Karnataka Rashana Vedike
Kuvempu
ico_adhyaksharalEkhaniyinda3.jpg
kvrblog.jpg
Sangatane.jpg

ಐ.ಟಿ ಕಂಪನಿಗಳ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ

ಕ.ರ.ವೇ ಹೋರಾಟಗಳು
ಮಾನ್ಯರೇ,

ವಿಷಯ : ಕನ್ನಡನಾಡಿನಲ್ಲಿ ಕನ್ನಡ ಹಾಗೂ ಕನ್ನಡಿಗರನ್ನು ಕಡೆಗಣಿಸುವ/ ಹೀಯಾಳಿಸುವವರ ಬಗ್ಗೆ ಪ್ರತಿಭಟಿಸುವ ಕುರಿತು ಪತ್ರಿಕಾ ಹೇಳಿಕೆ

ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿತ್ತಿರುವ ವಲಸೆಯಿಂದ ಕನ್ನಡಿಗರ ಉದ್ಯೋಗ, ಬದುಕು, ಭಾಷೆ ಮತ್ತು ಸಂಸ್ಕೃತಿಗಳಿಗೆ ಧಕ್ಕೆಯೊದಗುತ್ತಿರುವ ಜೊತೆಯಲ್ಲೇ ಇದೀಗ ಕನ್ನಡಿಗರನ್ನು ಹೀಯಾಳಿಸುವ ಉದ್ಧಟತನವೂ ವ್ಯಕ್ತವಾಗುತ್ತಿರುವುದು ನೋವಿನ ವಿಷಯವಾಗಿದೆ.
ಬೆಂಗಳೂರಿನ ಒಂದು ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಸ್ಯಾಸ್ಕೆನ್ ಎಂಬಲ್ಲಿ ನಡೆಯುತ್ತಿದ್ದ ಈ ಹೀಯಾಳಿಕೆ/ ದಬ್ಬಾಳಿಕೆಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಪ್ರತಿಭಟಿಸುತ್ತದೆ. ಇಂತಹ ಘಟನೆಗಳಿಗೆ ಆಯಾ ಸಂಸ್ಥೆಗಳೇ ನೇರ ಹೊಣೆ ಹೊರಬೇಕಾಗಿದೆ.
ಇದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಕೂಡಲೇ ಜನಾಂಗೀಯ ನಿಂದನೆಯ ಆರೋಪ ಹೊರಿಸಿ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಸಂಸ್ಥೆಯಿಂದ ವಜಾಗೊಳಿಸಬೇಕು. ಇಡೀ ಘಟನೆಯ ಹೊಣೆಗಾರಿಕೆ ಸಂಸ್ಥೆಯದ್ದಾದ್ದರಿಂದ ಸಂಸ್ಥೆಯು ಸಾರ್ವಜನಿಕವಾಗಿ ಕ್ಷಮೆ ಕೋರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಇಂತಹ ಅಹಿತಕರ ಘಟನೆಗಳಿಗೆ ಇಲ್ಲಿನ ಸಂಸ್ಥೆಗಳು ನೇರ ಹೊಣೆಯಾಗಿರುವುದಕ್ಕೆ ಅವುಗಳು ನಡೆದುಕೊಳ್ಳುತ್ತಿರುವ ರೀತಿಗಳು, ಅನುಸರಿಸುತ್ತಿರುವ ನೀತಿಗಳು ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಕರ್ನಾಟಕ ರಕ್ಷಣಾ ವೇದಿಕೆಯು ನಿಕಟವಾಗಿ ಗಮನಿಸುತ್ತಿದ್ದು, ಈ ಕೆಳಕಂಡ ಘಟನೆಗಳು/ ದೂರುಗಳು ಗೋಚರಿಸುತ್ತಿವೆ.
- ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕೆಲಸ ನೀಡುವಾಗ ಕಡೆಗಣಿಸಲಾಗುತ್ತಿದೆ.
- ಭಡ್ತಿ ನೀಡುವಾಗಲೂ ಕನ್ನಡಿಗರನ್ನು ಕಡೆಗಣಿಸಲಾಗುತ್ತಿರುವ ಬಗ್ಗೆ ದೂರುಗಳಿವೆ.
- ಹೊರಗುತ್ತಿಗೆ ನೀಡುವ ಸಂದರ್ಭದಲ್ಲೂ ಪರಭಾಷಿಕರಿಗೆ ನೀಡುವ ಸಂಪ್ರದಾಯಗಳನ್ನು ಪಾಲಿಸಲಾಗುತ್ತಿದೆ.
- ಕಾಲೇಜುಗಳಿಗೆ ಕ್ಯಾಂಪಸ್ ಸಂದರ್ಶನಕ್ಕೆ ಹೋಗುವ ಸಂಸ್ಥೆಗಳು ಕರ್ನಾಟಕದ ಕಾಲೇಜುಗಳನ್ನು ಬಿಟ್ಟು ಹೊರರಾಜ್ಯದ ಕಾಲೇಜುಗಳಿಗೆ ಹೋಗುತ್ತಿವೆ.
- ಕೆಲಸಂಸ್ಥೆಗಳಲ್ಲಿ ಕನ್ನಡಿಗರ ಯುಗಾದಿಗೆ, ಸಂಕ್ರಾಂತಿ, ಕನ್ನಡ ರಾಜ್ಯೋತ್ಸವಗಳಿಗೆ ರಜೆ ನೀಡುತ್ತಿಲ್ಲ.
- ಕಛೇರಿಗಳಲ್ಲಿ ಇಂಗ್ಲಿಷ್ ಭಾಷೆಯಲ್ಲೇ ಗುಂಪು ಚರ್ಚೆ ಮಾಡಬೇಕೆನ್ನುವ ನಿಯಮವಿದೆ ಎನ್ನುವ ಸಂಸ್ಥೆಗಳು ಕನ್ನಡದ ವಿಷಯಕ್ಕೆ ಮಾತ್ರಾ ಅದನ್ನು ಅನ್ವಯಿಸುತ್ತಿದ್ದು, ಇನ್ನಿತರ ಭಾಷೆಗಳಲ್ಲಿ (ಹಿಂದಿ) ಚರ್ಚೆ ನಡೆಯುವುದಕ್ಕೆ ಅನುವು ಮಾಡಿಕೊಡುತ್ತಿವೆ.
- ಸಂಸ್ಥೆಗಳ ವಾಹನಗಳಲ್ಲಿ ಕಡ್ಡಾಯವಾಗಿ ಹಿಂದಿ ಹಾಡುಗಳನ್ನು ಮಾತ್ರಾ ಹಾಕಬೇಕು ಎನ್ನುವ ಅದೇಶಗಳನ್ನು ನೀಡಿ, ಕನ್ನಡ ಹಾಡುಗಳನ್ನು ಕೇಳಬಯಸುವ ಉದ್ಯೋಗಿಗಳ ಬಾಯಿ ಮುಚ್ಚಿಸಲಾಗುತ್ತಿದೆ.
- ಸಂಸ್ಥೆಯಲ್ಲಿ ನಡೆಸುವ ಕಾರ್ಯಕ್ರಮಗಳನ್ನು ಹಿಂದಿಯಲ್ಲಿ ನಡೆಸುವುದನ್ನು ಕಡ್ಡಾಯ ಮಾಡಿದ ಸಂಸ್ಥೆಗಳೂ ಇವೆ ಎಂದರೆ ಅಚ್ಚರಿಯಾಗುತ್ತದೆ.
- ಕೆಲಸಂಸ್ಥೆಗಳು ತಮ್ಮತಮಿಳು ನಾಡಿನ ಶಾಖೆಯಲ್ಲಿ ತಮಿಳು ಸಂಗೀತ ಕಾರ್ಯಕ್ರಮ ಏರ್ಪಾಡು ಮಾಡುವವರು ಕನ್ನಡ ನಾಡಿನಲ್ಲಿ ಮಾತ್ರ ಹಿಂದಿ ಗಾಯಕರನ್ನು ಕರೆಸುತ್ತಿದ್ದಾರೆ.
- ಕನ್ನಡದ ಕಾರ್ಯಕ್ರಮಗಳಿಗೆ ಇಲ್ಲದ ತೊಡರುಗಾಲು ಹಾಕುತ್ತಿರುವ, ರಾಜ್ಯೋತ್ಸವದಂತಹ ಕಾರ್ಯಕ್ರಮಕ್ಕೂ ಅವಕಾಶ ನೀಡದ ಸಂಸ್ಥೆಗಳ ನಿದರ್ಶನವೂ ಇವೆ.

ಯಾವುದೇ ಸಂಸ್ಥೆ ತಾನು ಕೆಲಸ ನಿರ್ವಹಿಸುವ ನೆಲದ ಬಗ್ಗೆ, ನೆಲದ ಸಂಸ್ಕೃತಿಯ ಬಗ್ಗೆ, ನೆಲದ ಜನರ ಬಗ್ಗೆ ಇಂತಹ ನಿರ್ಲಕ್ಷ್ಯದ ಧೋರಣೆ ಹೊಂದಿದ್ದರೆ ಅಲ್ಲಿನ ವಲಸಿಗ ಕೆಲಸಗಾರರಿಂದ ಇನ್ನೆಂತಹ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯ? ಇದೀಗ ಸ್ಯಾಸ್ಕೆನ್ ಸಂಸ್ಥೆಯಲ್ಲಿ ನಡೆದ ಘಟನೆ, ಸಮಸ್ಯೆಯ ಹೊರಮುಖ ಮಾತ್ರವಾಗಿದ್ದು ನಿಜವಾದ ಮೂಲ ಕಾರಣ ಈ ಸಂಸ್ಥೆಗಳ ಕನ್ನಡ ವಿರೋಧಿ ಧೋರಣೆಯಾಗಿದೆ.
ನಾಡಿನಲ್ಲಿ ಬಂಡವಾಳ ಹೂಡುವ ಸಂಸ್ಥೆಗಳು ಈ ನೆಲದ ಮಕ್ಕಳನ್ನು ಕಡೆಗಣಿಸಿ ಹೊರರಾಜ್ಯಗಳಿಂದ ಕೆಲಸಗಾರರನ್ನು ಕರೆತರುವುದರ ಜೊತೆಗೆ ಅವರಿಗೆ ಈ ನಾಡಿನ ಭಾಷೆ, ಸಂಸ್ಕೃತಿಗಳ ಬಗ್ಗೆ ಯಾವ ತೆರನಾದ ಪರಿಚಯ/ ತರಬೇತಿ ನೀಡದಿರುವುದು ಅಕ್ಷಮ್ಯವಾಗಿದೆ. ಇಂತಹ ವ್ಯಕ್ತಿ/ ಸಂಸ್ಥೆಗಳ ವಿರುದ್ಧ ಹೋರಾಟ ಮಾಡುವುದು ಕರ್ನಾಟಕ ರಕ್ಷಣಾ ವೇದಿಕೆಗೆ ಅನಿವಾರ್ಯವಾಗಿದೆ.

- ನಾಡಿನ ಎಲ್ಲ ಸಂಸ್ಥೆಗಳು ತಮ್ಮಲ್ಲಿನ ಎಲ್ಲ ತೆರನಾದ ಕೆಲಸಗಳನ್ನು ಕನ್ನಡಿಗರಿಗೇ ಆದ್ಯತೆಯ ಮೇರೆಗೆ ನೀಡಬೇಕು.
- ಹೊರರಾಜ್ಯಗಳಿಂದ ಕರೆತರುವ ಉದ್ಯೋಗಿಗಳಿಗೆ ನಮ್ಮ ಭಾಷೆಯನ್ನು ಸಂಸ್ಥೆಯ ವತಿಯಿಂದ ಕಲಿಸುವ ಏರ್ಪಾಟಾಗಬೇಕು
- ಪರಭಾಷಿಕರಿಗೆ ಕನ್ನಡ ನೆಲದ ಸಂಸ್ಕೃತಿ, ಆಚರಣೆ, ಹಿರಿಮೆಗಳನ್ನು ಪರಿಚಯಿಸಬೇಕು.
- ನಾಡಿನ ಹಿತಕ್ಕೆ ಮಾರಕವಾಗಿ ನಡೆಯುವ ಕೆಲಸಗಾರರನ್ನು ಸಂಸ್ಥೆ ವಜಾ ಮಾಡಬೇಕು.
- ಸಂಸ್ಥೆಗಳಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಗಳನ್ನು ಪರಿಚಯಿಸುವ, ಆಚರಣೆಗಳನ್ನು ಗೌರವಿಸುವ ರೀತಿನೀತಿಗಳನ್ನು ಜಾರಿಗೆ ತರಬೇಕು

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಮಾಡಲು ಯತ್ನಿಸುವ ವ್ಯಕ್ತಿ/ ಸಂಸ್ಥೆ ಎಷ್ಟೇ ದೊಡ್ಡದಾಗಿದ್ದರೂ, ಬಲಿಷ್ಟವಾಗಿದ್ದರೂ ಕರ್ನಾಟಕ ರಕ್ಷಣಾ ವೇದಿಕೆಯು ಅವುಗಳ ವಿರುದ್ಧ ಉಗ್ರ ಸ್ವರೂಪದ ಹೋರಾಟ ನಡೆಸುವುದೆಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ.

ವಂದನೆಗಳು

ಟಿ.ಏ.ನಾರಾಯಣ ಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ