Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

೨೦೦೮ ರ ವಿಧಾನಸಭಾ ಚುನಾವಣೆ - ರಾಜಕೀಯ ಪಕ್ಷಗಳಿಂದ ಕನ್ನಡಿಗರ ಅಪೇಕ್ಷೆ

ಸಂಘಟನೆ

ಕರ್ನಾಟಕ ರಾಜ್ಯ ವಿಧಾನಸಭಾ ಚುಣಾವಣೆ ಸನಿಹವಾಗುತ್ತಿದೆ. ಹೀಗಿರುವಾಗ, ಕನ್ನಡದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ, ಕನ್ನಡದಲ್ಲೇ ಪ್ರಚಾರ ಮಾಡುವ, ಚುಣಾವಣಾ ಪ್ರಚಾರ ಸಾಮಗ್ರಿಗಳನ್ನು ಕನ್ನಡದಲ್ಲಿಯೇ ಹಾಕುವ ಜವಾಬ್ದಾರಿ ರಾಜಕೀಯಪಕ್ಷಗಳದ್ದಾಗಿದೆ.ಈ ಜವಾಬ್ದಾರಿಯನ್ನು ನೆನಪಿಸಿ, ಕರ್ನಾಟಕದ ರಾಜಕೀಯ ಪಕ್ಷಗಳಾದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಭಾರತೀಯ ಜನತಾ ಪಕ್ಷ, ಜಾತ್ಯಾತೀತ ಜನತಾ ದಳ, ಸಂಯುಕ್ತ ಜನತಾ ದಳ, ಬಹುಜನಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳಿಗೆ ಕನ್ನಡಿಗರ ಅಪೇಕ್ಷೆಗಳ ಪಟ್ಟಿಯನ್ನು ನೀಡಿದೆವು:- ಪತ್ರ ಈ ಕೆಳಕಂಡಂತಿದೆ

ಮಾನ್ಯರೇ,

ವಿಷಯ: ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುಣಾವಣೆಯಲ್ಲಿ ತಮ್ಮ ಪಕ್ಷದವತಿಯಿಂದ ಕನ್ನಡೇತರಿಗೆ ಟಿಕೆಟ್ ನೀಡ ಬಾರದು ಹಾಗು ಚುಣಾವಣೆಯ ಪ್ರಚಾರ ಸಾಮಗ್ರಿಗಳನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮುದ್ರಿಸಿ, ಕನ್ನಡ ಭಾಷೆಯಲ್ಲಿಯೇ ಚುಣಾವಣಾ ಪ್ರಚಾರ ನಡೆಸುವಂತೆ ಒತ್ತಾಯಿಸಿ ನಮ್ಮ ವೇದಿಕೆ ಸಲ್ಲಿಸುತ್ತಿರುವ ಮನವಿ ಪತ್ರ.ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಾಡಿನಾದ್ಯಂತ ಇರುವ ನಮ್ಮ ವೇದಿಕೆಯ ಲಕ್ಷಾಂತರ ಕಾರ್ಯಕರ್ತರು ಹೋರಾಟ-ಚಿಂತನೆಗಳ ಮೂಲಕ ದುಡಿಯುತ್ತಿರುವುದು ತಮಗೆ ತಿಳಿದಿರುವ ವಿಚಾರವಾಗಿದೆ. ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುಣಾವಣೆಯಲ್ಲಿ ತಮ್ಮ ಪಕ್ಷ ಕನ್ನಡಿಗರ ಹಾಗು ಕರ್ನಾಟಕದ ಹಿತ ಕಾಯಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯು ಈ ಕೆಳಕಂಡ ವಿಷಯಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತದೆ.

ಪ್ರಮುಖ ಒತ್ತಾಯಗಳು

೧. ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ವಾಸಿಸುತ್ತಿರುವವರೆಲ್ಲರೂ ಕರ್ನಾಟಕ ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದು ಎಲ್ಲರು ಕನ್ನಡಿಗರಾಗಿರುವುದರಿಂದ ತಮ್ಮ ಪಕ್ಷದ ಪ್ರಚಾರ ಕಾರ್ಯ ಕನ್ನಡ ಭಾಷೆಯಲ್ಲಿ ನಡೆಯಬೇಕು.

೨. ವಿಧಾನಸಭಾ ಚುಣಾವಣೆಯಲ್ಲಿ ತಮ್ಮ ಪಕ್ಷ ಬಳಸುವ ಪ್ರಚಾರ ಸಾಮಗ್ರಿಗಳಾದ ಬ್ಯನರ್, ಗೋಡೆಬರಹ, ಕರಪತ್ರ, ಬಂಟಿಂಗ್ಸ್, ಜಾಹಿರಾತು ಫಲಕ ಹಾಗು ವಾಲ್ ಪೋಸ್ಟರ್ ಸೇರಿದಂತೆ ಪತ್ರಿಕೆಗಳಿಗೆ ನೀಡುವ ಜಾಹಿರಾತು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿರಬೇಕು.

೩. ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಪಕ್ಷಗಳ ಮುಖಂಡರಾಗಿರುವ ಕನ್ನಡಿಗರಿಗೆ ಟಿಕೇಟ್ ನೀಡಬೇಕು. ಯಾವುದೇ ಕಾರಣಕ್ಕು ಹೊರ ರಾಜ್ಯಗಳಿಂದ ವಲಸೆ ಬರುವ ಕನ್ನಡೇತರರರಿಗೆ ಟಿಕೇತ್ ನೀಡಿದರೆ ಅಂತಹ ಅಭ್ಯರ್ತಿಗಳ ವಿರುದ್ಧ ಹಾಗು ಟಿಕೇಟ್ ನೀಡಿದ ಪಕ್ಷದ ವಿರುದ್ಧ ಆಯಾ ಮತ ಕ್ಷೇತ್ರಗಳಲ್ಲಿ ಹಾಗು ರಾಜ್ಯಾದ್ಯಂತ ನಮ್ಮ ವೇದಿಕೆಯು ಹೋರಾಟ ನಡೆಸಲಿದೆ.

೪. ಚುಣಾವಣ ಪ್ರಚಾರ ಸಭೆಗಳಿಗೆ ಹೊರರಾಜ್ಯಗಳ ನಾಯಕರುಗಳು ಹಾಗು ಪರಭಾಷೆಯ ಚಲನಚಿತ್ರ ನಟ-ನಟಿಯರನು ಕರೆಸಿ ಭಾಷಣ ಮಾಡಿಸಿ ಕರ್ನಾಟಕದ ಸಂಸ್ಕೃತಿಯನ್ನು ಹಾಳುಮಾಡುವುದರ ಜೊತೆಗೆ ರಾಜ್ಯದ ರಾಜಕೀಯ ನಾಯಕರುಗಳಿಗೆ ಹಾಗು ಕನ್ನಡದ ಚಲನ ಚಿತ್ರ ನಟ-ನಟಿಯರಿಗೆ ಅವಮಾನ ಮಾಡಬಾರದು.

೫. ತಮ್ಮ ಪಕ್ಷದ ಚುಣಾವಣಾ ರ್‍ಯಾಲಿಗಳಲ್ಲಿ ಕನ್ನಡಿಗರ ಮದ್ಯೆ ವಿಷಬೀಜ ಬಿತ್ತಿ ಉತ್ತರ ಕರ್ನಾಟಕ, ಹಳೇ ಮೈಸೂರು, ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ ಹಾಗು ಹೈದರಾಬಾದ್ ಕರ್ನಾಟಕ, ಕೊಡಗು ಎಂದು ವಿಭಾಗಗಳಾಗಿ ಜನರಿಗೆ ತಪ್ಪು ಸಂದೇಶವನ್ನು ನೀಡದೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಬೇಕು.

೬. ಕನ್ನಡ ಭಾಷೆಯ ಬೆಳವಣಿಗೆ ಸೇರಿದಂತೆ ನೆಲ-ಜಲ, ಗಡಿ, ಉದ್ಯೋಗ, ಶಿಕ್ಷಣ, ವ್ಯಾಪಾರ ಸೇರಿದಂತೆ ರೈತ-ಕಾರ್ಮಿಕ, ವಿದ್ಯಾರ್ಥಿ ಯುವಜನರು, ಮಹಿಳೆಯರು - ಮಕ್ಕಳ ಶ್ರೇಯೋಭಿವೃದ್ದಿಗೆ ತಮ್ಮ ಪಕ್ಷದ ನಿಲುವನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.

೭. ತಮ್ಮ ಪಕ್ಷದಿಂದ ಸಮಾಜಘಾತುಕ ಶಕ್ತಿಗಳಿಗೆ ಹಾಗು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ವ್ಯಕ್ತಿಗಳಿಗೆ ಟಿಕೇಟ್ ನೀಡಬಾರದು.

೮. ರಾಜ್ಯದ ರೈತರ - ನೇಕಾರರ - ಉದ್ಯಮಿಗಳ ಆತ್ಮಹತ್ಯೆಯನ್ನು ತಡೆಯುವುದು ಸೇರಿದಂತೆ ರಾಜ್ಯದ ಖನಿಜ-ವನಿಜ ಸಂಪತ್ತಿನ ರಕ್ಷಣೆ ಸೇರಿದಂತೆ ಅಂತರಾಜ್ಯ ನದಿ ನೀರಿನ ವಿಚಾರವಾಗಿ ತಮ್ಮ ಪಕ್ಷದ ನಿಲುವನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.

೯. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ತಾನ ಮಾನ ಸೇರಿದಂತೆ ಕೇಂದ್ರ ಸರ್ಕಾರದ ವತಿಯಿಂದ ರಾಜ್ಯಾಭಿವೃದ್ದಿಗೆ ಸಂವಿಧಾನದತ್ತವಾಗಿ ದೊರಕಬೇಕಾಗಿರುವ ಅನುದಾನಗಳನ್ನು ತಮ್ಮ ಪಕ್ಷ ಯಾವರೀತಿ ಹೋರಾಟ ನಡೆಸಿ ರಾಜ್ಯಕ್ಕೆ ತರಲಿದೆ ಎಂಬುದನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.

೧೦. ವಲಸಿಗರ ಕೊಂಪೆಯಾಗುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ರಕ್ಷಣೆ ಸೇರಿದಂತೆ ಸರ್ಕಾರಿ ಹಾಗು ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ತಮ್ಮ ಪಕ್ಷ ತೆಗೆದುಕೊಳ್ಳುವ ಕ್ರಮವನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.

ವಿಶ್ವದ ಭೂಪಟದಲ್ಲಿ ತನ್ನದೇ ಆದ ಹೆಸರನ್ನು ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕ ರಾಜ್ಯದ ರಕ್ಷಣೆ ಹಾಗು ಅಭಿವೃದ್ಧಿಗೆ ಪ್ರತಿಯೊಬ್ಬರು ಶಕ್ತಿ ಮೀರಿ ದುಡಿಯಬೇಕಾಗಿರುವುದರಿಂದ ನಮ್ಮ ವೇದಿಕೆಯ ಬಹು ದೊಡ್ಡ ಕನಸಾದ'ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ' ಎಂಬ ಉದ್ದೇಶದ ಈಡೇರಿಕೆಗೆ ಪಣತೊಟ್ಟು ನಿಂತಿರುವ ನಮ್ಮ ವೇದಿಕೆಯ ಕನ್ನಡಿಗರ ಮತಗಳಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ತಮ್ಮ ಪಕ್ಷಕ್ಕೆ ರಾಜ್ಯದ ಹಿತಕ್ಕಾಗಿ ಮೇಲ್ಕಂಡ ಮನವಿ ಪತ್ರ ಸಲ್ಲಿಸುತ್ತಿದೆ.

ವಂದನೆಗಳೊಂದಿಗೆ,

(ಟಿ ಏ. ನಾರಾಯಣಗೌಡ) - ರಾಜ್ಯಾಧ್ಯಕ್ಷರು;
(ಜಯದೇವ ಪ್ರಸನ್ನ) - ರಾಜ್ಯ ಪ್ರಧಾನ ಕಾರ್ಯದರ್ಶಿ;
(ಆರ್. ಗುರುಮೂರ್ತಿ) - ರಾಜ್ಯ ಉಪಾಧ್ಯಕ್ಷರು;
(ದಾ.ಪಿ. ಅಂಜನಪ್ಪ) - ಅಧ್ಯಕ್ಷರು, ಬೆಂ. ನಗರ ಜಿಲ್ಲೆ;
(ಬಸವರಾಜ್ ಪಡಕೋಟಿ) - ಕಾರ್ಯಾಧ್ಯಕ್ಷರು ಬೆಂ. ನಗರ;
(ಕೆ.ಎಂ. ನಾಗೇಂದ್ರಬಾಬು) - ಅಧ್ಯಕ್ಷರು, ಬೆಂ ನಗರ;
(ಎ.ಎಸ್. ನಾಗರಾಜ್) - ಪ್ರಧಾನ ಕಾರ್ಯದರ್ಶಿ, ಬೆಂ.ನಗರ;
(ಸತೀಶ್ ಗೌಡ) - ಖಜಾಂಚಿ, ಬೆಂ.ನಗರ

 

ಸಂಘಟನೆ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ