪ ಪಡೆಯುತ್ತಿರುವ ಈ ಹೋರಾಟದ ಮೂಲಕ ಕಾನೂನು ಭಂಗವಾಗುವುದಾದರೆ ಖಂಡಿತವಾಗಿ ಅದರ ಪರಿಣಾಮಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಜನಾಂಗೀಯ ನಿಂದನೆಯಂತಹ ಅಪಮಾನವನ್ನು ಸಹಿಸುವುದಕಿಂತ ಹೋರಾಡಿ ಜೈಲು ಸೇರುವುದು ಲೇಸು. ಬೂಟು, ಲಾಟಿ ಬಂದೂಕುಗಳಿಗೆ ಕನ್ನಡಿಗ ಹೆದರುವ ಕಾಲ ಮುಗಿದಿದೆ. ಹದಿನಾರು ಲಕ್ಷ ಸದಸ್ಯರಿರುವ ಸಂಘಟನೆಯ ಕೊನೆಯ ಕಾರ್ಯಕರ್ತ ಜೈಲುಪಾಲಾಗುವವರೆಗೂ ಈ ಹೋರಾಟ ನಡೆಯಲಿದೆ. ಕೇಂದ್ರ ಸಚಿವರಾದ ಲಾಲು ಪ್ರಸಾದ್ ಯಾದವ್ ಅವರು ತಮ್ಮ ಪ್ರಚೋದಕ ಹೇಳಿಕೆಗಾಗಿ ಕನ್ನಡಿಗರ ಕ್ಷಮೆ ಕೇಳಬೇಕು ಇಲ್ಲವೇ ಕೇಂದ್ರ ಸಂಪುಟದಿಂದ ಅವರನ್ನು ವಜಾ ಮಾಡಬೇಕು. ರೇಲ್ವೆ ನೇಮಕಾತಿಯಲ್ಲಿನ ಹುದ್ದೆಗಳು ಕನ್ನಡಿಗರ ಪಾಲಾಗಬೇಕು. ಅಷ್ಟೆ.
ಈ ಹೋರಾಟದಲ್ಲಿ ನಾಡಿನ ಎಲ್ಲ ಕನ್ನಡ ಬಂಧುಗಳು ಕರ್ನಾಟಕ ರಕ್ಷಣಾ ವೇದಿಕೆಯನ್ನು ಬೆಂಬಲಿಸಿ ನಮ್ಮೊಂದಿಗೆ ಕೈಜೋಡಿಸಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೇವೆ.
ವಂದನೆಗಳು,
ಟಿ.ಏ. ನಾರಾಯಣ ಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
|